ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yettinahole project: ವಾರದೊಳಗೆ ತುಮಕೂರಿಗೆ, ವರ್ಷದೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ಎನ್. ಚಲುವರಾಯಸ್ವಾಮಿ

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗ ಹಾಗೂ ತುಮಕೂರಿಗೆ ನೀರು ನೀಡುತ್ತೇವೆ ಎಂದು ಘೋಷಿಸಿದ್ದರು. ಅವರ ಘೋಷಣೆಯನ್ನು ಈಗ ನಿಜ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಯುತ್ತಿದ್ದು, ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

​ಬೆಂಗಳೂರು, ನ. 20: ಎತ್ತಿನಹೊಳೆ ಯೋಜನೆ (Yettinahole project) ಸಾಧ್ಯವೇ ಇಲ್ಲ ಎನ್ನುತ್ತಿದ್ದವರಿಗೆ ಈಗ ಉತ್ತರ ನೀಡುವ ಸಮಯ ಬಂದಿದೆ. ತುಮಕೂರಿಗೆ ವಾರದೊಳಗೆ ನೀರು ಹರಿಸಿ, ವರ್ಷಕ್ಕೂ ಮುನ್ನವೇ ಕೋಲಾರಕ್ಕೆ ನೀರು ನೀಡುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

​ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗ ಹಾಗೂ ತುಮಕೂರಿಗೆ ನೀರು ನೀಡುತ್ತೇವೆ ಎಂದು ಘೋಷಿಸಿದ್ದರು. ಅವರ ಘೋಷಣೆಯನ್ನು ಈಗ ನಿಜ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಯುತ್ತಿದ್ದು, ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗಿದೆ ಎಂದರು.

​ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ನೀರು ಹರಿಸಲಾಗುತ್ತಿದ್ದು, ಅಲ್ಲಿನ ಜನರ ಆನಂದವನ್ನು ಕಣ್ತುಂಬಿಕೊಳ್ಳುವ ಅವಕಾಶ ನನಗೆ ಸಿಕ್ಕಿದೆ. ಭದ್ರಾದಿಂದ 12 ಟಿಎಂಸಿ ನೀರು ಹರಿಸಲಷ್ಟೇ ನಮಗೆ ಅವಕಾಶವಿದೆ. ತುಂಗಾದಿಂದ ನೀರನ್ನು ಲಿಫ್ಟ್ ಮಾಡಿ, ಡಿಸೆಂಬರ್ 15 ರಿಂದ 25 ರೊಳಗೆ ಟ್ರಯಲ್ ರನ್ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

​ವರ್ಷದೊಳಗೆ ಎತ್ತಿನಹೊಳೆ ನೀರು!

ಕೋಲಾರ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸುವ ನಮ್ಮ ಬದ್ಧತೆಯನ್ನು ಈಡೇರಿಸುವ ಮೊದಲ ಹಂತವಾಗಿ ತುಮಕೂರಿಗೆ ಇದೇ ತಿಂಗಳೊಳಗೆ ಟ್ರಯಲ್ ರನ್ ಮಾಡಿ ನೀರು ಹರಿಸಲಾಗುವುದು. ಜೂನ್ 15 ರಿಂದ ಅಕ್ಟೋಬರ್ 31 ರವರೆಗಷ್ಟೇ ಎತ್ತಿನಹೊಳೆ ನೀರನ್ನು ಲಿಫ್ಟ್ ಮಾಡಲು ನಮಗೆ ಅನುಮತಿ ಇದೆ. ಹೀಗಾಗಿ ನೀರನ್ನು ಶೇಖರಿಸಿ ಬಳಸಿಕೊಳ್ಳಬೇಕಿದೆ.

ಟ್ರಯಲ್ ರನ್‌ಗೆ ನೀರು ಲಿಫ್ಟ್ ಮಾಡಲು ಅವಕಾಶ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಕೇಂದ್ರ ಸರ್ಕಾರ ಅವಕಾಶ ನೀಡಿದರೆ, ವಾರದೊಳಗೆ ತುಮಕೂರಿಗೆ ನೀರು ಹರಿಸಲಾಗುವುದು ಎಂದರು.

