ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಂತ ಸುಖ ಬಯಸದೆ ಹಲವರಿಗೆ ಮೈ. ಚ. ಜಯದೇವ ಮಾರ್ಗದರ್ಶನ: ದತ್ತಾತ್ರೇಯ ಹೊಸಬಾಳೆ

MC Jayadev's Book release: ಬೆಂಗಳೂರಿನ ಪುರಭವನದಲ್ಲಿ ಅವಿಶ‍್ರಾಂತ ಧ‍್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪು ಪುಸ್ತಕ ಲೋಕಾರ್ಪಣೆ ಗುರುವಾರ ನೆರವೇರಿತು. ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಪುಸ್ತಕ ಬಿಡುಗಡೆ ಮಾಡಿದರು.

ʼಅವಿಶ‍್ರಾಂತ ಧ‍್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪುʼ ಪುಸ್ತಕ ಲೋಕಾರ್ಪಣೆ ಮಾಡಿದ ಗಣ್ಯರು.

ಬೆಂಗಳೂರು, ಮೇ 14: ಮೈ. ಚ. ಜಯದೇವ (MC Jayadev) ಅವರು ಧ್ಯೇಯಜೀವಿಯೂ ಅವಿಶ್ರಾಂತರೂ ಕರ್ಮಜೀವಿಯೂ ಆಗಿದ್ದು, ಅವರು ಕಟ್ಟಿದ ಸಂಸ್ಥೆಗಳ ಪರಂಪರೆಯು ಮುಂದುವರಿದಿದೆ. ಭಾರತೀಯ ಸಂಸ್ಕೃತಿ ಒಬ್ಬನ ಹೆಸರು ಶಾಶ್ವತವಾಗುವುದು ತ್ಯಾಗದಿಂದ ಎನ್ನುತ್ತದೆ. ಜಯದೇವರು ತಾನೇನೋ ಆಗಬೇಕು ಎನ್ನುವ ಆಸೆ ಇಟ್ಟುಕೊಳ್ಳದೆ, ಸ್ವಂತ ಸುಖ ಬಯಸದೆ ಹತ್ತಾರು ಜನರಿಗೆ ಮಾರ್ಗದರ್ಶನ ಮಾಡಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ (dattatreya hosabale) ಅವರು ಸ್ಮರಿಸಿದರು.

ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ ವತಿಯಿಂದ ಗುರುವಾರ ಆಯೋಜಿಸಿದ್ದ ʼಅವಿಶ‍್ರಾಂತ ಧ‍್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪುʼ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 276 ಪುಟಗಳ, 28 ಅಧ್ಯಾಯದ ಕೃತಿ ಮೈ.ಚ.ಜಯದೇವರ ಜೀವನವನ್ನು ಪದರುಪದರಾಗಿ ಹೇಳುತ್ತದೆ. ಆದರೂ ಮುಗಿಯುವುದಿಲ್ಲ. ಯಾವುದೇ ಕೃತಿಯ ಒಳಗಡೆ ಅಡಕವಾಗಿರುವುದೇ ಅದರ ಸೌಂದರ್ಯ. ಹೊರಗಿನದಲ್ಲ. ಈ ಕೃತಿಗೆ ಸಿಂಗಾರ ಕಡಿಮೆ, ಹೂರಣ ಜಾಸ್ತಿ ಎಂದು ತಿಳಿಸಿದರು.

MC Jayadev's Book release (2)

ಜಯದೇವರ ಸಮಯದಲ್ಲಿ ಟೀಮ್ ವರ್ಕ್‌ ಕಟ್ಟಿದ ಹಲವರಿದ್ದು ಅವರಲ್ಲಿ ಭಿನ್ನಾಭಿಪ್ರಾಯವಿದ್ದರೂ ಬೈಠಕ್‌ ಮುಗಿಸಿ ಹೊರಬಂದಾಗ ಒಂದೇ ಅಭಿಮತವಿರುತ್ತಿತ್ತು. ಒಂದು ಸಂಸ್ಥೆ ಹೇಗಿರಬೇಕು, ಅದರ ಆದರ್ಶ, ನಡವಳಿಕೆ, ತನ್ನನ್ನು ತಾನು ಬೆಳೆಸಿಕೊಂಡು ಸಮಾಜಕ್ಕೆ ಹೇಗೆ ಸೇವೆ ಕೊಡಬೇಕು ಇಂತಹ ವಿಷಯವನ್ನು ಜಯದೇವರು ತಮ್ಮ ಜೀವನದಲ್ಲಿ ಮಾಡಿ ತೋರಿಸಿರು. ಅನೇಕ ಸಂಸ್ಥೆಗಳಿಗೆ ಪ್ರೇರಕರಾಗಿದ್ದ ಅವರು ಮಾರ್ಗದರ್ಶಕರಾಗಿ ಅದಕ್ಕೆ ಬೇಕಾದ ವ್ಯಕ್ತಿಗಳನ್ನು ರೂಪಿಸಿದರು. ಇನ್‌ಸ್ಟಿಟ್ಯೂಷನ್‌ ಬಿಲ್ಡರ್‌ ಜಯದೇವರು ಹಿರಿಯರು ಕಂಡ ಕನಸನ್ನು ನನಸಾಗಿಸುವ ಜವಾಬ್ದಾರಿ ಹೊತ್ತು ಅವರು ಬೆಳೆದು, ಸಂಸ್ಥೆಯನ್ನು ಬೆಳೆಸಿ, ನೂರಾರು ವ್ಯಕ್ತಿಗಳನ್ನು ಬೆಳೆಸಿದರು.

ಸಂಘದ ಸೇವಕರ ಭವ್ಯಭಾರತದ ಕನಸು ಕೈಗೂಡುವುದಕ್ಕೆ ಜೀವನದುದ್ದಕ್ಕೂ ಕಾರ್ಯ ಮಾಡಿದರು. ಹಾಗಾಗಿ ಈ ಕೃತಿಯು ಜಯದೇವರ ಜೀವನಕಥೆಯೂ ಹೌದು, ಅವರು ಕಟ್ಟಿದ ಸಂಸ್ಥೆ ಬೆಳೆದ ಕಥೆಯೂ ಹೌದು. ಜಯದೇವರಿಗೆ ವಿಷಯದ ಆಳ ಹರಿವೂ ಎರಡೂ ಬೇಕಾಗುತ್ತಿತ್ತು. ಎಲ್ಲ ಕೇಳಿದ ಬಳಿಕ ಅವರು ಹೇಳಿದವರ ಸಲಹೆಯನ್ನು ಕೇಳಿ ಅದನ್ನು ಬರೆದುಕೊಡಿ ಎನ್ನುತ್ತಿದ್ದರು. ಅದನ್ನು ಇಂಪ್ಲಿಮೆಂಟ್‌ ಮಾಡುವುದಕ್ಕೆ ಮುಂದಾಗುತ್ತಿದ್ದರು. ಈ ಕೃತಿಯಲ್ಲಿ ಅನೇಕ ಘಟನೆಗಳು ಸಂಗತಿಗಳು ದಾಖಲಾಗಿದ್ದು, ಜಯದೇವರು ಸಂಸ್ಥೆ ಎಂದರೆ ಬರಿ ಇಟ್ಟಿಗೆಯ ಕಟ್ಟಡವಲ್ಲ, ಅದು ತಮ್ಮದೆಂದು ತಿಳಿದು ಕಾರ್ಯಕರ್ತರು ಕೆಲಸ ಮಾಡಿದಾಗ ಮಾತ್ರ ಸಂಸ್ಥೆಯ ಕಾರ್ಯ ಸಫಲವಾಗುತ್ತದೆ ಎನ್ನುವ ಅವರು ಅದನ್ನು ಮಾಡಿ ತೋರಿಸಿದರು.

MC Jayadev's Book release (1)

ಈ ಕೃತಿ ಜಯದೇವರು ತೆರೆಮರೆಯಲ್ಲಿ ಸಂಸ್ಥೆಗಾಗಿ ಹೇಗೆ ಕಾರ್ಯ ಮಾಡಿದರು ಎನ್ನುವುದನ್ನು ಹೇಳುವ ಈ ಕೃತಿ ಈ ಸಂಸ್ಥೆಯ ಬೆಳವಣಿಗೆಯ ಬಗ್ಗೆಯೂ ಹೇಳುತ್ತದೆ. ಇಂತಹ ಕೃತಿ ಬರೆಯುವಾಗ ಶ್ರದ್ಧೆ ಇದ್ದಾಗ ಸ್ತುತಿ, ಪ್ರಶಂಸೆ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿ ನಿಖರತೆ ವಿಷಯದ ಮೇಲೆ ಗಮನವಿಟ್ಟು ಬರೆಯಲಾಗಿದೆ. ಇಬ್ಬರು ಲೇಖಕರ ಪ್ರಯತ್ನದಿಂದ ಇದೊಂದು ಸ್ತುತಿಮಾಲೆ ಆಗದೆ ಜೀವನ ಘಟನೆಗಳನ್ನಷ್ಟೇ ಹೇಳಿ ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.

