ಬೆಂಗಳೂರು, ನ.12: “ಪ್ರಧಾನ ಮಂತ್ರಿಗಳು (PM Narendra Modi) ರಾಜ್ಯಕ್ಕೆ ಬರುತ್ತಿದ್ದು, ನಾವು ಅವರನ್ನು ಗೌರವಯುತವಾಗಿ ಸ್ವಾಗತಿಸಿ, ಗೌರವಯುತವಾಗಿ ನಮ್ಮ ರಾಜ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರು ತಿಳಿಸಿದರು. ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿ ವೇಳೆ ಹಾಗೂ ವಿಕಾಸಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಪ್ರಧಾನಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಏನಾದರೂ ಮನವಿ ಸಲ್ಲಿಸುತ್ತೀರಾ ಎಂದು ಕೇಳಿದಾಗ, “ಕರ್ನಾಟಕ ರಾಜ್ಯದಿಂದ ಭಾರತ ದೇಶಕ್ಕೆ ಗೌರವ ಬರುವ ವಿಚಾರ ಇದೆ. ಹೀಗಾಗಿ ಅವರು ನಮಗೆ ಸಹಕಾರ ನೀಡಬೇಕು, ನಾವು ಅವರಿಗೆ ಸಹಕಾರ ನೀಡಬೇಕು” ಎಂದು ತಿಳಿಸಿದರು.
ಪಿಂಕ್ ಲೈನ್ ಉದ್ಘಾಟನೆ ಕರ್ನಾಟಕದ ಹೆಮ್ಮೆ
ಪ್ರಧಾನಮಂತ್ರಿಗಳ ಭೇಟಿ ಹಾಗೂ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ (Namma Metro Pink Line) ಬಗ್ಗೆ ಕೇಳಿದಾಗ, “ಬೆಂಗಳೂರಿನ ಮೆಟ್ರೊ ಪಿಂಕ್ ಲೈನ್ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಂಕ್ ಲೈನ್ ಉದ್ಘಾಟನೆ ಕರ್ನಾಟಕದ ಹೆಮ್ಮೆಯ ವಿಚಾರವಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹಲವು ವಿಚಾರಗಳು ಇನ್ನೂ ಬಾಕಿ ಇವೆ. ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಕೆಲಸಗಳು ಆಗಬೇಕಿವೆ. ಮೈಸೂರಿನಲ್ಲಿಯೂ ಕೆಲವು ಕಾರ್ಯಕ್ರಮಗಳಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ಕೆಲವು ವಿಷಯ ಖಾಸಗಿಯಾಗಿ ಚರ್ಚಿಸಲು ಪ್ರಧಾನಿಗಳ ಸಮಯ ಕೇಳಿರುವೆ
ಬರ ಪರಿಹಾರದ ಬಗ್ಗೆ ಚರ್ಚೆ ಮಾಡುವಿರಾ ಎಂದು ಕೇಳಿದಾಗ, “ಖಂಡಿತವಾಗಿ ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇವೆ. ಆದರೆ ನಾನು ಅವರೊಂದಿಗೆ ಏನು ಚರ್ಚೆ ಮಾಡುತ್ತೇನೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಖಾಸಗಿಯಾಗಿ ಕೆಲವು ವಿಚಾರಗಳ ಚರ್ಚೆ ಮಾಡಲು ಸಮಯ ಕೇಳಿದ್ದು, ಅವರು ದೆಹಲಿಗೆ ಆಗಮಿಸುವಂತೆ ತಿಳಿಸಿದ್ದಾರೆ” ಎಂದರು.