ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼಬಂದರೋ ಬಂದರೋ ಭಾವ ಬಂದರೋʼ; ರಿಕ್ಕಿ ರೈ ಕಾರು ಡ್ರಿಫ್ಟಿಂಗ್‌ ಮಾಡಿಲ್ಲ ಎಂದ ವಕೀಲರ ಕಾಲೆಳೆದ ಪೊಲೀಸರು!

Lamborghini stunt: ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪೋಸ್ಟ್‌ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ ಎಂದು ಸಲಹೆ ನೀಡಿದ್ದಾರೆ.

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತು ವಕೀಲ ನಾರಾಯಣ ಸ್ವಾಮಿ.

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣದಲ್ಲಿ (Lamborghini stunt) ಮಾಜಿ ಡಾನ್​ ಮುತ್ತಪ್ಪ ರೈ ಮಗ ರಿಕ್ಕಿ ರಾಯ್ (Ricky Rai) ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಉದ್ದೇಶಪೂರ್ವಕವಾಗಿ ಕಾರು ಡ್ರಿಫ್ಟಿಂಗ್‌ ಮಾಡಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಮೂಲಕ ತಿಳಿಯುತ್ತದೆ. ಆದರೂ, ರಿಕ್ಕಿ ರೈ ಪರ ವಕೀಲರು ಮಾತ್ರ ಕಾರು ಸ್ಕಿಡ್​ ಆಗಿದ್ದರಿಂದ ಈ ರೀತಿಯಾಗಿದೆ ಎಂದು ಹೇಳಿದ್ದರು. ಹೀಗಾಗಿ ಅವರ ಹೇಳಿಕೆಗೆ ಪೋಸ್ಟ್‌ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಕಾಲೆಳೆದಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಮಾರ್ಚ್‌ 21ರ ರಾತ್ರಿ ಲ್ಯಾಂಬೋರ್ಗಿನಿ ಕಾರಿನಿಂದ ಡ್ರಿಫ್ಟಿಂಗ್‌ ಮಾಡಲಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಕಾರನ್ನು ಮಾಜಿ ಡಾನ್​ ಮುತ್ತಪ್ಪ ರೈ ಅವರ ಮಗ ರಿಕ್ಕಿ ರಾಯ್​ ಚಾಲನೆ ಮಾಡುತ್ತಿದ್ದರು ಎಂಬುವುದು ವಿಡಿಯೊ ಮೂಲಕ ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ರಿಕ್ಕಿ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದರು.

Lamborghini stunt in Bengaluru: ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಕೇಸ್‌ನಲ್ಲಿ ರಿಕ್ಕಿ ರೈಗೆ ರಿಲೀಫ್‌; ಕೋರ್ಟ್‌ನಿಂದ ಜಾಮೀನು ಮಂಜೂರು

ಪ್ರಕರಣ ಸಂಬಂಧ ಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ವರ ಪರ ವಕೀಲರು ಮಾತ್ರ ಬೇರೆಯದೇ ಹೇಳಿಕೆ ನೀಡುವ ಮೂಲಕ ಟೀಕೆಗೆ ಒಳಗಾಗಿದ್ದಾರೆ. ರಸ್ತೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಕಾರು ಸ್ಕಿಡ್​ ಆಗಿತ್ತಷ್ಟೇ. ಅಷ್ಟಕ್ಕೂ ರಿಕ್ಕಿ ರೈ ಕಾರು ಚಾಲನೆಯೇ ಮಾಡಿಲ್ಲ, ಅವರ ಡ್ರೈವರ್‌ ಓಡಿಸಿದ್ದಾರೆ. ಕಾರು ಚಾಲಕನ ಟ್ಯಾಲೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಹೇಳಿದ್ದರು.



ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ

ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಅವರ ಹೇಳಿಕೆಗೆ ಇದೀಗ ಪೋಸ್ಟ್‌ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿ, ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್‌ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.