ಬೆಂಗಳೂರು: ಬೆಂಗಳೂರಿನ ಕಂಪನಿ ಕಾರ್ಯದರ್ಶಿಗಳ ಶಾಖೆಯ 2026ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಶ್ವಾಸ ಶಂಕರ ಹೆಗಡೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬೆಂಗಳೂರು ಶಾಖೆಯು 4,000ಕ್ಕೂ ಹೆಚ್ಚು ಕಂಪನಿ ಕಾರ್ಯದರ್ಶಿಗಳನ್ನು ಒಳಗೊಂಡಿದ್ದು, ದೇಶದ ಮೂರನೇ ಅತಿದೊಡ್ಡ ಶಾಖೆಯಾಗಿದೆ. ನೂತನ ಅಧ್ಯಕ್ಷರ ಅಧಿಕಾರಾವಧಿ 2026ರ ಜನವರಿ 19ರಿಂದ ಪ್ರಾರಂಭವಾಗಲಿದೆ ಎಂದು ಶಾಖೆಯ ಮೂಲಗಳು ತಿಳಿಸಿವೆ.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ಎಂಬುದು ಸಂಸತ್ತಿನ ಕಾಯ್ದೆಯಡಿ (ಕಂಪನಿ ಸೆಕ್ರೆಟರೀಸ್ ಆಕ್ಟ್, 1980) ಸ್ಥಾಪಿತಗೊಂಡ ಪ್ರಮುಖ ವೃತ್ತಿಪರ ಸಂಸ್ಥೆಯಾಗಿದ್ದು, ಕಂಪನಿ ಕಾರ್ಯದರ್ಶಿಗಳ ವೃತ್ತಿಯನ್ನು ನಿಯಂತ್ರಿಸುವ ಹಾಗೂ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಈ ಸಂಸ್ಥೆಯು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಎಸ್ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಹಾಗೂ ಸದಸ್ಯರಿಗೆ ವೃತ್ತಿಪರ ಮಾನದಂಡಗಳನ್ನು ಒದಗಿಸುವಲ್ಲಿ ಐಸಿಎಸ್‌ಐ ಪ್ರಮುಖ ಪಾತ್ರ ವಹಿಸುತ್ತದೆ.

ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಐಸಿಎಸ್‌ಐ ನವದೆಹಲಿ, ಚೆನ್ನೈ, ಕೋಲ್ಕತ್ತಾ ಹಾಗೂ ಮುಂಬೈನಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, ದೇಶಾದ್ಯಂತ 73 ಶಾಖಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಕಾರ್ಪೊರೇಟ್ ಆಡಳಿತ, ಸಂಶೋಧನೆ ಮತ್ತು ತರಬೇತಿ ಕೇಂದ್ರಗಳು (CCGRT) ಸ್ಥಾಪಿತವಾಗಿವೆ. ಆಸ್ಟ್ರೇಲಿಯಾ, ಕೆನಡಾ, ಸಿಂಗಾಪುರ, ಯುಎಇ, ಯುಕೆ ಹಾಗೂ ಯುಎಸ್ಎಗಳಲ್ಲಿ ವಿದೇಶಿ ಕೇಂದ್ರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ, 75,000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಕಂಪನಿ ಕಾರ್ಯದರ್ಶಿಗಳ ವೃತ್ತಿಯನ್ನು ನಿಯಂತ್ರಿಸುವ ಹಾಗೂ ಅಭಿವೃದ್ಧಿಗೊಳಿಸುವ ಶಾಖೆಯಾಗಿದೆ.
ಈ ಹಿಂದೆ ಡಿಸೆಂಬರ್ 2022ರಲ್ಲಿ ನಡೆದಿದ್ದ ಬೆಂಗಳೂರು ಶಾಖೆಯ ಆಡಳಿತ ಮಂಡಳಿಯ ಚುನಾವಣೆಯ ಮತಗಳಿಕೆಯಲ್ಲಿ ವಿಶ್ವಾಸ ಹೆಗಡೆ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದರು. ಅಂದಿನ ಮೊದಲ ಅವಧಿಯಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ನಂತರ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿಯೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಪ್ರಸ್ತುತ 2025ರ ಡಿಸೆಂಬರ್ 8ರಂದು ನಡೆದ ಚುನಾವಣೆಯಲ್ಲಿ ವಿಶ್ವಾಸ ಹೆಗಡೆ ಅವರು ಅವಿರೋಧವಾಗಿ ಹಾಗೂ, ಸರ್ವಾನುಮತದಿಂದ ಬೆಂಗಳೂರು ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ವೃತ್ತಿಪರ ಉತ್ಕೃಷ್ಟತೆಗೆ ಸಾಕ್ಷಿಯಾಗಿದ್ದಾರೆ.
ವಿಶ್ವಾಸ ಶಂಕರ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನಿವಾಸಿಯಾಗಿದ್ದು, ದಿ. ಶಂಕರ ಗಣಪತಿ ಹೆಗಡೆ ಹಾಗೂ ಲಕ್ಷ್ಮೀ ಶಂಕರ ಹೆಗಡೆ ಅವರ ಪುತ್ರರಾಗಿದ್ದಾರೆ. ಅವರು ವಾಣಿಜ್ಯ, ಆಡಳಿತ ಹಾಗೂ ಕಾನೂನು ವಿಭಾಗಗಳಲ್ಲಿ ಪದವೀಧರರಾಗಿದ್ದು, 2015ರಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಅರ್ಹತೆ ಪಡೆದಿದ್ದಾರೆ. ಸುಮಾರು ಹತ್ತು ವರ್ಷಗಳಿಗಿಂತ ಹೆಚ್ಚಿನ ವೃತ್ತಿಪರ ಅನುಭವ ಹೊಂದಿರುವ ಅವರು, ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದಲ್ಲಿ (ಬಿಐಎಎಲ್) ಡೆಪ್ಯುಟಿ ಕಂಪನಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.