ಕನ್ನಡಿಗರು ಕನ್ನಡ ಪುಸ್ತಕಗಳನ್ನು ಓದುವುದಿಲ್ಲ, ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆಯಿಲ್ಲ- ಇದು ಕನ್ನಡ ಸಾಹಿತ್ಯ ಮತ್ತು ಪ್ರಕಾಶನ ವಲಯದಲ್ಲಿ ಕೇಳಿಬರುತ್ತಿದ್ದ ಸಾಮಾನ್ಯ ದೂರು. ಆದರೆ, ಪುಸ್ತಕಗಳು ಓದುಗರನ್ನು ತಲುಪುವ ಮಾರ್ಗ ಬದಲಾದರೆ ಕನ್ನಡಿಗರು ಖಂಡಿತವಾಗಿಯೂ ಪುಸ್ತಕಗಳನ್ನು ಎದೆಗಪ್ಪಿಕೊಳ್ಳುತ್ತಾರೆ ಎಂಬುದನ್ನು ಕೇವಲ ನಾಲ್ಕು ವರ್ಷಗಳಲ್ಲಿ ಸಾಬೀತುಪಡಿಸಿದ ಸಂಸ್ಥೆ 'ವೀರಲೋಕ ಬುಕ್ಸ್'. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವೀರಕಪುತ್ರ ಗ್ರಾಮದ ಎಂ. ಶ್ರೀನಿವಾಸ್ ಅವರ ಕನಸಿನ ಕೂಸು ಈ 'ವೀರಲೋಕ ಬುಕ್ಸ್'. ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾಗಿ ನಾಡಿನಾದ್ಯಂತ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್, ಸಾಹಿತ್ಯ ಕ್ಷೇತ್ರಕ್ಕೆ ವೃತ್ತಿಪರ ಸ್ಪರ್ಶ ನೀಡುವ ಸಂಕಲ್ಪದೊಂದಿಗೆ 2022ರ ಜೂನ್ನಲ್ಲಿ ಬೆಂಗಳೂರಿನಲ್ಲಿ 'ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್' ಸ್ಥಾಪಿಸಿದರು.
2022ರ ಜೂನ್ 9ರಂದು ಖ್ಯಾತ ನಟರಾದ ಕಿಚ್ಚ ಸುದೀಪ್ ಮತ್ತು ರಮೇಶ್ ಅರವಿಂದ್ ಅವರ ಉಪಸ್ಥಿತಿಯಲ್ಲಿ ವೀರಲೋಕ ಲೋಕಾರ್ಪಣೆಗೊಂಡಿತು.
ಪುಸ್ತಕ ಸಂತೆಯ ಆರನೆಯ ಹೆಜ್ಜೆ
ಸಾಹಿತ್ಯ ಸಮ್ಮೇಳನ ಅಥವಾ ಹೊರರಾಜ್ಯಗಳಲ್ಲಿ ಹೆಚ್ಚಾಗಿ ಕಾಣಿಸುವ ಲಿಟ್ಫೆಸ್ಟ್ ಮಾದರಿಗೆ ಸರಿಸಾಟಿಯಾಗಿ ನಿಲ್ಲುವ ಅಥವಾ ಅದನ್ನೂ ಮೀರಿದ ಒಂದು ಪುಸ್ತಕದ ಹಬ್ಬವೆಂದರೆ ಅದು 'ವೀರಲೋಕ ಪುಸ್ತಕ ಸಂತೆ'. ಇಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವುದಷ್ಟೇ ಉದ್ದೇಶವಲ್ಲ. ಲೇಖಕರಿಗೆ ತನ್ನ ಓದುಗರನ್ನು ಪರಿಚಿಸುವ, ಓದಗುರಿಗೆ ತಮ್ಮ ನೆಚ್ಚಿನ ಲೇಖಕರನ್ನು ಭೇಟಿಯಾಗುವ ಅವಕಾಶ ಕಲ್ಪಿಸುವ, ಹಲವು ವಿಚಾರಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಸುಂದರ ವೇದಿಕೆ. ಕರ್ನಾಟಕಾದ್ಯಂತ ಇಂಥ ಸಂತೆಗಳು ನಡೆಯಬೇಕು ಎನ್ನುವುದು ವೀರಕಪುತ್ರ ಶ್ರೀನಿವಾಸ್ ಅವರ ಕನಸು. ಈ ಸಂತೆಯ ಆರನೆಯ ಆವೃತ್ತಿ ಬೆಂಗಳೂರಿನ ಶಾಲಿನಿ ಗ್ರೌಂಡ್ಸ್ನಲ್ಲಿ ನಡೆಯುತ್ತಿದೆ. ಪ್ರತಿ ಬಾರಿಯೂ ವಿನೂತನ ಯೋಜನೆಗಳೊಂದಿಗೆ ರೂಪುಗೊಳ್ಳುವ ಪುಸ್ತಕ ಸಂತೆ ಈ ಬಾರಿಯ ವಿಶೇಷತೆಯೇ ಉತ್ತರ ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿಯ ಅನಾವರಣ. ಈ ಬಾರಿಯ ಉತ್ಸವವನ್ನು ಉತ್ತರ ಕರ್ನಾಟಕವನ್ನು ಪ್ರಧಾನವಾಗಿಟ್ಟುಕೊಂಡು ರೂಪಿಸಲಾಗಿದ್ದು, ಆ ಭಾಗದ ಸುಮಾರು ಮೂವತ್ತು ಮಂದಿ ಪ್ರಮುಖ ಲೇಖಕರು ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡು ತಮ್ಮ ಅನುಭವ ಮತ್ತು ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪುಸ್ತಕ ಸಂತೆಯ ಜನಪ್ರಿಯತೆ ಎಷ್ಟರಮಟ್ಟಿಗೆ ಬೆಳೆದಿದೆ ಎಂಬುದಕ್ಕೆ ಅಲ್ಲಿನ ಮಳಿಗೆಗಳ ಸಂಖ್ಯೆಯೇ ಸಾಕ್ಷಿ. ಈ ಹಿಂದಿನ ಆವೃತ್ತಿಗಳಲ್ಲಿ ಗರಿಷ್ಠ ಐವತ್ತರಿಂದ ಅರವತ್ತು ಮಳಿಗೆಗಳು ಸೇರುತ್ತಿದ್ದುದೇ ಒಂದು ದಾಖಲೆಯಾಗಿತ್ತು. ಆದರೆ, ಈ ಬಾರಿ ಆ ಸಂಖ್ಯೆ ಬರೋಬ್ಬರಿ 93ಕ್ಕೆ ಏರಿದೆ. ಜನರು ಈ ಅಕ್ಷರ ಜಾತ್ರೆಗಾಗಿ ಎಷ್ಟು ಕಾತರದಿಂದ ಕಾಯುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಕೇವಲ ಕನ್ನಡದ ಪ್ರಕಾಶಕರು ಮಾತ್ರವಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಕಾಶನ ಸಂಸ್ಥೆಗಳಾದ 'ಪೆಂಗ್ವಿನ್ ಬುಕ್ಸ್' ಹಾಗೂ 'ಕ್ರಾಸ್ವರ್ಡ್' ಕೂಡ ಈ ಸಂತೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಹೊರಜಗತ್ತಿನ ವೈವಿಧ್ಯಮಯ ವಿಚಾರಧಾರೆಗಳನ್ನು ಸ್ಥಳೀಯ ಓದುಗರಿಗೆ ತಲುಪಿಸುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ.
ರಾಮೋಜಿ ಫಿಲ್ಮ್ ಸಿಟಿ; ಸಿನಿಮಾ ನಗರಿಯಲ್ಲಿದೆ ಇಡೀ ಜಗತ್ತು
ವಿಶೇಷ ಆಕರ್ಷಣೆಗಳು
ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸುಮಾರು ಮೂರು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾಡಿನ ಏಳೆಂಟು ಸಚಿವರು, ಸುಮಾರು ಐನೂರು ಮಂದಿ ಪ್ರಮುಖ ಸಾಹಿತಿಗಳು, 'ಓಲೆ' ಅಂದರೆ 'ಓದುಗ- ಲೇಖಕ' ಮುಖಾಮುಖಿ ವಿಭಾಗದಲ್ಲಿ ಸಾಕಷ್ಟು ಲೇಖಕರು ಭಾಗಿಯಾಗಲಿದ್ದಾರೆ. ಪುಸ್ತಕ ಸಂತೆಗೆ ಬರುವ ಜನರಿಗೆ ಇಲ್ಲಿ ಏನು ಸಿಗುತ್ತದೆ ಎಂಬ ಪ್ರಶ್ನೆಗೆ ವೀರಕಪುತ್ರ ಶ್ರೀನಿವಾಸ್ ಬಳಿ ಸ್ಪಷ್ಟ ಉತ್ತರವಿದೆ. ಎಲ್ಲೂ ಸಿಗದ ಅನುಭವ ಇಲ್ಲಿ ಸಿಗುತ್ತದೆ. ಇಲ್ಲಿ ಒಂದೇ ಸೂರಿನಡಿ ಸುಮಾರು ಒಂದು ಲಕ್ಷ ಪುಸ್ತಕಗಳು ಓದುಗರಿಗಾಗಿ ಕಾದಿವೆ. ಆದರೆ, ಇಲ್ಲಿನ ಅನುಭವ ಕೇವಲ ಪುಸ್ತಕ ನೋಡುವುದು ಅಥವಾ ಕೊಂಡುಕೊಳ್ಳುವುದಕ್ಕೆ ಸೀಮಿತವಾಗಿಲ್ಲ. ಲೇಖಕರ ಮಾತುಗಳನ್ನು ಕೇಳಲು ಕೂಡ ಅವಕಾಶ ಮಾಡಿಕೊಡುತ್ತದೆ.
