ಬೆಂಗಳೂರು: ಡಾ. ಎಸ್.ಎಲ್. ಭೈರಪ್ಪನರ ಆಶೋತ್ತರಗಳನ್ನು ಈಡೇರಿಸಲು, ಅವರ ವಿಚಾರಗಳು ಜೀವಂತವಾಗಿಡಬೇಕು ಹಾಗೂ ಬಡ ಮಕ್ಕಳಿಗೆ ನೆರವಾಗಬೇಕು ಎಂದು ಅವರ ಹೆಸರಿನಲ್ಲಿ ಟ್ರಸ್ಟ್ (ಎಸ್.ಎಲ್.ಭೈರಪ್ಪ ಪ್ರತಿಷ್ಠಾನ) ಸ್ಥಾಪನೆಯಾಗಿದೆ, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ತಿಳಿಸಿದರು.
ಡಾ. ಎಸ್.ಎಲ್. ಭೈರಪ್ಪ ಅವರ ʼಧರ್ಮಶ್ರೀʼ ಕಾದಂಬರಿಗೆ 65 ವರ್ಷ ತುಂಬಿದ ಹಿನ್ನೆಲೆಯಲ್ಲಿ ಎಸ್.ಎಲ್. ಭೈರಪ್ಪ ಪ್ರತಿಷ್ಠಾನದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ʼಎಸ್.ಎಲ್.ಭೈರಪ್ಪ ಸಾಹಿತ್ಯ ಸಂಸ್ಮರಣೆʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಏಪ್ರಿಲ್ 24ನೇ ತಾರೀಖು ಬಂದರೆ ಡಾ.ಎಸ್.ಎಲ್.ಭೈರಪ್ಪ ಅವರು ತೀರಿಕೊಂಡು ಏಳು ತಿಂಗಳಾಗುತ್ತದೆ. ನಾವು ಈ ಕಾರ್ಯಕ್ರಮವನ್ನು ಮುಂಚೆಯೇ ಆಯೋಜಿಸಬೇಕಿತ್ತು. ಆದರೆ, ನಾವೆಲ್ಲಾ ಟ್ರಸ್ಟಿಗಳು ಭೈರಪ್ಪನವರ ಶೋಕಾಚರಣೆ ನಿಮಿತ್ತ ಆರು ತಿಂಗಳು ಮೌನ ವಹಿಸೋಣ ಎಂದು ತೀರ್ಮಾನಿಸಿದ್ದೆವು. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಮೂಡಿದ ಅನೇಕ ಪ್ರಶ್ನೆಗಳಿಗೂ ಉತ್ತರವನ್ನೂ ನೀಡಲಿಲ್ಲ. ಆದರೆ, ಸುಮ್ಮನೆ ಇದ್ದರೆ ಬೇರೆ ಅಭಿಪ್ರಾಯಗಳಿಗೆ ಏಕಪಕ್ಷೀಯವಾದ ಸ್ವೀಕೃತಿ ಸಿಗಬಹುದು ಎಂಬ ಕಾರಣಕ್ಕಾಗಿ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಪ್ರಸ್ತಾಪಿಸುತ್ತಿದ್ದೇನೆ ಎಂದು ಹೇಳಿದರು.
ಟ್ರಸ್ಟ್ ಸ್ಥಾಪಿಸಿದ್ದು ಭೈರಪ್ಪನವರೇ...
ಈ ಟ್ರಸ್ಟ್ ಅನ್ನು ನಾವು ಯಾರೂ ಸ್ಥಾಪನೆ ಮಾಡಿಲ್ಲ, ಇದನ್ನು ಸ್ಥಾಪಿಸಿದವರು ಎಸ್.ಎಲ್.ಭೈರಪ್ಪನವರೇ. ಇದರಲ್ಲಿ ಯಾರ್ಯಾರು ಇರಬೇಕು ಎಂದು ನಿರ್ಧರಿಸಿದವರೂ ಅವರೇ. ಹೀಗಾಗಿ ಟ್ರಸ್ಟ್ ಸ್ಥಾಪನೆ ಮತ್ತು ರಚನೆಯಲ್ಲಿ ಈ ಐದು ಜನರ ಪಾತ್ರ ಇಲ್ಲ ಎಂದು ತಿಳಿಸಲು ಬಯಸುವೆ. ಇದರಿಂದ ಸಾರ್ವಜನಿಕರಲ್ಲಿ ಮೂಡಿದ್ದ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದು ವಿಶ್ವೇಶ್ವರ ಭಟ್ ತಿಳಿಸಿದರು.
