ಬೆಂಗಳೂರು: ತಮ್ಮ ಆಡಳಿತದ ಸಾಧನೆ ಶೂನ್ಯದಿಂದ ಕೋಮವರೆಗೆ ಎಂಬುದು ರಾಜ್ಯಕ್ಕೆ ತಿಳಿದಿದೆ. ಶೂನ್ಯ ನೇಮಕಾತಿ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಎಲ್ಲಾ ಶೂನ್ಯಗಳಿಂದ ಕೋಮಕ್ಕೆ ತಲುಪಿಸಿದ ಶ್ರೇಯ ತಮ್ಮದೇ ಎಂದು ರಾಜ್ಯ ಬಿಜೆಪಿ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಅವರು ಕಿಡಿಕಾರಿದ್ದಾರೆ.
ರಾಜ್ಯದ ಸಾರಿಗೆ ಇಲಾಖೆಯನ್ನು ಕೋಮಾಗೆ ತಳ್ಳಿದ ಕೀರ್ತಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಬೇಕು ಎಂಬ ಬಿಜೆಪಿ ಟೀಕೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಸಾರಿಗೆಯನ್ನು ಕೋಮಗೆ ತಳ್ಳಿದ ತಮ್ಮ ಹಿಂದಿನ ಸರ್ಕಾರದ ಬಗ್ಗೆ ಮಾಹಿತಿ ನೀಡಬೇಕೆಂದು ಕೇಳುತ್ತಿರುವ ಬಗ್ಗೆ ನಮಗೆ ಅರ್ಥವಾಯಿತು ಎಂದಿರುವ ಸಚಿವರು, 7 ಅಂಶಗಳನ್ನು ಉಲ್ಲೇಖಿಸಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಟೀಕಿಸಿದ್ದಾರೆ.
- ಬಸ್ಸುಗಳು ರಸ್ತೆ ರಸ್ತೆಯಲ್ಲಿ ನಿಲ್ಲಲು ಪ್ರಮುಖ ಕಾರಣ ತಮ್ಮ ಅವಧಿಯಲ್ಲಿ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ತಡೆ ನೀಡಿದ ಫಲಶೃತಿ.
- ತಮ್ಮ ಆಡಳಿತದ ಅವಧಿಯಲ್ಲಿ 60% ಕ್ಕೂ ಹೆಚ್ಚು ಬಸ್ಸುಗಳು ನಿಷ್ಕ್ರಿಯಗೊಂಡಿದ್ದರೂ ಸಹ ಕಾರ್ಯಾಚರಣೆ ಮಾಡಲು ಅನುವು ಮಾಡಿಕೊಟ್ಟಿದರ ಫಲಶೃತಿ.
- ಹೊಸ ಬಸ್ಸುಗಳ ಸೇರ್ಪಡೆ ಮಾಡದೇ ಸಾರಿಗೆ ಸಂಸ್ಥೆಗಳನ್ನು ಕೋಮದೆಡೆಗೆ ಕೊಂಡ್ಯೊಯ್ದ ಕೀರ್ತಿ ನಿಮಗೆ ಸಲ್ಲಬೇಕಲ್ಲವೇ?
- ತಮ್ಮ ಅವಧಿಯಲ್ಲಿ ಈ ತಿಂಗಳ ವೇತನ ಮುಂದಿನ ತಿಂಗಳು, ಕೆಲವೊಮ್ಮ ಅರ್ಧ ಸಂಬಳ ನೀಡಿ ನೌಕರರ ಹಾಗೂ ಅವರ ಕುಟುಂಬವನ್ನು ಬೀದಿಗೆ ತಂದಿದ್ದ ನಿಮಗೆ ಮಾತನಾಡುವ ಯಾವ ಯೋಗ್ಯತೆ ತಮಗಿದೆ?
- ನಮ್ಮ ಆಡಳಿತದ ಅವಧಿಯಲ್ಲಿ 7800 ಹೊಸ ಬಸ್ ಸೇರ್ಪಡೆ, 10473 ಹೊಸ ನೇಮಕಾತಿ, ಪ್ರತಿ ತಿಂಗಳ ಮೊದಲನೆ ದಿನವೇ ನೌಕರರಿಗೆ ವೇತನ ಪಾವತಿ, 4183 ಹಳೆಯ ಬಸ್ಸುಗಳನ್ನು ನಿಷ್ಕ್ರಿಯ, 2109 ಬಸ್ಸುಗಳು ಪುನಶ್ಚೇತನಕಾರ್ಯ, ಹೊಸ ಬಸ್ ನಿಲ್ದಾಣಗಳು/ ಘಟಕಗಳು/ ನೌಕರರಿಗೆ ವಸತಿ ಗೃಹಗಳು ನಿರ್ಮಾಣ. ಇವು ನಮ್ಮ ಸಾಧನೆ.
- ತಮ್ಮಆಡಳಿತದ ಅವಧಿಯಲ್ಲಿ ವೇತನ ಪರಿಷ್ಕರಣೆ ಮಾಡಿ ಅದಕ್ಕೆ ತಗಲುವ ಹಣವನ್ನು ಬಜೆಟ್‌ನಲ್ಲಿ ಘೋಷಿಸದೆ, ಅವರಿಗೆ ವಂಚಿಸಿರುವ ನೀವು ಮಾತನಾಡುವ ನೈತಿಕತೆ ಉಳಿಸಿಕೊಂಡಿದ್ದೀರಾ?
- ತಮ್ಮ ಆಡಳಿತದ ಅವಧಿಯಲ್ಲಿ ಟಿ.ವಿ ಯಲ್ಲಿ ಪ್ರಸಾರವಾಗಿರುವ ದೃಶ್ಯವನ್ನು ನೋಡಿದರೆ ತಮ್ಮ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ನೌಕರರಿಗೆ ಯಾವ ಪರಿ ವೇತನ ನೀಡಿದ್ದೀರಾ ಎಂಬುದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.