ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gram Panchayat Employees: ಗ್ರಾಮ ಪಂಚಾಯಿತಿ ನೌಕರರ ವೇತನ ಎಷ್ಟು?; ಭತ್ಯೆ ಸೇರಿ ಏನೆಲ್ಲಾ ಸೌಲಭ್ಯ ಸಿಗುತ್ತದೆ?

ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗಿರುವುದಿಲ್ಲ. ಸದರಿ ನೌಕರರಿಗೆ 'ಸಿ' ಮತ್ತು 'ಡಿ' ದರ್ಜೆ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಾಗುವುದಿಲ್ಲ. ಸಿಬ್ಬಂದಿಗೆ ಸೇವಾ ಹಿರಿತನದ ವೇತನ ನಿಗದಿಪಡಿಸಲು ಮತ್ತು ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ.

ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ (Gram panchayat employees) ನೀಡಲಾಗುತ್ತಿರುವ ವೇತನ ಮತ್ತು ತುಟ್ಟಿಭತ್ಯೆ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಮಾಹಿತಿ ನೀಡಿದ್ದಾರೆ. ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿಪಡಿಸುವ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಗ್ರಾಮ ಪಂಚಾಯಿತಿಯು ಪಾವತಿಸುತ್ತಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ನೌಕರರ ಕನಿಷ್ಠ ವೇತನ, ತುಟ್ಟಿಭತ್ಯೆ

  • ಬಿಲ್ ಕಲೆಕ್ಟರ್: 17,420.32 ರೂ.
  • ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್: 17,420.32 ರೂ.
  • ಕ್ಲೀನರ್ಸ್: 18,243.12 ರೂ.
  • ವಾಟರ್ ಆಪರೇಟರ್: 15,732.92 ರೂ.
  • ಅಟೆಂಡೆಂಟ್: 15,097.12 ರೂ.

ವೇತನದೊಂದಿಗೆ ನೀಡುತ್ತಿರುವ ಇನ್ನಿತರೆ ಸೌಲಭ್ಯಗಳು

1) ಗ್ರಾಮ ಪಂಚಾಯಿತಿ ನೌಕರರಿಗೆ 10 ದಿನಗಳ ಸಾಂದರ್ಭಿಕ ರಜೆ, 2 ದಿನಗಳ ನಿರ್ಬಂಧಿತ ರಜೆ, ಮಹಿಳಾ ನೌಕರರಿಗೆ 180 ದಿನಗಳ ಪ್ರಸೂತಿ ರಜೆ ಮತ್ತು ಪುರುಷ ನೌಕರರಿಗೆ 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತದೆ.

2) ಗ್ರಾಮ ಪಂಚಾಯಿತಿ ಸಿಬ್ಬಂದಿಯು ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ಅವರ ನ್ಯಾಯಬದ್ಧ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

3) ಪ್ರಸ್ತುತ ಸೇವೆಯಿಂದ ನಿವೃತ್ತಿಯಾಗುವ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಅಥವಾ ಸೇವೆಯಲ್ಲಿ ಮರಣ ಹೊಂದಿದ ಸಿಬ್ಬಂದಿಯ ನ್ಯಾಯಬದ್ಧ ಅವಲಂಬಿತರಿಗೆ ಅವರು ಸಲ್ಲಿಸಿದ ಸೇವಾ ಅವಧಿಯ ಆಧಾರದ ಮೇಲೆ ಒಂದು ವರ್ಷದ ಸೇವೆಗೆ 15 ದಿನಗಳ ವೇತನದಂತೆ ಸೇವಾ ಅವಧಿಯ ಗರಿಷ್ಠ 20 ತಿಂಗಳ ವೇತನ ಮೀರದಂತೆ ನಿವೃತ್ತಿ ಹಾಗೂ ಮರಣೋತ್ತರ ಉಪದಾನಗಳನ್ನು ನೀಡಲಾಗುತ್ತಿದೆ.

4) ಗ್ರಾಮ ಪಂಚಾಯಿತಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಶವಸಂಸ್ಕಾರಕ್ಕೆ, ರೂ.10,000/- (ಹತ್ತು ಸಾವಿರ ರೂಪಾಯಿ) ಗಳನ್ನು ಗ್ರಾಮ ಪಂಚಾಯತಿ ಸಂಪನ್ಮೂಲದಿಂದ ಭರಿಸಲು, ಗ್ರಾಮ ಪಂಚಾಯಿತಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಶವಸಂಸ್ಕಾರಕ್ಕೆ ರೂ.10000/- (ಹತ್ತು ಸಾವಿರ ರೂಪಾಯಿಗಳು) ಗಳನ್ನು ಗ್ರಾಮ ಪಂಚಾಯಿತಿ ಸಂಪನ್ಮೂಲದಿಂದ ಭರಿಸಲು ಅವಕಾಶ ಕಲ್ಪಿಸಲಾಗಿದೆ.

5) ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರಿಗೆ ಅನಿರೀಕ್ಷಿತ ಸಂದರ್ಭಗಳಲ್ಲಿ ಅಪಘಾತಗಳಾದಲ್ಲಿ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ಈ ಕೆಳಕಂಡ ಪ್ರಧಾನ ಮಂತ್ರಿಯವರ 'ಜನ್‌ಧನ್ ಯೋಜನೆಯಡಿಯ ವಿಮಾ ಪಾಲಿಸಿಗಳನ್ನು ಕಡ್ಡಾಯವಾಗಿ ಮಾಡಿಸಲು ಮತ್ತು ಸಂಬಂಧಿಸಿದ ಸಿಬ್ಬಂದಿಗಳ ವೇತನದ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ, ವಾರ್ಷಿಕವಾಗಿ ಕಟಾವಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿದೆ.

ಎ) ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ
ಬಿ) ಪ್ರಧಾನ ಮಂತ್ರಿ ಸುರಕ್ಷಾ ಜ್ಯೋತಿ ಭೀಮಾ ಯೋಜನೆ
ಸಿ) ಭಾರತೀಯ ಸ್ಟೇಟ್ ಬ್ಯಾಂಕ್‌ ಗ್ರೂಪ್ ಫರ್ಸನಲ್ ಅಕ್ಸಿಡೆಂಟ್ ಇನ್ಶೂರೆನ್ಸ್

6) 2020 ರ ಕೋವಿಡ್ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದ ವೇಳೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರವು ಅವರಿಗೆ 30 ಲಕ್ಷ ರೂ.ಪರಿಹಾರ ಘೋಷಿಸಿತ್ತು ಘೋಷಿಸಲಾದ ಪರಿಹಾರ ಪಾವತಿಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೌಕರರು ಕೋವಿಡ್-19 ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಮರಣ ಹೊಂದಿದ್ದಲ್ಲಿ ಅವರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡಲು ಅಥವಾ ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಅನಾರೋಗ್ಯಗೊಂಡಲ್ಲಿ ಸದರಿ ಚಿಕಿತ್ಸೆಗಾಗಿ ತಗಲುವ ವೈದ್ಯಕೀಯ ವೆಚ್ಚ ಭರಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಶ್ವಾಸನೆ ನಿಧಿಯನ್ನು ಸ್ಥಾಪಿಸಿ ಪರಿಹಾರ ನೀಡಲು ತಿಳಿಸಲಾಗಿದೆ.

7) ಗ್ರಾಮ ಪಂಚಾಯಿತಿ ನೌಕರರಿಗೆ ತೀವ್ರ ಸ್ವರೂಪದ ಕಾಯಿಲೆಗಳಾದ ಹೃದ್ರೋಗ ಶಸ್ತ್ರ ಚಿಕಿತ್ಸೆ ಕ್ಯಾನ್ಸರ್, ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್, ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ತುತ್ತಾದಲ್ಲಿ ವೈದ್ಯಕೀಯ ವೆಚ್ಚ, ಗರಿಷ್ಠ ರೂ. 50,000/- ಗಳನ್ನು ಪಾವತಿಸಲು ಆದೇಶಿಸಲಾಗಿದೆ.

8) ಬಿಲ್ ಕಲೆಕ್ಟರ್ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಲ್ಲಿ ಮಂಜೂರಾದ ಹುದ್ದೆ ಖಾಲಿ ಇದ್ದಲ್ಲಿ, ವಾಟರ್ ಆಪರೇಟರ್/ ಅಟೆಂಡೆಂಟ್/ ಕ್ರೀನರ್ಸ್ ವೃಂದದಿಂದ ಸಂಯುಕ್ತ ಜ್ಯೇಷ್ಠತಾ ಪಟ್ಟಿ ಆಧಾರದ ಮೇಲೆ ಗ್ರಾಮ ಪಂಚಾಯಿತಿಯು ಮುಂಬಡ್ತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

9) ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ ಗ್ರೇಡ್-2 ಗ್ರಾಮ ಪಂಚಾಯತಿ ಕಾರ್ಯದರ್ಶಿ / ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ಸೇವೆಯೊಳಗಿನ ನೇರ ನೇಮಕಾತಿ ಕೋಟಾದಲ್ಲಿ ಖಾಲಿ ಇರುವ ಹುದ್ದೆಗಳಿಗನುಸಾರವಾಗಿ ಬಿಲ್‌ ಕಲೆಕ್ಟರ್/ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರಿಂದ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ; ಕಲಬುರಗಿಯಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ

ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಸೇವಾ ಹಿರಿತನದ ವೇತನ ನಿಗದಿಪಡಿಸಲು ಮತ್ತು ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗಿರುವುದಿಲ್ಲ. ಸದರಿ ನೌಕರರಿಗೆ 'ಸಿ' ಮತ್ತು 'ಡಿ' ದರ್ಜೆ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಾಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.