​ಹಾಸನ, ಚಿಕ್ಕಮಗಳೂರು, ಕಡೂರಿಗೆ ಈಗಾಗಲೇ ಎತ್ತಿನಹೊಳೆ ನೀರು ಹರಿಯುತ್ತಿದೆ. ತಿಪಟೂರು, ಗುಬ್ಬಿವರೆಗೂ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ. ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

​ಈ ಯೋಜನೆಗೆ ಈಗಾಗಲೇ 19 ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ. ಯೋಜನೆಯ ಒಟ್ಟು 252.61 ಕಿ.ಮೀ.ನಲ್ಲಿ ಈಗಾಗಲೇ 232 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು ಏಳು ಜಿಲ್ಲೆಗಳ ಜನರಿಗೆ ಈ ಯೋಜನೆ ಅನುಕೂಲವಾಗಲಿದೆ. ಆರ್ಥಿಕ ಸಮಸ್ಯೆಗಳಿದ್ದರೂ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತಿದೆ. ಫೆಬ್ರವರಿಯೊಳಗೆ ಎರಡು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಗೆ ಈಗಾಗಲೇ ಸಿಎಂ ಬಳಿ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

​ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕಾಮಗಾರಿಗಾಗಿ ದುಡಿಯುತ್ತಿದ್ದಾರೆ. ಈ ಯೋಜನೆ ಇತಿಹಾಸದಲ್ಲಿ ಉಳಿಯಲಿದೆ. ಹೀಗಾಗಿ ನಿರಂತರವಾಗಿ ಈ ಯೋಜನೆಗಾಗಿಯೇ ಶ್ರಮಿಸಲಾಗುತ್ತಿದೆ. ಈ ಯೋಜನೆ ಮೂಲಕ ಒಟ್ಟು 527 ಕೆರೆಗಳನ್ನು ತುಂಬಿಸಲಾಗುವುದು. ಯೋಜನೆಗಿದ್ದ ಎಲ್ಲಾ ಸಮಸ್ಯೆಗಳು ಇತ್ಯರ್ಥಗೊಂಡಿವೆ. ಫೀಡರ್ ಕ್ಯಾನಲ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕೇವಲ ಐದು ಕಿ.ಮೀ.ನಷ್ಟು ಕಾಮಗಾರಿ ಮಾತ್ರ ಬಾಕಿ ಇದೆ.

​ಜೂನ್‌ನಿಂದ ಅಕ್ಟೋಬರ್‌ವರೆಗೂ ಒಟ್ಟು 24 ಟಿಎಂಸಿ ನೀರನ್ನಷ್ಟೇ ಸಕಲೇಶಪುರದ ಹೊಂಗದಹಳ್ಳದಿಂದ ಲಿಫ್ಟ್ ಮಾಡಲು ಅವಕಾಶವಿದೆ. ಸಂಪೂರ್ಣ ಪ್ರಮಾಣದಲ್ಲಿ ನೀರು ಲಿಫ್ಟ್ ಆದರೆ, ಈ ನೀರನ್ನು ಶೇಖರಿಸಿ ವರ್ಷಪೂರ್ತಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಗ್ಯಾರಂಟಿ ಯೋಜನೆ ಕಾಪಿ ಮಾಡಿದ ಮೋದಿ

​ಕಾಂಗ್ರೆಸ್ ಏನು ಮಾಡಿದೆ ಎನ್ನುವವರಿಗೆ ಉತ್ತರ ನೀಡಿದ ಸಚಿವರು, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದೆ, ಸಂವಿಧಾನ ನೀಡಿದೆ. ದೇಶಕ್ಕೆ ಮೊದಲ ಪ್ರಧಾನಿ ನೀಡಿದ್ದು ಸಹ ಕಾಂಗ್ರೆಸ್. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ (2023) ಬಂದ ಮೊದಲ ಕ್ಯಾಬಿನೆಟ್‌ನಲ್ಲಿಯೇ ಐದು ಗ್ಯಾರಂಟಿಗಳನ್ನು ಘೋಷಿಸಿ, ಈ ವರೆಗೂ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ದ ಪ್ರಧಾನಿ ಮೋದಿ ಅವರೇ, ಇತರೆ ರಾಜ್ಯಗಳಲ್ಲಿ ಚುನಾವಣೆ ವೇಳೆ ಇದೇ ಗ್ಯಾರಂಟಿ ಯೋಜನೆಗಳನ್ನೇ ಕಾಪಿ ಹೊಡೆದಿದ್ದಾರೆ ಎಂದರು.