ಮಕ್ಕಳಿಗಾಗಿಯೇ ಪ್ರತ್ಯೇಕ 'ಆಟದ ಸಂತೆ', ಕೇವಲ ನೂರು ರುಪಾಯಿಗೆ ಅತ್ಯಂತ ರುಚಿಯಾದ, ಶುಚಿಯಾದ ಊಟ ನೀಡುವ 'ಆಹಾರ ಸಂತೆ'ಯ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿದೆ. ಮನೋರಂಜನೆಯ ವಿಚಾರದಲ್ಲೂ ಸಂತೆ ಹಿಂದೆ ಬಿದ್ದಿಲ್ಲ. ಹೊರಗಡೆ ಸಂಗೀತ ಕಛೇರಿಗಳಿಗೆ ಹೋಗಬೇಕೆಂದರೆ ಐದಾರು ಸಾವಿರ ರುಪಾಯಿ ಕೊಟ್ಟು ಟಿಕೆಟ್ ಖರೀದಿಸಬೇಕು. ಆದರೆ, ಇಲ್ಲಿ ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಅವರಂಥ ಕಲಾವಿದರ ಗಾಯನವನ್ನು ಉಚಿತವಾಗಿ ಆಸ್ವಾದಿಸುವ ಅವಕಾಶವಿದೆ. ಜ್ಞಾನ, ಸಂವಾದ, ಸಂಗೀತ ಮತ್ತು ರುಚಿಕರ ಆಹಾರ, ಇವೆಲ್ಲವೂ ಒಂದೇ ಕಡೆ ಸಿಗುವುದರಿಂದ ಇಡೀ ಕುಟುಂಬ ಅರ್ಧ ದಿನವನ್ನು ಅತ್ಯಂತ ಸಾರ್ಥಕವಾಗಿ ಕಳೆಯಲು ಇಲ್ಲಿ ಸಾಧ್ಯವಾಗಿದೆ. ಇವೆಲ್ಲದರ ಜತೆಗೆ ಕರ್ನಾಟಕದ ದಿಗ್ಗಜರ ಚಿತ್ರ ಪ್ರದರ್ಶನವಿದೆ. ಹಾಗೆಯೇ ಬಟ್ಟೆ ಮತ್ತು ಇತರ ವಸ್ತುಗಳನ್ನು ಖರೀದಿಸುವ ಅವಕಾಶವಿದೆ.
