ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ವಿಚಾರಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಸ್ಥರು ಸೇರಿ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಅಜ್ಜಿಯನ್ನು ನೋಡಲು ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಜ್ಜಿ ಚೆನ್ನಮ್ಮರನ್ನು ನೋಡಲು ಪೆರೋಲ್ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಪೆರೋಲ್ ಎಂದರೆ ಜೈಲಿನಲ್ಲಿರುವ ಆರೋಪಿ ಅಥವಾ ಶಿಕ್ಷೆ ಅನುಭವಿಸುತ್ತಿರುವವರು ಕೆಲವು ತುರ್ತು ಕಾರಣಗಳಿಂದ ತಾತ್ಕಾಲಿಕವಾಗಿ ಹೊರಗೆ ಬರುವ ಅವಕಾಶ. ಇದು ಸಾಮಾನ್ಯವಾಗಿ ಕುಟುಂಬದವರಿಗೆ ತೀವ್ರ ಆರೋಗ್ಯ ಸಮಸ್ಯೆ, ಮದುವೆ, ಅಂತ್ಯಕ್ರಿಯೆ ಮುಂತಾದ ಸಂದರ್ಭಗಳಲ್ಲಿ ನೀಡಲಾಗುತ್ತದೆ. ಪೆರೋಲ್‌ನಲ್ಲಿ ಬರುವವರು ನಿಗದಿಪಡಿಸಿದ ಸಮಯದ ನಂತರ ಮತ್ತೆ ಜೈಲಿಗೆ ಹಿಂದಿರುಗಬೇಕಾಗುತ್ತದೆ.
ಆಸ್ಪತ್ರೆಯಲ್ಲಿ ಚೆನ್ನಮ್ಮ; ಕಣ್ಣೀರು ಹಾಕಿದ ದೇವೇಗೌಡರು, ಆ ದೇವರೇ ಕಾಪಾಡಬೇಕು ಎಂದ ಎಚ್‌ಡಿಕೆ
ಪೆರೋಲ್ ಮೂಲಕ ಹದಿನೈದು ದಿನಗಳ ಕಾಲ ಹೊರಗೆ ಬರುವ ಅವಕಾಶವಿದೆ. ಆದರೆ ಇದಕ್ಕೆ ಕೋರ್ಟ್ ಅನುಮತಿ ಅಗತ್ಯ. ಅರ್ಜಿಯಲ್ಲಿ ಕುಟುಂಬದ ಆರೋಗ್ಯ ಸ್ಥಿತಿ, ಅಜ್ಜಿಯ ವಯಸ್ಸು, ತುರ್ತು ಅಗತ್ಯತೆಯನ್ನು ವಿವರಿಸಬೇಕಾಗುತ್ತದೆ. ಪೊಲೀಸ್ ವರದಿ ಮತ್ತು ಜೈಲು ಅಧಿಕಾರಿಗಳ ಅಭಿಪ್ರಾಯವನ್ನೂ ಕೋರ್ಟ್ ಪರಿಗಣಿಸುತ್ತದೆ.