​ಕಾವೇರಿ ಸಮಸ್ಯೆಗಳಿಂದ ತಾತ್ಕಾಲಿಕವಾಗಿ ಪಾರಾಗಿದ್ದೆವೆ

ಕಾವೇರಿ ಸಮಸ್ಯೆ ಎದುರಿಸಲಿ ಎಂಬ ಕಾರಣಕ್ಕೆ ನಿಮಗೆ ಜಲಸಂಪನ್ಮೂಲ ಖಾತೆ ನೀಡಿದ್ದಾರೆ ಎಂದು ಹಲವರು ರೇಗಿಸುತ್ತಿದ್ದರು. ನಾನು ಈ ಖಾತೆ ವಹಿಸಿಕೊಂಡ ದಿನದಿಂದಲೇ ಕಾವೇರಿ ವಿವಾದ ಎದುರಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು, ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸದ್ಯದ ಮಟ್ಟಿಗೆ ಕಾವೇರಿ ಸಮಸ್ಯೆಗಳಿಂದ ಪಾರಾಗಿದ್ದೇವೆ ಎಂಬ ಸಮಾಧಾನ ಇದೆ ಎಂದರು.

​11 ಟಿಎಂಸಿ ಹೆಚ್ಚುವರಿ ನೀರು ಹರಿಸಬೇಕೆಂಬ ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದು ತಮಿಳುನಾಡಿನ ಹಿನ್ನಡೆ ಎನ್ನುವುದಕ್ಕಿಂತ ವಾಸ್ತವವಾಗಿ ನಮ್ಮ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ ಅಷ್ಟೇ. ನಮ್ಮ ರಾಜ್ಯದಲ್ಲಿಯೇ ನೀರಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದರು.

​ಸಿಡಬ್ಲ್ಯೂಆರ್‌ಸಿ (CWRC), ಸಿಡಬ್ಲ್ಯೂಎಂಎ (CWMA) ಗೆ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನವಿದೆ. ಅದರಂತೆಯೇ ಎರಡು ರಾಜ್ಯಗಳಿಗೂ ಸಮತೋಲನ ಮಾಡಿ ನೀರು ನೀಡಿದೆ. ನಮಗೆ ಪೂರ್ಣ ಪ್ರಮಾಣದ ಅನ್ಯಾಯ ಎನ್ನುವುದಕ್ಕಿಂತ ಎರಡ್ಮೂರು ಬಾರಿ ನೀರನ್ನು ಹೆಚ್ಚಾಗಿ ತಮಿಳುನಾಡಿಗೆ ಹರಿಸುವಂತೆ ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಆದೇಶ ನೀಡಿರುವ ನೋವಿದೆ. ಈಗ 2 ಸಾವಿರ ಕ್ಯೂಸೆಕ್ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಆದೇಶ ನೀಡಿದೆ ಎಂದರು.

ಮಾತುಕತೆಗೆ ಮುಂದಾದ ಸಿಎಂ

​ಅಂತರರಾಜ್ಯ ಜಲ ವಿವಾದಗಳ ನಿವಾರಣೆಗಾಗಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳೊಂದಿಗೆ ನಮ್ಮ ಸಿಎಂ ಈಗಾಗಲೇ ಮಾತುಕತೆ ನಡೆಸುತ್ತಿದ್ದಾರೆ. ಈ ಮೊದಲು ಅನ್ಯರಾಜ್ಯಗಳ ಸಿಎಂಗಳು ಮಾತನಾಡುತ್ತಲೇ ಇರಲಿಲ್ಲ. ಈಗ ಮಾತುಕತೆಗೆ ಮುಂದಾಗುತ್ತಿರುವುದು ವಿಶೇಷ. ಈ ಮಾತುಕತೆಗಳು ಜಲ ವಿವಾದಗಳನ್ನು ಬಗೆಹರಿಸಲಿವೆ ಎಂಬ ವಿಶ್ವಾಸ ಇದೆ ಎಂದರು.