ರಾಜ್ಯಪಾಲರಿಂದ ವಿದ್ಯುಕ್ತ ಚಾಲನೆ
ಈ ಬಾರಿಯ ಪುಸ್ತಕ ಸಂತೆಗೆ ಕರ್ನಾಟಕದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಈ ವೇಳೆ ಹಿರಿಯ ಸಾಹಿತಿ ಎಸ್. ದಿವಾಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ. ಕೆ. ರಾಮಮೂರ್ತಿ, ಸಾಹಿತಿ ಜಯಂತ್ ಕಾಯ್ಕಿಣಿ, ನ್ಯಾಷನಲ್ ಬುಕ್ ಟ್ರಸ್ಟ್ನ ಅಧಿಕಾರಿ ಡಾ. ಮೋಹನ್ ಹಾಗೂ ಬಿಬಿಎಂಪಿ ಸದಸ್ಯ ಬಿ. ಸೋಮಶೇಖರ್ ಉಪಸ್ಥಿತರಿದ್ದರು. ಈ ವೇಳೆ ಲೇಖಕ ಕರ್ಕಿ ಕೃಷ್ಣಮೂರ್ತಿ ಅವರ 'ಅಮರಕ', ಕುಸುಮಾ ಆಯರಹಳ್ಳಿ ಅವರ 'ಪಾಳೆಯಪಟ್ಟು', ರಾಘವ್ ವಿಶ್ವಾಸಿ ಅವರ 'ಅಭೇದ್ಯ', ನರೇಂದ್ರ ರೈ ದೇರ್ಲ ಅವರ 'ನೆಲಧ್ಯಾನ', ಡಾ. ವೆಂಕಟಸ್ವಾಮಿ ಅವರ 'ಅಂಬೇಡ್ಕರ್ ಹೇಳಿದ ಭಾರತ' ಹಾಗೂ ಶ್ಯಾಮ್ಪ್ರಸಾದ್ ಅವರ 'ಲಾರ್ಡ್ ಆಫ್ ದಿ ವೆಸ್ಟರ್ನ್ ಸೀ' ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಹಿರಿಯ ಸಾಹಿತಿ ಎಸ್. ದಿವಾಕರ್ ಅವರಿಗೆ 'ವೀರಲೋಕ ಪುಸ್ತಕ ಸಂತೆ ಗೌರವ' ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.
ಸಂತೆಯ ಹಿನ್ನೋಟ
ಪುಸ್ತಕ ಪ್ರದರ್ಶನಕ್ಕೆ ಹೊಸ ಸ್ಪರ್ಶ ನೀಡಿ, ಇಡೀ ಕುಟುಂಬ ಸಂಭ್ರಮದಿಂದ ಪಾಲ್ಗೊಳ್ಳುವ 'ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಾತ್ರೆ'ಯನ್ನಾಗಿ ರೂಪಿಸಿದ ಕಾರ್ಯಕ್ರಮವೇ 'ವೀರಲೋಕ ಪುಸ್ತಕ ಸಂತೆ'. ಕಳೆದ ಐದು ಆವೃತ್ತಿಗಳಲ್ಲಿ ಲಕ್ಷಾಂತರ ಓದುಗರನ್ನು ತಲುಪಿ, ಕೋಟ್ಯಂತರ ರುಪಾಯಿಗಳ ಪುಸ್ತಕ ವಹಿವಾಟು ನಡೆಸುವ ಮೂಲಕ ಇದು ಕನ್ನಡ ಪುಸ್ತಕೋದ್ಯಮದ ಅತಿದೊಡ್ಡ ಹಬ್ಬವಾಗಿ ಹೊರಹೊಮ್ಮಿದೆ.
ಇದರ ಮೊದಲ ಆವೃತ್ತಿ 2024ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಪುಸ್ತಕದ ಅಂಗಡಿಗಳು ವಿರಳವಾಗುತ್ತಿರುವ ಕಾಲದಲ್ಲಿ, ಹಳ್ಳಿಯ ಸಂತೆಯ ಮಾದರಿಯಲ್ಲೇ ಪುಸ್ತಕಗಳನ್ನು ಜನಸಾಮಾನ್ಯರ ನಡುವೆ ಕೊಂಡೊಯ್ಯುವ ವೀರಲೋಕದ ಮೊದಲ ಸಾಹಸ ಇದಾಗಿತ್ತು. ಹಾಗೆಯೇ ಎರಡೆನಯ ಆವೃತ್ತಿ ಕನ್ನಡ ಪುಸ್ತಕೋದ್ಯಮದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿತು. ಮೂರು ದಿನಗಳ ಕಾಲ ನಡೆದ ಈ ಸಂತೆಯಲ್ಲಿ ಸುಮಾರು 1.25 ಲಕ್ಷಕ್ಕೂ ಹೆಚ್ಚು ಪುಸ್ತಕ ಪ್ರೇಮಿಗಳು ಭಾಗವಹಿಸಿದ್ದರು ಮತ್ತು ಬರೋಬ್ಬರಿ 3 ಕೋಟಿ ರುಪಾಯಿಗಳಿಗೂ ಅಧಿಕ ಮೌಲ್ಯದ ಪುಸ್ತಕಗಳು ಮಾರಾಟವಾಗಿ ದಾಖಲೆ ನಿರ್ಮಿಸಿದವು. 