ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ (bihar election result 2025) ಪ್ರಕಟವಾಗಿದೆ. ಜೆಡಿಯು, ಬಿಜೆಪಿ ಹಾಗೂ ಎಲ್‌ಜಿಪಿಗಳ ಕಾಂಬಿನೇಶನ್‌ನ ಎನ್‌ಡಿಎ ರಾಜ್ಯದಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದೆ. ನಿತೀಶ್ ಕುಮಾರ್ (Nitish kumar) ಒಂಬತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ. ನರೇಂದ್ರ ಮೋದಿ- ಅಮಿತ್ ಶಾ ಜೋಡಿ ದಿಲ್ಲಿಯಲ್ಲಿ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಕರ್ನಾಟಕದಲ್ಲಿಯೂ ಬಿಜೆಪಿ ಬಿಹಾರದ ಗೆಲುವಿಗೆ ಸಂತಸದ ನಗು ಸೂಸಿದೆ. ಆದರೆ ಕಾಂಗ್ರೆಸ್ ಧುರೀಣ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೂ ಈ ಫಲಿತಾಂಶ ನಿರಾಳತೆ ತಂದಿದ್ದು, ಅವರ ಸಿಎಂ ಸ್ಥಾನ ಇನ್ನಷ್ಟು ