CJ Roy Death: ತಾವೇ ಎದೆಗೆ ಗುಂಡು ಹಾರಿಸಿಕೊಂಡ ಸಿ.ಜೆ.ರಾಯ್; ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ
ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಗುಂಡು ಹಾರಿಸಿಕೊಂಡಿದ್ದರಿಂದ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶಕ್ಕೆ ಹಾನಿ ಮಾಡಿದೆ. ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಉದ್ಯಮಿ ಸಿ.ಜೆ.ರಾಯ್ -
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಡಾ. ಸಿ.ಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಸಿ.ಜೆ.ರಾಯ್ ಅವರು ತಾವೇ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ (post mortem report) ದೃಢಪಟ್ಟಿದೆ. ಅವರ ದೇಹದಿಂದ 6.35 ಮಿಲಿ ಮೀಟರ್ ಗಾತ್ರದ ಬುಲೆಟ್ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂಎನ್ ಅರವಿಂದ್ ಮಾತನಾಡಿ, ಬುಲೆಟ್ ಸಿ.ಜೆ.ರಾಯ್ ಎದೆಯ ಎಡಭಾಗಕ್ಕೆ ಹೊಕ್ಕಿದೆ. ಅದು ದೇಹದಿಂದ ಹೊರಹೋಗದೆ ಒಳಗೆ ಉಳಿದಿದೆ. 6.35 ಮಿಲಿಮೀಟರ್ ಗಾತ್ರದ ಬುಲೆಟ್ ಹೃದಯ, ಶ್ವಾಸಕೋಶದ ಕೆಳಭಾಗ ಮತ್ತು ಡಯಾಫ್ರಮ್‌ಗೆ ಹಾನಿ ಮಾಡಿದೆ. ಬುಲೆಟ್ ಹಿಂದಿನ ಪಕ್ಕೆಲುಬುಗಳವರೆಗೆ ತಲುಪಿತ್ತು. ಸಿಜೆ ರಾಯ್ ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತದೇಹದಿಂದ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ಮತ್ತು ಗುಂಡು ಹಾರಿದ ಬಗ್ಗೆ ಬೆರಳಚ್ಚು ಪರೀಕ್ಷೆಗಾಗಿ ಕೈ ಮತ್ತು ಬೆರಳಿನ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಡಾ. ಅರವಿಂದ್ ಮಾಹಿತಿ ನೀಡಿದ್ದಾರೆ.
ವರದಿಯಲ್ಲೇನಿದೆ?
ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಟ್ರಿಗರ್ ಒತ್ತಿದ್ದಾರೆ. ಅತ್ಯಂತ ಸಮೀಪದಿಂದ ಗುಂಡು ಹಾರಿಸಿಕೊಂಡಿದ್ದರಿಂದ ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ, ಬದಲಾಗಿ ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ. ಪಾಕೆಟ್ ಗನ್‌ನಿಂದ ಹಾರಿದ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶ ಮತ್ತು ರಕ್ತನಾಳಗಳ ಮೂಲಕ ಹಾದುಹೋಗಿ ಕೊನೆಗೆ ಬೆನ್ನಿನ 11ನೇ ಪಕ್ಕೆಲುಬಿನ ಬಳಿ ಸಿಲುಕಿಕೊಂಡಿದೆ.
ಪರವಾನಗಿ ಹೊಂದಿದ್ದ ಪಿಸ್ತೂಲ್
ಆತ್ಮಹತ್ಯೆಗೆ ಬಳಸಲಾದ NP bore 0.25 ಪಿಸ್ತೂಲ್ ಸಿಜೆ ರಾಯ್ ಅವರ ಹೆಸರಿನಲ್ಲೇ ಪರವಾನಗಿ ಪಡೆದಿದ್ದ ಆಯುಧ ಎಂಬುದು ಖಚಿತವಾಗಿದೆ. ಪೊಲೀಸರು ಈ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸಿಜೆ ರಾಯ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಅವರ ಮೊಬೈಲ್ ಫೋನ್‌ನ ಡೇಟಾ ಪಡೆಯಲು ಸಿಐಡಿ ಸೈಬರ್ ಸೆಲ್‌ಗೆ ಕಳುಹಿಸಲಾಗಿದೆ. ಯಾವುದೇ ಸಾಲಬಾಧೆ ಅಥವಾ ಶತ್ರುಗಳಿಲ್ಲದಿದ್ದರೂ, ಐಟಿ ಅಧಿಕಾರಿಗಳ ಒತ್ತಡವಿತ್ತೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
CJ Roy Death: ಸಿಜೆ ರಾಯ್ ಅಂತಿಮ ಕ್ಷಣದಲ್ಲಿ ಯಾರ ಜತೆ ಮಾತಾಡಿದ್ರು? ಪತ್ತೆಗೆ ಮೊಬೈಲ್ ಸಿಐಡಿ ಸೈಬರ್ ಸೆಲ್‌ಗೆ
ಅಂತ್ಯಕ್ರಿಯೆ ಎಲ್ಲಿ?
ಸಿಜೆ ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಜ್ಜಾಗಿದ್ದಾರೆ. ನಟ ಮೋಹನ್‌ಲಾಲ್ ಸೇರಿ ಹಲವು ಗಣ್ಯರು ರಾಯ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.