'ಒಂದೇ ಸಂತೆಯಡಿ 100 ಲೇಖಕರು' ಎಂಬ ವಿಶೇಷ ಪ್ರಯೋಗ, ಕವಿ ವಾಸುದೇವ ನಾಡಿಗ್ ಅವರಿಂದ 'ಕವಿತೆ ಹುಟ್ಟುವ ಸಮಯ' ಕಾರ್ಯಾಗಾರ, ಮಕ್ಕಳ ಮೇಳ ಮತ್ತು ಹತ್ತಾರು ನೂತನ ಕೃತಿಗಳ ಲೋಕಾರ್ಪಣೆ ಈ ಸಂತೆಯ ಮೆರುಗು ಹೆಚ್ಚಿಸಿದ್ದವು. ಎರಡನೆಯ ಸಂತೆಯ ಅಭೂತಪೂರ್ವ ಯಶಸ್ಸಿನ ನಂತರ ಮೂರನೆಯ ಆವೃತ್ತಿಯು ಮತ್ತಷ್ಟು ಬೃಹತ್ ಸ್ವರೂಪ ಪಡೆಯಿತು. ಇದರಲ್ಲಿ 200ಕ್ಕೂ ಹೆಚ್ಚು ಮಳಿಗೆಗಳು, 300ಕ್ಕೂ ಹೆಚ್ಚು ಪ್ರಕಾಶಕರು ಹಾಗೂ 1,000ಕ್ಕೂ ಹೆಚ್ಚು ಲೇಖಕರ ಸಂಗಮವಾಯಿತು. ಸುಮಾರು 2 ಲಕ್ಷಕ್ಕೂ ಹೆಚ್ಚು ಓದುಗರು ಭೇಟಿ ನೀಡಿದ ಈ ಮೇಳದಲ್ಲಿ ಎರಡು ವೇದಿಕೆಗಳಲ್ಲಿ ನಿರಂತರ ಕಾರ್ಯಕ್ರಮಗಳು ಜರುಗಿದವು. 40 ಲೇಖಕರಿಂದ 20 ವೈಚಾರಿಕ ಸಂವಾದಗಳು, 22 ಹೊಸ ಪುಸ್ತಕಗಳ ಬಿಡುಗಡೆ, ಜನಪ್ರಿಯ 'ಥಟ್ ಅಂತ ಹೇಳಿ' ರಸಪ್ರಶ್ನೆ ಕಾರ್ಯಕ್ರಮದ ಮಹಾಸಂಚಿಕೆ, ಓರಿಗಾಮಿ ಕಾರ್ಯಾಗಾರ, ಗಝಲ್ ಗಾಯನ ಹಾಗೂ ಲೇಖಕರೊಂದಿಗೆ ನೇರವಾಗಿ ಮಾತನಾಡುವ 'ಓಲೆ' ವಿಭಾಗವು ಓದುಗರ ಮನಗೆದ್ದಿತು.
ಪುಸ್ತಕ ಸಂತೆಯನ್ನು ಬೆಂಗಳೂರಿಗಷ್ಟೇ ಸೀಮಿತಗೊಳಿಸದೆ ರಾಜ್ಯದ ಇತರ ಭಾಗಗಳಿಗೂ ಕೊಂಡೊಯ್ಯುವ ಸಂಕಲ್ಪದಂತೆ, ನಾಲ್ಕನೆಯ ಆವೃತ್ತಿಯನ್ನು ಗಡಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಬೀದರ್ನಲ್ಲಿ ಆಯೋಜಿಸಲಾಯಿತು. ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಈ ರಾಜ್ಯಮಟ್ಟದ ಸಂತೆಯನ್ನು ಉದ್ಘಾಟಿಸಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಸಾಹಿತಿಗಳು, ಚಿಂತಕರು ಮತ್ತು ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಗಡಿನಾಡಿನಲ್ಲಿ ಕನ್ನಡದ ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸಿದರು.
ಕಲ್ಪತರು ನಾಡು ತುಮಕೂರಿನಲ್ಲಿ ಜಿಲ್ಲಾಡಳಿತ ಮತ್ತು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಐದನೆಯ ಆವೃತ್ತಿಯು ಅತ್ಯಂತ ವೈಭವದಿಂದ ನಡೆಯಿತು.

