ಬೆಂಗಳೂರು: ಹಣಕ್ಕಾಗಿ ಪಕ್ಕದ ಮನೆಯ 13 ವರ್ಷದ ಬಾಲಕನ ಕಿಡ್ನ್ಯಾಪ್ ಮಾಡಿ, ಕೊಲೆಗೈದಿರುವ ಅಮಾನುಷ ಘಟನೆ (Kidnap and murder Case) ನಗರದ ಹೊರವಲಯದ ಚಿಕ್ಕಜಾಲದಲ್ಲಿ ನಡೆದಿದೆ. ಪ್ರಜ್ವಲ್ ಕೊಲೆಯಾದ ಬಾಲಕ. ಭಾಸ್ಕರ್ ರೆಡ್ಡಿ ಕೊಲೆ ಆರೋಪಿಯಾಗಿದ್ದಾನೆ. ಪೊಲೀಸರು ಆರೋಪಿ ಭಾಸ್ಕರ್ ರೆಡ್ಡಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಬಾಲಕ ಮತ್ತು ಆರೋಪಿ ಇಬ್ಬರೂ ಯಲಹಂಕದ ವಿನಾಯಕನಗರದ ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದಾರೆ. ಕೃತ್ಯ ಎಸಗುವ ವೇಳೆ ಆರೋಪಿ ಮದ್ಯದ ನಶೆಯಲ್ಲಿದ್ದ ಎಂಬುದೂ ತನಿಖೆ ವೇಳೆ ಗೊತ್ತಾಗಿದೆ.
ಪ್ರಜ್ವಲ್ ಹಾಗೂ ಭಾಸ್ಕರ್ ರೆಡ್ಡಿ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿತ್ತು. ಆಗಾಗ ಪರಸ್ಪರ ಮನೆಗೆ ಹೋಗಿ ಬರುವಷ್ಟರ ಮಟ್ಟಿಗಿನ ಸ್ನೇಹವಿತ್ತು. ಬಾಲಕನ ತಂದೆ ಮನೋಹರ್ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ಬ್ಯುಸಿನೆಸ್ ಮಾಡುತ್ತಿದ್ದರು. ಬಾಲಕ ಪ್ರಜ್ವಲ್‌ಗೆ ಕಾರುಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಈ ಆಸಕ್ತಿಯನ್ನು ಅರಿತಿದ್ದ ಆರೋಪಿ ಭಾಸ್ಕರ್ ರೆಡ್ಡಿ, ಸೆ.16ರಂದು ಕಾರಿನಲ್ಲಿ ಹೋಗಿ ಗಣಪತಿ ಹಬ್ಬಕ್ಕೆ ಪಟಾಕಿ ತರೋಣ ಎಂದು ಬಾಲಕನನ್ನು ಪುಸಲಾಯಿಸಿ ಕರೆದೊಯ್ದಿದ್ದ.
ನಂತರ ಮದ್ಯದ ಅಮಲಿನಲ್ಲಿದ್ದ ಆರೋಪಿ ಬಾಲಕನಿಂದಲೇ ಒಂದು ವಿಡಿಯೋ ಮಾಡಿಸಿ, 1 ಕೋಟಿ ರೂ. ಹಣ ನೀಡುವಂತೆ ಆತನ ತಂದೆಗೆ ಬೆದರಿಕೆಯೊಡ್ಡಿದ್ದ. ಹಣ ಕೊಡದಿದ್ದರೆ ಮಗನನ್ನು ಸಾಯಿಸುವುದಾಗಿ ಹೆದರಿಸಿದ್ದ. ತಕ್ಷಣ ಜಾಗೃತರಾದ ಬಾಲಕನ ತಂದೆ ಮನೋಹರ್, ಈ ವಿಷಯವನ್ನು ಆರೋಪಿ ಭಾಸ್ಕರ್ ರೆಡ್ಡಿಯ ತಂದೆಗೆ ತಿಳಿಸಿದ್ದರು.
ಇಬ್ಬರೂ ಸೇರಿ ಭಾಸ್ಕರ್‌ಗೆ ಕರೆ ಮಾಡಿ ಗದರಿಸಿ, ತಕ್ಷಣ ಬಾಲಕನೊಂದಿಗೆ ವಾಪಸ್ ಬರುವಂತೆ ಸೂಚಿಸಿದ್ದರು. ಅಲ್ಲದೆ, ತಕ್ಷಣವೇ ಪೊಲೀಸರಿಗೂ ಮಾಹಿತಿ ನೀಡಿ ಇಬ್ಬರೂ ಸೇರಿ ಹುಡುಕಾಟ ಪ್ರಾರಂಭಿಸಿದರು. ತನ್ನ ಸಂಚು ವಿಫಲವಾಗುತ್ತಿದೆ ಎಂದು ಗಾಬರಿಗೊಂಡ ಆರೋಪಿ ಕಾರಿನಲ್ಲೇ ಸಿಮೆಂಟ್ ಇಟ್ಟಿಗೆಯಿಂದ ಪ್ರಜ್ವಲ್ ತಲೆಗೆ ಭೀಕರವಾಗಿ ಹೊಡೆದು ಕೊಲೆಗೈದಿದ್ದ.
ಕೊಲೆಯ ಬಳಿಕ ಬಾಲಕನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಅಡಗಿಸಿಟ್ಟು ಆಂಧ್ರಪ್ರದೇಶದತ್ತ ಪರಾರಿಯಾಗಲು ಭಾಸ್ಕರ್ ರೆಡ್ಡಿ ಯತ್ನಿಸಿ ಗಾಬರಿಯಲ್ಲಿ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬಳ್ಳಾರಿ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕಾರು ಬಿದ್ದು ಮಹಿಳೆ ಸಾವು
ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಚಿಕ್ಕಜಾಲ ಠಾಣೆಯ ಪೊಲೀಸರು ಅನುಮಾನಗೊಂಡು ಕಾರನ್ನು ಪರಿಶೀಲಿಸಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ಬಾಲಕ ಕಾರಿಗೆ ಅಡ್ಡಬಂದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ಪೊಲೀಸರನ್ನು ನಂಬಿಸಲು ಭಾಸ್ಕರ್ ರೆಡ್ಡಿ ಯತ್ನಿಸಿದ್ದನು. ಆದರೆ ತನಿಖೆಯ ಬಳಿಕ ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದು ಸಾಬೀತಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.