ನಮಗೆ ಯಾರಿಗೂ ಟ್ರಸ್ಟ್ ಮಾಡಬೇಕು ಎಂದು ಬಯಸಿರಲಿಲ್ಲ, ಕಾರಣಾಂತರಗಳಿಂತ ಟ್ರಸ್ಟ್ ಮಾಡಬೇಕು ಎಂದು ಭೈರಪ್ಪ ಅವರಿಗೆ ಅನಿಸಿದ್ದರಿಂದ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. ನೀವು ಟ್ರಸ್ಟಿಗಳು ಆಗಬೇಕು ಎಂದು ಕೇಳಿದ್ದರಿಂದ ನಾವು ಒಪ್ಪಿಕೊಂಡಿದ್ದೆವು. ಭೈರಪ್ಪ ಅವರು ಸ್ವತಂತ್ರವಾಗಿ ಯೋಚಿಸುವ ವ್ಯಕ್ತಿ. ಅವರು ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಇದ್ದ ಹಾಗೆ. ತಾವು ಏನು ಮಾಡುತ್ತಿದ್ದರು ಎಂಬ ಬಗ್ಗೆ ಅರಿವಿತ್ತು. 94 ವರ್ಷ ವಯಸ್ಸಾಗಿದ್ದ ಭೈರಪ್ಪ ಅವರಿಗೆ ವಯೋಸಹಜ ಮರೆವು ಇತ್ತು. ಆದರೆ, ಅವರು ಸುತ್ತಮುತ್ತಲಿನ ಪ್ರಜ್ಞೆಯನ್ನೂ ಎಂದೂ ಕಳೆದುಕೊಂಡಿರಲಿಲ್ಲ.
ಭೈರಪ್ಪ ಅವರು ಮೈಸೂರಿನಲ್ಲಿ ಸುಮಾರು 25 ವರ್ಷಗಳ ಹಿಂದೆ ಒಂದು ಟ್ರಸ್ಟ್ ಅನ್ನು ಅವರು ಸ್ಥಾಪಿಸಿದ್ದರು. ಆದರೆ, ಆ ಟ್ರಸ್ಟ್ ಕಾರ್ಯವೈಖರಿ ಬಗ್ಗೆ ಬೇಸರವಿತ್ತು. ಪ್ರತಿ ವರ್ಷ ಒಂದು ಪ್ರಶಸ್ತಿ ನೀಡುವುದು ಬಿಟ್ಟರೆ, ಬೇರೆ ಯಾವ ಚಟುವಟಿಕೆಯೂ ನಡೆಯುತ್ತಿರಲಿಲ್ಲ. ಈ ಬಗ್ಗೆ ಕೊನೆಯ ದಿನಗಳಲ್ಲಿ ಭೈರಪ್ಪನವರು ಮಾತನಾಡುತ್ತಿದ್ದರು.
ಟ್ರಸ್ಟ್‌ನ ವಿಲ್ ಬದಲಿಸಿದ್ದೇಕೆ?
ನಾನು ಸಂಪಾದನೆ ಮಾಡಿದ ಒಂದಷ್ಟು ಹಣ ಇದೆ, ಪ್ರತಿ ತಿಂಗಳು ಒಂದಷ್ಟು ಹಣ ಪಿಂಚಣಿ, ರಾಯಲ್ಟಿ ರೂಪದಲ್ಲಿ ಬರುತ್ತದೆ. ನಾನು ಉಳಿಸಿದ ಹಣವನ್ನು ನಾನು ಸಮಾಜ ಕಾರ್ಯಕ್ಕಾಗಿ ಬಳಸಬೇಕು, ಬಡ ವಿದ್ಯಾರ್ಥಿಗಳು, ಕೈಲಾಗದ ರೋಗಿಗಳಿಗೆ ಕೊಡಬೇಕು. ಸಾಯುವ ಹೊತ್ತಿಗೆ ನಾನು ಬರಿಗೈನಲ್ಲಿ ಹೋಗಬೇಕು ಎಂದು ಭೈರಪ್ಪ ಹೇಳುತ್ತಿದ್ದರು. ಅದಕ್ಕಾಗಿ ಅವರು ಟ್ರಸ್ಟ್ ವಿಲ್ ಬದಲಾಯಿಸಿದರು. ಅದಕ್ಕೆ ಅವರ ಮನೆಯಲ್ಲಿ ವಿರೋಧ ವ್ಯಕ್ತವಾಯಿತು. ಹೀಗಾಗಿ ಹೊಸ ಟ್ರಸ್ಟ್ ಸ್ಥಾಪನೆ ಮಾಡಲು ತೀರ್ಮಾನಿಸಿದರು.