​ಎಚ್.ಡಿ.ಕೆ. ತಲೆ ಬೋಳಿಸಿಕೊಳ್ತಾರಾ?

ಎತ್ತಿನಹೊಳೆ ಯೋಜನೆ ಮೂಲಕ ರಾಜ್ಯದ ಹಣ ಅನಾವಶ್ಯಕವಾಗಿ ಪೋಲು ಮಾಡುತ್ತಿದ್ದಾರೆ ಎಂಬ ವಿರೋಧಿಗಳ ಟೀಕೆಗಳು ಈಗ ಎಲ್ಲಿಗೆ ಹೋಗಿವೆ? ಎತ್ತಿನಹೊಳೆ ಯೋಜನೆ ಸಾಕಾರಗೊಂಡರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ಈಗ ಅವರು ಆ ಕೆಲಸ ಮಾಡ್ತಾರಾ? ಎಂದು ಸಚಿವರು ಪ್ರಶ್ನಿಸಿದರು.

ಎಚ್.ಡಿ.ಕೆ. ಈಗ ಹೇಳಿದ್ದ ಹೇಳಿಕೆಯನ್ನು ಮರುದಿನ ಹೇಳಿಯೇ ಇಲ್ಲ ಎನ್ನುತ್ತಾರೆ. ಕಾವೇರಿ ವಿಚಾರವಾಗಿ ಅವರ ತಂದೆ ದೆಹಲಿಗೆ ಪತ್ರ ಬರೆಯುತ್ತಾರೆ. ಇವರು ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ ಅಷ್ಟೇ ಎಂದು ಟೀಕಿಸಿದರು.

​ಕುಮಾರಸ್ವಾಮಿ ನಿದ್ದೆ ಮಾಡಿಲ್ಲ!

ಯಾರಿಗೆ ಯಾವಾಗ ಹಣೆಬರಹ ಇದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಡಿಕೆಶಿ ಈಗ ಸಿಎಂ ಆಗಿದ್ದಾರೆ. ಅವರು ಕೆಲಸ ಮಾಡಲಿ ಎನ್ನುವುದನ್ನು ಬಿಟ್ಟು, ಡಿಕೆಶಿ ಸಿಎಂ ಆದ ದಿನದಿಂದ ಅವರ ಬಗ್ಗೆಯೇ ಎಚ್‌ಡಿಕೆ ಮಾತನಾಡುತ್ತಾರೆ. ಅಂದಿನಿಂದ ಅವರು ನಿದ್ದೆ ಮಾಡಿಲ್ಲ ಎಂದು ಸಚಿವರು ವಾಗ್ದಾಳಿ ನಡೆಸಿದರು.

ಈಗ ಎನ್‌ಡಿಎಗೆ ಜೆಡಿಎಸ್ ಸೇರಿದೆ. ಅವರು ಯಾರನ್ನು ಬೇಕಿದ್ದರೂ ಹಿರಿಯೂರಿನಲ್ಲಿ ಅಭ್ಯರ್ಥಿಯನ್ನಾಗಿ ಮಾಡಲಿ. ನಾವು ಫೈಟ್ ಮಾಡಲೇಬೇಕು, ಮಾಡುತ್ತೇವೆ. ಜೆಡಿಎಸ್-ಬಿಜೆಪಿ ಒಂದಾಗಿರುವುದರಿಂದ ನಮಗೆ ಯಾವುದೇ ಭಯ ಇಲ್ಲ ಎಂದರು.

image

"ಹಂತಹಂತವಾಗಿ ಯೋಜನೆಯನ್ನು ಕೈಗೊಳ್ಳಬೇಕು. ಹೀಗಾಗಿ ಆದ್ಯತೆಯ ಮೇರೆಗೆ ನವಿಲೆ ಡ್ಯಾಂ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ."

-ಎನ್.ಚಲುವರಾಯಸ್ವಾಮಿ, ಜಲಸಂಪನ್ಮೂಲ ಸಚಿವ