ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು (Majestic Bus Station) ಸಿಂಗಾಪುರ್‌ಗಿಂತಲೂ ಉತ್ತಮವಾಗಿ, ಅಂತಾರಾಷ್ಟ್ರೀಯಮಟ್ಟದ ಬಸ್ ನಿಲ್ದಾಣ ಮಾಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಸಾರಿಗೆ ಸಚಿವರು ಉತ್ತರ ನೀಡಿದ್ದಾರೆ.
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ಬಸ್ ನಿಲ್ದಾಣದ ಮಾದರಿಯಲ್ಲಿ ಮರು ಅಭಿವೃದ್ಧಿ ಮಾಡಬೇಕು. ಮೆಜೆಸ್ಟಿಕ್ ನಿಲ್ದಾಣ 40 ಎಕರೆ ಜಾಗದಲ್ಲಿ ಮೆಟ್ರೋ, ಕೆಎಸ್‌ಆರ್‌ಟಿಸಿ ಸ್ವಲ್ಪ ಜಾಗ ನೀಡಲಾಗಿದೆ. 32 ಎಕರೆ ಜಾಗ ಬಸ್ ನಿಲ್ದಾಣಕ್ಕೆ ಉಳಿಯಲಿದೆ. ಚದರ ಅಡಿಗೆ 1 ಲಕ್ಷ ಬೆಲೆ ಇದೆ. ಈ ಜಾಗವನ್ನು ವಾಣಿಜ್ಯ ಬಳಕೆಗೆ ಬಳಕೆ ಆಗುವಂತೆ ಅಭಿವೃದ್ಧಿ ಮಾಡಬೇಕು.
1.40 ಕೋಟಿ ಜನರು ಬೆಂಗಳೂರಿನಲ್ಲಿ ಇದ್ದಾರೆ. ಈ ಜಾಗ 20-30 ಸಾವಿರ ಕೋಟಿ ಬೆಲೆ ಬಾಳುತ್ತಿದೆ. ಪಿಪಿಪಿ ಮಾಡೆಲ್‌ನಲ್ಲಿ ಅಭಿವೃದ್ಧಿ ಮಾಡುವುದಾಗಿ ಸರ್ಕಾರ ಹೇಳಿದೆ. ಸಿಂಗಾಪುರ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಸ್ ನಿಲ್ದಾಣ ಅಭಿವೃದ್ಧಿ ಮಾಡಬೇಕು. ಬಿಎಂಟಿಸಿ ಸಾಲದಲ್ಲಿ ನಡೆಯುತ್ತಿದೆ. ಹೀಗಾಗಿ ಇಲ್ಲಿ ಕಾಂಪ್ಲೆಕ್ಸ್ ಅಭಿವೃದ್ಧಿ ಮಾಡಿದರೆ ಹೆಚ್ಚು ಲಾಭ ಬರಲಿದೆ. ಇದರಿಂದ ನಿಗಮಕ್ಕೆ ವರಮಾನ ಬರಲಿದೆ ಎಂದು ನಾಗರಾಜ್ ಯಾದವ್ ಒತ್ತಾಯ ಮಾಡಿದರು.
ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿ, ಮೆಜೆಸ್ಟಿಕ್‌ನಲ್ಲಿ 32 ಎಕರೆ ಜಾಗ ಇದೆ. ಬಸ್‌ಗಳು ನಿತ್ಯ 11 ಸಾವಿರ ಟ್ರಿಪ್ ಓಡಾಡುತ್ತದೆ. ಇಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಮಾಡುವ ಉದ್ದೇಶ ಇದೆ. ಸಿಂಗಾಪುರ್‌ಗಿಂತ ಉತ್ತಮ ನಿಲ್ದಾಣ ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ವರದಿ ಪಡೆಯಲು ಕ್ರಮವಹಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್‌ನಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ. ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಹೆಸರಿನಲ್ಲಿ ಇದನ್ನು ಮಾಡುತ್ತೇವೆ. ಸರ್ಕಾರ- ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಮಾಡಲಿದ್ದು, ಅಡ್ವೈಸರಿ ಪಡೆಯಲು ನಾವು ಮುಂದಾಗಿದ್ದೇವೆ. ಸಿಂಗಾಪುರ್‌ಗಿಂತ ಉತ್ತಮವಾಗಿ ಅಂತಾರಾಷ್ಟ್ರೀಯಮಟ್ಟದ ಬಸ್ ನಿಲ್ದಾಣ ಮಾಡುತ್ತೇವೆ ಎಂದು ತಿಳಿಸಿದರು.
3 ವರ್ಷಗಳಲ್ಲಿ 800 ಸರ್ಕಾರಿ ಶಾಲೆಗಳು ಕೆಪಿಎಸ್ ಆಗಿ ಮೇಲ್ದರ್ಜೆಗೆ
ಬೆಂಗಳೂರು: ಮಕ್ಕಳಿಗೆ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುವರೆಗೂ ಶಿಕ್ಷಣವನ್ನು ಖಾತ್ರಿಗೊಳಿಸಲು ಒಂದೇ ಸೂರಿನಡಿ ಶಿಕ್ಷಣಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆ. ಪ್ರಸ್ತುತ ಇರುವ 309 ಕೆಪಿಎಸ್‌ಗಳಲ್ಲಿ 2,72,464 ವಿದ್ಯಾರ್ಥಿಗಳು ಇದ್ದಾರೆ. ಮೂರು ವರ್ಷಗಳಲ್ಲಿ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.