ಭೈರಪ್ಪನವರಿಗೆ ಒಂದು ಆಸೆಯಿತ್ತು. ಹುಟ್ಟೂರಾದ ಸಂತೆಶಿವರ ಊರಿಗೆ ನೀರು ಕೊಡಬೇಕು ಎಂದು ಅವರು ಪಟ್ಟ ಕಷ್ಟ ನನಗೆ ಚೆನ್ನಾಗಿ ಗೊತ್ತು. ಆ ಸಂತೆಶಿವರದಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಮುಗಿದ ನಂತರ ಸಹನಾ ಮೂಲಕ ನನ್ನನ್ನು ಫೋನ್ ಮೂಲಕ ಸಂಪರ್ಕಿಸಿ, ನಿಮ್ಮ ಮನೆಗೆ ಬರಬೇಕು, ಅಲ್ಲೇ ಇರಬೇಕು ಅಂದುಕೊಂಡಿದ್ದೇನೆ ಎಂದರು. ಅದಕ್ಕೆ ನಾನು ಬನ್ನಿ ಎಂದು ಹೇಳಿದೆ. ನಾನು ಕೊನೆಯ ತನಕವೂ ಇಲ್ಲೇ ಇರಬಹುದಾ ಎಂದು ಕೇಳಿದ್ದಕ್ಕೆ ಇರಿ ಎಂದು ಹೇಳಿದ್ದೆ. ಆ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಹಾಗೆಯೇ ಹೇಳುತ್ತಿದ್ದರು. ಭೈರಪ್ಪನವರಿಗೆ ಆ ರೀತಿಯ ಸ್ವಾಗತ ಮತ್ತು ಆಶ್ರಯ ನೀಡುವಂತಹ 10 ಸಾವಿರ ಮನೆಗಳು ರಾಜ್ಯದಲ್ಲಿವೆ. ಅದು ಭೈರಪ್ಪನವರ ಘನತೆ ಮತ್ತು ವ್ಯಕ್ತಿತ್ವ. ಕೊನೆಗೆ ಅವರು ನಮ್ಮ ಮನೆಗೆ ಬಂದರು, ಅದು ನನಗೆ ಸಿಕ್ಕ ಪುಣ್ಯ ಎಂದು ಭಾವಿಸುವೆ ಎಂದರು.
ಉಳಿತಾಯದ ಹಣ ಸಮಾಜ ಕಾರ್ಯಕ್ಕೆ ಬಳಸಲು ಬಯಸಿದ್ದರು
ನನ್ನ ಹೆಂಡತಿಗೆ ತೊಂದರೆಯಾಗದ ರೀತಿಯಲ್ಲಿ ಒಂದಷ್ಟು ಹಣವನ್ನು ಮಾಡಿದ್ದೇನೆ. ನನ್ನ ಕಾಲದ ನಂತರ ಪಿಂಚಣಿಯಲ್ಲಿ ಶೇ.50 ಆಕೆಗೆ ಬರುತ್ತದೆ. ನನ್ನ ಇಬ್ಬರು ಮಕ್ಕಳು ಒಳ್ಳೆಯ ಸ್ಥಿತಿವಂತರಾಗಿದ್ದಾರೆ. ಹಿರಿಯ ಮಗ ಲಂಡನ್‌ನಲ್ಲಿದ್ದು ಹಾಗೂ ಬೆಂಗಳೂರಿನಲ್ಲಿರುವ ಮಗನಿಗೆ ಸಾಕಷ್ಟು ನೀಡಿದ್ದೇನೆ. ಅವರು ಸ್ವತಂತ್ರರಾಗಿದ್ದು, ನನ್ನ ನಂತರ ಮೈಸೂರಿನ ಮನೆಯಲ್ಲಿ ಶ್ರೀಮತಿ ಇರುತ್ತಾರೆ. ಹೀಗಾಗಿ ಉಳಿತಾಯದ ಹಣವನ್ನು ಸಮಾಜ ಕಾರ್ಯಕ್ಕೆ ಬಳಸಬೇಕು ಎಂದು ಭೈರಪ್ಪ ಅವರು ಹೇಳಿದ್ದರು. ಆದರೆ, ಅವರ ಮಕ್ಕಳಿಗೆ ಅದು ಇಷ್ಟ ಇರಲಿಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಕೋರ್ಟ್‌ನಲ್ಲಿ ಕೇಸ್ ಹಾಕಿದರು. ನಮ್ಮ ತಂದೆಯವರಿಗೆ ಮರೆವಿನ ಕಾಯಿಲೆ ಇದೆ ಆದ್ದರಿಂದ ಅವರ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಜವಾಬ್ದಾರು ನಮಗೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ಮಕ್ಕಳೇ ಕೇಸ್ ಹಾಕಿದ್ದ ದುಃಖ ಅವರನ್ನು ಕಾಡಿತು
ಭೈರಪ್ಪನವರು ನಮ್ಮ ಮನೆಗೆ ಬಂದಾಗ ನಾನು ಒಂದು ವಾರ ಇಲ್ಲಿರುವೆ, ಮತ್ತೊಂದು ವಾರ ಮೈಸೂರಿನಲ್ಲಿ ಇರುವೆ ಎಂದು ಹೇಳಿದ್ದರು. ಹಾಗೆಯೇ ಹೊಸ ಟ್ರಸ್ಟ್ ಮೂಲಕ ಒಂದಷ್ಟು ಮಾಡಬೇಕು ಎನ್ನುವ ಉದ್ದೇಶವಿತ್ತು. ಹೀಗಿರುವಾಗಲೇ ಅವರನ್ನು ಮಕ್ಕಳು ಕಟಕಟೆಯಲ್ಲಿ ನಿಲ್ಲಿಸಿದರು. ಭೈರಪ್ಪ ಅವರು ನಮ್ಮ ಮನೆಗೆ ಬರುವ ಮುನ್ನ ಅವರ ಇಬ್ಬರು ಮಕ್ಕಳಿಗೂ ವಿಷಯ ತಿಳಿಸಿದ್ದೆ. ಆದರೆ, ಮಕ್ಕಳು ಯಾವಾಗ ಕೋರ್ಟ್ ಕೇಸ್ ಹಾಕಿದರೋ ಆಗ ಅವರಿಗೆ ದೊಡ್ಡ ಆಘಾತವಾಗಿತ್ತು. ಕೋರ್ಟ್‌ನಲ್ಲಿ ಅವರು ಮಾತನಾಡಿದ್ದನ್ನು ಕಂಡು ಅವರರಿಗೆ ಯಾವುದೇ ಮರೆವಿನ ಕಾಯಿಲೆ ಎಂದು ನ್ಯಾಯಾಧೀಶರೆ ಹೇಳಿದ್ದರು. ಆದರೆ, ಮಕ್ಕಳೇ ಕೇಸ್ ಹಾಕಿದ್ದ ದುಃಖ ಅವರನ್ನು ಕಾಡಲು ಶುರುಮಾಡಿತು. ನಂತರ ಅವರು ಮೊದಲು ಮಾಡಿದ್ದ ವಿಲ್ ಅನ್ನು ಬದಲಾವಣೆ ಮಾಡಲು ನಿರ್ಧರಿಸಿದರು ಎಂದು ವಿಶ್ವೇಶ್ವರ ಭಟ್ ತಿಳಿಸಿದರು.
ನಾನು ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಅವರ ಮಕ್ಕಳಿಗೆ ಮನವಿ ಮಾಡಿದ್ದೆ. ಭೈರಪ್ಪ ಅವರು ಒಂದು ದಿವಸ ಲಾಯರ್‌ನ ಭೇಟಿಯಾಗಿ, ನನ್ನ ಅಂತ್ಯ ಸಂಸ್ಕಾರವನ್ನು ಸಹನಾ ಅವರೇ ಮಾಡಬೇಕು, ಮಕ್ಕಳು ಯಾರೂ ಬರಬಾರದು ಎಂದು ಹೇಳಿದ್ದರು. ಭೈರಪ್ಪ ಅವರ ನಿಧನಕ್ಕಿಂತ ಈ ವಿಚಾರಗಳು ದೊಡ್ಡ ಸುದ್ದಿಯಾಗುವುದು ಬೇಡ ಎಂದು ನಾವು ಆಗ ಏನೂ ಹೇಳಿರಲಿಲ್ಲ. ಆದರೆ, ಸಹನಾ ಮತ್ತು ಅರುಣ್ ಅವರ ಮೇಲೆ ಕೇಸ್ ಹಾಕಲಾಗಿದೆ. ಅವರು ಕೋರ್ಟ್‌ಗೆ ಅಲೆಯುತ್ತಿದ್ದಾರೆ ಎಂದು ಹೇಳಿದರು.