ಜಯದೇವರು ಸಂಘಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದರು

ಡಾ. ಬಾಬು ಕೃಷ್ಣಮೂರ್ತಿಯವರು ಮಾತನಾಡಿ, ಬಾಲ್ಯದಿಂದಲೂ ಹತ್ತಿರದಿಂದ ಕಂಡ ಮಹಾನ್‌ ಧ್ಯೇಯಜೀವಿಯ ಬಗ್ಗೆ ಬರೆಯುವ ಕಾರ್ಯ ನನಗೆ ರೋಮಾಂಚನದ ಕೆಲಸ. ಚರ್ಚೆಯ ಸಮಯದಲ್ಲಿ ನಾನು ಹೇಳುತ್ತಿದ್ದ ಬಾಲಿಶ ಮಾತನ್ನು ಸಹ ಕೇಳಿಸಿಕೊಳ್ಳುತ್ತಿದ್ದ ಜಯದೇವರು ನೂರಾರು ಚಟುವಟಿಕೆಗಳನ್ನು ಸಮಾಧಾನ ಚಿತ್ತದಿಂದ ನಿಖರವಾಗಿ ಮುಗಿಸುವ ನಾನು ಮುಗಿಸಬಲ್ಲೆ ಎನ್ನುವ ಮನೋಭಾವದಿಂದ ಮಾಡುತ್ತಿದ್ದರು. ನಿರ್ಮೋಹಿಯಾದ ಜಯದೇವರು ಸಂಘಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದರು ಎಂದರು.

MC Jayadev's Book release (3)

ಕಿಂಗ್‌ ಆಗುವ ಬಯಕೆ ಇರದೆ ಕಿಂಗ್‌ ಮೇಕರ್‌ ಆಗಿದ್ದರು: ಸುತ್ತೂರು ಶ್ರೀ

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ತಮ್ಮ ಬದುಕನ್ನು ಸಾಮಾಜಿಕ ಸೇವೆಗೆ ಮೀಸಲಿಟ್ಟ ಅಪರೂಪದ ಚೇತನ ಮೈ.ಚ. ಜಯದೇವರು. ಜಯದೇವರಿಗೆ ತಮ್ಮ ಉದ್ಯೋಗ ಪಾರ್ಟ್‌ ಟೈಮ್‌ ಆಗಿತ್ತು, ಸಂಘದ ಕೆಲಸ ಫುಲ್‌ ಟೈಮ್‌ ಆಗಿತ್ತು. ಶ್ರೀ ಮಠದ ಭಾರತೀಯ ಸಾಂಸ್ಕೃತಿಕ ಪರಿಷತ್ತಿಗೆ ಮಾರ್ಗದರ್ಶನ ಮಾಡುತ್ತಿದ್ದ ಅವರು ಸಭೆಗೆ ಯಾವಾಗಲೂ ಟಿಪ್ಪಣೆ ಮಾಡಿಕೊಂಡೇ ಬರುತ್ತಿದ್ದರು. ಕಿಂಗ್‌ ಆಗುವ ಬಯಕೆ ಇರದೆ ಕಿಂಗ್‌ ಮೇಕರ್‌ ಆಗಿದ್ದರು. ಈ ಭೂಮಿ ತನ್ನ ತಾಯಿ, ನಾನು ಅವಳ ಪುತ್ರ ಎನ್ನುವ ಅಥರ್ವವೇದದ ಮಾತಿನಂತೆ ಬದುಕಿದವರು ಜಯದೇವರು. ಅಲ್ಲಮ ಪ್ರಭು ಹೇಳಿದಂತೆ ಆಶಾಪಾಶಕ್ಕೆ ಹೊರತಾಗಿ ಬದುಕಿದ ಜಯದೇವರು ನಿರ್ಲಿಪ್ತ ಬದುಕನ್ನು ಬದುಕುತ್ತ ಉತ್ತಮ ಸೌಹಾರ್ದಯುತ ವಾತಾವರಣಕ್ಕಾಗಿ ಶ್ರಮಿಸಿದರು. ಸೆರೆಮನೆಯಲ್ಲಿದ್ದಾಗಲೂ ಸಹಚರರಿಗೆ ಆತ್ಮಸ್ಥೈರ್ಯ ತುಂಬಿ ಹೋರಾಟವನ್ನು ಮುಂದುವರಿಸಲು ಹುರಿದುಂಬಿಸಿದ ಜಯದೇವರು ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡಿಯೂ ಮಾಡದಂತಿರಬೇಕು ಎನ್ನುವ ಮಾತಿಗೆ ಅನುಗುಣವಾಗಿದ್ದರು ಎಂದು ಹೇಳಿದರು.

