ಬೆಂಗಳೂರು: ಆನೆ ಸ್ಥಳಾಂತರದ ವಿಚಾರವಾಗಿ ಅರಣ್ಯ ಸಚಿವರ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ (K M Shivalinge Gowda) ಹೇಳಿದ್ದಾರೆ. ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಸಚಿವರು ಮಾತನಾಡಿದರು.
ನಯನಾ ಮೋಟಮ್ಮ ರಾಜೀನಾಮೆ ಅವರ ಭಾವನೆ, ಅವರ ಇಚ್ಛಾಶಕ್ತಿ. ಅರಣ್ಯ ಸಚಿವರ ಆದೇಶವನ್ನು ನಾವು ಪಾಲನೆ ಮಾಡಿಕೊಂಡು ಬಂದಿದ್ದೇವೆ. ನಯನಾ ಮೋಟಮ್ಮ ನನ್ನ ಹೆಸರೇನೂ ಹೇಳಿಲ್ಲ. ಇದರಲ್ಲಿ ರಾಜಕಾರಣ ಒಳ್ಳೆಯದಲ್ಲ ಎಂದರು.
ನಾನು ನಿನ್ನೆ ರಾತ್ರಿ ನಯನಾ ಅವರೊಂದಿಗೆ ಮಾತಾಡಿದ್ದೇನೆ. ದಯವಿಟ್ಟು ಟ್ಯಾಕಲ್ ಮಾಡಿ ಅಂತ ಹೇಳಿದ್ದೇನೆ. ನನ್ನ ಅಭಿಪ್ರಾಯವನ್ನು ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಮನವೊಲಿಕೆ ಆಗೋದು ಬಿಡೋದು ಅವರಿಗೆ ಬಿಟ್ಟಿದ್ದು. ನಮ್ಮಲ್ಲಿ ಅರಣ್ಯವಿಲ್ಲ. ಆನೆ ಬಂದು ಬಿಟ್ಟಿದೆ. ರೈತರ ಜಮೀನಲ್ಲಿ ಆನೆ ಮೇಯೋಕೆ ಬಿಡೋಕೆ ಆಗುತ್ತಾ?. ಭದ್ರಾ ಅಭಯಾರಣ್ಯ ಇದೆ. ಅಲ್ಲಿ ಆನೆ ಬಿಡುವ ನಿರ್ಧಾರ ಆಗಿದೆ. ಆನೆಯನ್ನು ಚಿಕ್ಕಮಗಳೂರು ಮಾರ್ಗವಾಗಿಯೇ ತೆಗೆದುಕೊಂಡು ಹೋಗಬೇಕು. ಅಭಯಾರಣ್ಯಕ್ಕೆ ತಗೊಂಡು ಹೋಗಿ ಬಿಡ್ತೇವೆ ಎಂದು ಆದೇಶವಿದೆ ಎಂದು ಸ್ಪಷ್ಟಪಡಿಸಿದರು.
ಒಂದು ಲಕ್ಷ ಹೆಕ್ಟೇರ್ ಜಾಗ ಇರುವ ಅಭಯಾರಣ್ಯ ಅದು. ಇವರ ಆತಂಕ ಅಂದರೆ ಅಲ್ಲೇ ಬಿಟ್ ಬಿಡ್ತಾರೇನೋ ಅಂತ. 15 ದಿನ ಸ್ವಲ್ಪ ತೊಂದರೆ ಆಗಬಹುದು ಅಷ್ಟೇ ಎಂದರು.