ಸಹನಾ ಬಗ್ಗೆ ಭೈರಪ್ಪ ಅವರು ಯಾವಾಗಲೂ ಹೇಳುತ್ತಿದ್ದರು. ತಮ್ಮ ಪರಂಪರೆಯನ್ನು ಕನ್ನಡದಲ್ಲಿ ಮುಂದುವರಿಸುವ ಯಾರಾದರೂ ಇದ್ದರೆ ಅದು ಸಹನಾ ಎಂದು ಅವರು ಹೇಳುತ್ತಿದ್ದರು. ಭೈರಪ್ಪ ಅವರನ್ನು ಸಹನಾ ಎಷ್ಟು ಕಾಳಜಿಯಿಂದ ನೋಡಿಕೊಂಡಿದ್ದಾರೆ ಎಂಬುವುದು ನನಗೆ ಗೊತ್ತು.
ಅದೇ ರೀತಿ ಅರುಣ್ ಅವರನ್ನು ಮಾತನಾಡಿದಾಗ, ಏಳು ತಿಂಗಳ ಅವಧಿಯಲ್ಲಿ ಭೈರಪ್ಪ ಅವರ ಅನೇಕ ಪುಸ್ತಕಗಳು ಮರು ಮುದ್ರಣಗೊಂಡು, ಮಾರಾಟವಾಗಿದೆ. ದೊಡ್ಡ ಮೊತ್ತದ ರಾಯಲ್ಟಿ ಹಣ ನನ್ನ ಬಳಿ ಎಂದು ಅರುಣ್ ಹೇಳಿದರು. ಪುಸ್ತಕ ಪುಸ್ತಕಕ್ಕೆ ಸಾಹಿತ್ಯ ಭಂಡಾರದವರು ಲೆಕ್ಕ ಇಟ್ಟಿದ್ದಾರೆ. ಹೀಗಾಗಿ ಉದಾತ್ತವಾದ ಉದ್ದೇಶದಿಂದ ಟ್ರಸ್ಟ್ ಆರಂಭವಾಗಿದೆ. ಡಾ.ಎಸ್.ಎಲ್.ಭೈರಪ್ಪ ಅವರ ಆಶಯ, ಅಂತಿಮ ಇಚ್ಛೆಯನ್ನು ಈಡೇರಿಸುವುದು ನಮ್ಮ ಪ್ರಥಮ ಕರ್ತವ್ಯವಾಗಿದೆ ಎಂದು ಹೇಳಿದರು.
11 ಮಕ್ಕಳಿಗೆ ಸ್ಕಾಲರ್‌ಶಿಪ್
ಡಾ.ಎಸ್.ಎಲ್.ಭೈರಪ್ಪ ಅವರ ಮಾತು, ನಡೆ-ನುಡಿ, ಅಕ್ಷರ ಮತ್ತು ಅವರ ಆಚರಣೆ ಎರಡೂ ಒಂದೇ ಇತ್ತು. ಅವರು ಏನು ಹೇಳಿದರೋ ಅದೇ ರೀತಿ ಬದುಕಿದರು. ಹೀಗಾಗಿ ಭೈರಪ್ಪನವರ ಆಶಯದಂತೆ ಈ ಟ್ರಸ್ಟ್ ಅನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಅವರು ಇದ್ದಾಗಲೇ ಒಂದಷ್ಟು ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಬೇಕು ಎಂದು ಹೇಳಿದ್ದರು. ಅದು ಸಾಧ್ಯವಾಗಲಿಲ್ಲ, ಹೀಗಾಗಿ ಇಂದು 11 ಮಂದಿಗೆ ಸ್ಕಾಲರ್‌ಶಿಪ್ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ʼಧರ್ಮಶ್ರೀʼ ಕಾದಂಬರಿ ಕುರಿತು ಜಿ ಬಿ ಹರೀಶ್ ಅವರು ಮಾತನಾಡಿದರು. ಭೈರಪ್ಪನವರ ಕೃತಿಗಳ ಮರಾಠಿ ಅನುವಾದಕರಾದ ಉಮಾ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್ ಎಲ್ ಭೈರಪ್ಪ ಪ್ರತಿಷ್ಠಾನದ ಟ್ರಸ್ಟಿಗಳಾದ ತೇಜಸ್ವಿನಿ ಅನಂತ್‌ಕುಮಾರ್, ಕೃಷ್ಣ ಪ್ರಸಾದ್, ಅರುಣ ಮತ್ತು ಸಹನಾ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.