ಬೆಂಗಳೂರು: ಖಾಸಗಿ ಕಂಪನಿಯೊಂದರಲ್ಲಿನ ಡೇಟಾ ಅನಾಲಿಸ್ಟ್ ಹುದ್ದೆಗೆ ತಮಿಳುನಾಡು ಮೂಲದವರು (job only for Tamilians) ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂಬ ಷರತ್ತು ವಿಧಿಸಿರುವುದು ಕಂಡುಬಂದಿದ್ದು, ಇದಕ್ಕೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಖಾಸಗಿ ಕಂಪನಿಯ ಎಚ್ಆರ್ ಮ್ಯಾನೇಜರ್ ವಿಧಿಸಿದ್ದ ಷರತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಬಂದ ಬೆನ್ನಲ್ಲೇ ಷರತ್ತನ್ನು ಕಂಪನಿ ಹಿಂಪಡೆದಿದೆ.
ಜನರಲ್ ಮ್ಯಾನೇಜರ್ ಮತ್ತು ಎಚ್ಆರ್ ಟೀಮ್ ಹೆಡ್ ಆಗಿರುವ ಬಾಲ ಎಂ. ಎಂಬುವರು ಎರಡು ದಿನಗಳ ಹಿಂದೆ ಲಿಂಕ್ಡ್‌ಇನ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ನಮಕ್ಕಲ್ ನಗರಗಳಲ್ಲಿ ಡೇಟಾ ಅನಾಲಿಸ್ಟ್ ಹುದ್ದೆಗೆ ‘ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಬೇರೆ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಾರದು’ ಎಂದು ಉಲ್ಲೇಖಿಸಲಾಗಿತ್ತು.
ಈ ಪೋಸ್ಟ್‌ಗೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಾಚರಿಸುವ ಕಂಪನಿಯೊಂದು ಈ ರೀತಿ ತಾರತಮ್ಯ ಮಾಡಲು ಹೇಗೆ ಸಾಧ್ಯ? ಕಾರ್ಮಿಕ ಇಲಾಖೆ ಹಾಗೂ ರಾಜ್ಯ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದರು. ಕಂಪನಿ ವಿರುದ್ಧ ಕನ್ನಡಿಗರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಎಚ್ಆರ್ ಮ್ಯಾನೇಜರ್ ವಿಧಿಸಿದ್ದ ʼತಮಿಳರಿಗೆ ಮಾತ್ರ ಉದ್ಯೋಗʼ ಷರತ್ತನ್ನು ಸಡಿಲಿಸಲಾಗಿದೆ.
KPSC Recruitment Scam: ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ, ನೇಮಕಾತಿ ಅಕ್ರಮ, ಲಂಚವೇ ಪರಪಂಚ
ಈ ಬಗ್ಗೆ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಎಂಬುವವರು ಪೋಸ್ಟ್ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಕೆಲಸಕ್ಕೆ ತಮಿಳುನಾಡಿನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಅಂತ ಹಾಕಿಕೊಂಡಿದ್ದ ಕಂಪನಿ ಟ್ವಿಟರ್‌ನಲ್ಲಿ ಸಿಕ್ಕಿಹಾಕಿಕೊಂಡು, ಅದನ್ನು ಈಗ ಬದಲಿಸಿದೆ. ಕೆಲ ದಿನಗಳ ಹಿಂದೆ ಮಲಯಾಳಿಗಳ ವಾಕರೂ ಚಪ್ಪಲಿ ಕಂಪನಿ ನಂಜನಗೂಡಿನಲ್ಲಿ ಕೆಲಸಗಳಿಗೆ ಕೆರಳದವರಿಗೆ ಮಾತ್ರ ಅಂತ ಹಾಕಿಕೊಂಡಿತ್ತು. ಇನ್ನು ಆಂಧ್ರದವರು ಸಂದರ್ಶನಗಳನ್ನೇ ಲಿಪ್ ಸಿಂಕ್ ಮಾಡಿ ಅರ್ಹತೆ ಇಲ್ಲದ ತಮ್ಮವರಿಗೆ ಸಾಫ್ಟ್ ವೇರ್ ಕೆಲಸ ಕೊಡಿಸಿಕೊಳ್ಳುತ್ತಾರೆ. ಈ ರೀತಿ ಕರ್ನಾಟಕದಲ್ಲಿ ಎಷ್ಟು ಕೋಟಿ ಉದ್ಯೋಗ ಸೃಷ್ಟಿಮಾಡಿದರೂ ಕನ್ನಡಿಗರಿಗೆ ಉಪಯೋಗವಿಲ್ಲ. ಇದು ಹಿಂದಿ ಹೈಕಮಾಂಡ್ ಪಕ್ಷಗಳಿಗೂ ಗೊತ್ತು. ಆದರೆ ಅವರಿಗೆ ಕರ್ನಾಟಕದಲ್ಲಿ ವಲಸಿಗರು ಮೆಜಾರಿಟಿ ಮಾಡಬೇಕು ಅನ್ನೋ ಉದ್ದೇಶ ಎಂದು ಕಿಡಿಕಾರಿದ್ದಾರೆ.