ಯಾಕೆ ಹೋಗಬೇಕು ಸಂತೆಗೆ?
- ನಿಮ್ಮಿಷ್ಟದ ಲೇಖಕರನ್ನು ಭೇಟಿಯಾಗಬಹುದು
- ನಿಮಗೆ ಬೇಕಾದ ಪುಸ್ತಕಗಳು ಇಲ್ಲಿವೆ, ಆಯ್ಕೆಗಳು ಸಾಕಷ್ಟಿವೆ
- ಮಕ್ಕಳ ಪುಸ್ತಕದಿಂದ ಹಿಡಿದು ಎಲ್ಲವೂ ಇರುವ ಏಕೈಕ ಜಾಗ
- ಆಹಾರ, ಸಂಗೀತ, ಮನೋರಂಜನೆ, ಸಾಹಿತ್ಯ ಎಲ್ಲವೂ ಒಂದೇ ಜಾಗದಲ್ಲಿ ಲಭ್ಯ
- 70ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಒಂದೇ ಸೂರಿನಡಿ
- ಮಕ್ಕಳಿಗಾಗಿ ವಿಶೇಷ ಆಟದ ಸಂತೆ
- ಮಹತ್ವದ ವಿಚಾರಗಳ ಕುರಿತು ಗಣ್ಯರ ಗೋಷ್ಠಿ
ತಂಬುಳಿ ಮನೆ...ಅಜ್ಜಿಯ ಕೈರುಚಿ ನೆನಪಿಸುವ ಮನೆ; ಮಲೆನಾಡ ಖಾದ್ಯ ರಾಜಧಾನಿಯಲ್ಲಿ
ಸಾಹಿತ್ಯ ಪ್ರವಾಸ
ಪ್ರವಾಸ ಹೋಗಿಬಂದು ಅದರ ಬಗ್ಗೆ ಬರೆಯುವ ವರ್ಗ ಒಂದಾದರೆ, ಸಾಹಿತ್ಯಕ್ಕಾಗಿಯೇ ಪ್ರವಾಸ ಮಾಡುವ ಇನ್ನೊಂದು ವರ್ಗವಿದೆ. ದೂರದ ಬೀದರ್ ಇರಲಿ, ಹತ್ತಿರದ ಜಯನಗರವಿರಲಿ ಇವರು ಎಲ್ಲಿಯೂ ತಪ್ಪಿಸುವುದಿಲ್ಲ. ಇಂಥ ಅನೇಕ ಸಾಹಿತ್ಯ ಪ್ರವಾಸಿಗರಿಗೆ ವೀರಲೋಕದ 'ಪುಸ್ತಕ ಸಂತೆ' ಅಕ್ಷರ ಕಾಶಿಯಿದ್ದಂತೆ.
![]()
ಈ ಆರು ಆವೃತ್ತಿಗಳ ಪಯಣದಲ್ಲಿ ಅವರಿಗೆ ದಕ್ಕಿದ ಅತ್ಯಂತ ದೊಡ್ಡ ಸತ್ಯವೆಂದರೆ. ಕನ್ನಡ ಪುಸ್ತಕಗಳಿಗೆ ಓದುಗರ ಕೊರತೆಯಿಲ್ಲ. ಅವರಿಗೆ ಬೇಕಾದ ವೇದಿಕೆ ಮತ್ತು ಗೌರವ ಸಿಕ್ಕಿರಲಿಲ್ಲವಷ್ಟೇ. ಒಂದು ವರ್ಷಕ್ಕೆ ಹತ್ತು ಪುಸ್ತಕದ ಅಂಗಡಿಗಳು ಮಾಡುವ ವ್ಯಾಪಾರ ಮತ್ತು ಆದಾಯಕ್ಕೆ ಸಮನಾದ ವಹಿವಾಟು ಈ ಮೂರು ದಿನಗಳ ಸಂತೆಯಲ್ಲಿ ನಡೆಯುತ್ತಿದೆ. ಈ ಆರನೆಯ ಆವೃತ್ತಿಯಲ್ಲಿ ನವಕರ್ನಾಟಕ ಪ್ರಕಾಶನ, ವಸುಧೇಂದ್ರ ಅವರ ‘ಛಂದ ಪುಸ್ತಕ’, ಶ್ರೀನಿಧಿ ಪಬ್ಲಿಕೇಷನ್, ಕಾರ್ಕಳದ ‘ಪುಸ್ತಕ ಮನೆ’ ಹಾಗೂ ‘ಮುದ್ದಿ ಮೈಂಡ್ಸ್’ನಂಥ ಸಂಸ್ಥೆಗಳು ಈ ಬಾರಿ ಕೈಜೋಡಿಸಿವೆ. ಪ್ರಕಾಶಕರು ತೋರಿಸಿದ ‘ಸಹಭಾಗಿತ್ವ’ ಮತ್ತು ನೈತಿಕ ಬೆಂಬಲ ಎಲ್ಲಕ್ಕಿಂತ ಮಿಗಿಲಾದುದು. ‘ಅಜ್ಞಾತ ಓದುಗರನ್ನು’ ಲೇಖಕರಿಗೆ ಭೇಟಿ ಮಾಡಿಸುವ, ಹಾಗೂ ನೆಚ್ಚಿನ ಬರಹಗಾರರನ್ನು ಓದುಗರಿಗೆ ಪರಿಚಯಿಸುವ ಅದ್ಭುತ ಸೇತುವೆಯಾಗಿ ಈ ಸಂತೆ ಕೆಲಸ ಮಾಡುತ್ತಿದೆ. ಸಂತೆಯ ಆವರಣದಲ್ಲಿ ರೂಪಿಸಲಾಗಿರುವ ‘ಸಾಹಿತಿಗಳ ಹೂದೋಟ’ದಂಥ ವಿಶೇಷ ಪರಿಕಲ್ಪನೆಗಳು ನೋಡುಗರ ಮನಗೆದ್ದಿವೆ.
-ವೀರಕಪುತ್ರ ಶ್ರೀನಿವಾಸ್, ವೀರಲೋಕ ಬುಕ್ಸ್ ಸ್ಥಾಪಕ
![]()
ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕಗಳ ಒಲವನ್ನು ಹೆಚ್ಚಿಸುವ ಇಂಥ ಪುಸ್ತಕ ಸಂತೆಗಳು ಅತ್ಯವಶ್ಯಕ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನ ಎತ್ತರದಲ್ಲಿದೆ. ಕುವೆಂಪು ಅವರ ಸಾಹಿತ್ಯ, ಬಸವಣ್ಣ ಅವರ ವಚನಗಳು, ಪಂಪ, ರನ್ನ ಹೀಗೆ ಸಾಕಷ್ಟು ಸಾಹಿತಿಗಳು ನೀಡಿರುವ ಕೊಡುಗೆ ಅಪಾರವಾದದ್ದು. ಇಂಥ ಜಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯ. ಇಲ್ಲಿ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಕೆಲಸ ಆಗುತ್ತಿದೆ. ಸಮಾಜಕ್ಕೆ ಸರಿ ದಾರಿ ತೋರುವ ಕೆಲಸ ಹಾಗೂ ನಮ್ಮ ಸಂವೇದನೆಯನ್ನು ಹೆಚ್ಚಿಸುವ ಕಾರ್ಯ ಈ ಸಂತೆ. ಕನ್ನಡ ಸಾಹಿತ್ಯ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ಕನ್ನಡದಿಂದ ಬೇರೆ ಭಾಷೆಗೆ ಭಾಷಾಂತರವಾಗಿ ಹೆಚ್ಚು ಪ್ರಸಿದ್ಧಿ ಪಡೆಯಬೇಕು. ಹಾಗೆಯೇ ಬೇರೆ ಭಾಷೆಯ ಕೃತಿಗಳು ಕೂಡ ಕನ್ನಡಕ್ಕೆ ಬರಬೇಕು. ಈಗ ಆರು ವಿಭಿನ್ನ ಕೃತಿಗಳು ಲೋಕಾರ್ಪಣೆಯಾಗಿವೆ. ಇಂಥದ್ದೊಂದು ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ವೀರಕಪುತ್ರ ಶ್ರೀನಿವಾಸ್ ಹಾಗೂ ಇಡೀ ತಂಡಕ್ಕೆ ಅಭಿನಂದನೆ. ಮುಂದಿನ ವರ್ಷದೊಳಗೆ ಕನ್ನಡ ಕಲಿಯಲು ಪ್ರಯತ್ನ ಮಾಡುತ್ತೇನೆ.
-ಡಾ. ಸುಧಾ ಯಾದವ್, ರಾಜ್ಯಪಾಲರು