ನಾ. ದಿನೇಶ್ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಯದೇವರ ಜತೆಗೆ ಮೂವತ್ತು ವರ್ಷ ಕಾರ್ಯ ನಡೆಸಿದ ಸೌಭಾಗ್ಯ ನನ್ನದಾಗಿದ್ದು, ನಿಖರತೆ ಇದ್ದ ಜಯದೇವರಿಗೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ವಿಚಾರವನ್ನು ಸಮಾಜದಲ್ಲಿ ಮೂಡಿಸುವ ಕಠಿಣತೆ ಇತ್ತು. ಶಿಕ್ಷಣದಲ್ಲಿ ಭಾರತೀಯತೆಯನ್ನು ತರಬೇಕು, ಭಾರತೀಯ ವೈದ್ಯಕೀಯ ವಿಷಯಗಳನ್ನು ಅಲೋಪಥಿ ವೈದ್ಯಕೀಯ ಪದ್ಧತಿಯ ಜತೆಗೆ ಇಂಟಗ್ರೇಟ್‌ ಮಾಡಬೇಕು ಎನ್ನುವ ಅವರ ಆಶಯದಂತೆ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂಟಗ್ರೇಟೆಡ್‌ ಸಿಸ್ಟಂ ಅಳವಡಿಸಲಾಗಿದೆ. ರಾಷ್ಟ್ರೋತ್ಥಾನ ಜಯದೇವರು ಬೇರೆಬೇರೆ ಆಗಿರದಿದ್ದರೂ ಸಂಘ ಬೇರೆ ಕರ್ತವ್ಯಕ್ಕೆ ಕರೆದಾಗ ಸರಳವಾಗಿ ಎದ್ದು ಹೋಗಿಬಿಟ್ಟ ಜಯದೇವರು ಉತ್ತಮ ಕೇಳುಗರಾಗಿದ್ದು ಒಂದು ಥರ ಬ್ಲಾಟಿಂಗ್‌ ಪೇಪರ್ ಥರ ಇದ್ದರು ಎಂದು ಹೇಳಿದರು.

ಖ್ಯಾತ ಗಾಯಕರಾದ ಶ್ರೀ ಶಂಕರ್ ಶಾನಭಾಗ್ ಅವರು ಪ್ರಾರ್ಥನೆ ಮಾಡಿದರು ಮತ್ತು ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ, ಬೇಳೂರು ಸುದರ್ಶನ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಎಂ. ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಮೈ. ಚ. ಜಯದೇವ (1932 - 2017)

ಮೈ.ಚ. ಜಯದೇವ ಅವರು ರಾಷ್ಟ್ರೋತ್ಥಾನ ಪರಿಷತ್ತನ್ನು ಆರಂಭದ ದಿನಗಳಿಂದಲೂ (1965) ಕಟ್ಟಿ ಬೆಳೆಸಿದವರು. ವ್ಯವಸ್ಥಾಕುಶಲರೂ, ಅಸಾಮಾನ್ಯ ದಕ್ಷರೂ, ಸಂಘಟನೆಯ ರೂವಾರಿಗಳೂ ಆಗಿ ಒಂದು ಜೀವನ, ಒಂದು ಧ್ಯೇಯಾನುಸಂಧಾನ ಎಂಬ ಸೂತ್ರವನ್ನು ಜೀವನದುದ್ದಕ್ಕೂ ಪಾಲಿಸುತ್ತ, ತಮ್ಮ ದೂರದರ್ಶಿ ಚಿಂತನೆ, ರಾಷ್ಟ್ರನಿಷ್ಠ ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮದ ಮೂಲಕ ಸ್ವಸ್ಥ ಸಮಾಜನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಸ್ಥಿರ ಹೆಜ್ಜೆಗಳನ್ನಿಟ್ಟು ಮುನ್ನಡೆಯಲು ಕಾರಣೀಭೂತರಾದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ, ಕ್ಷೇತ್ರೀಯ ಪ್ರಚಾರಕ, ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರು - ಹೀಗೆ 5 ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಮೃತ ಶಿಶುನಿವಾಸ, ಅಬಲಾಶ್ರಮ - ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಮೂಲೋದ್ದೇಶದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುವುದರ ಜೊತೆಜೊತೆಗೆ ಅಗತ್ಯ ವ್ಯವಸ್ಥೆ-ವ್ಯಕ್ತಿ ಜೋಡಣೆಯಂತಹ ಕೆಲಸಗಳನ್ನೂ ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ.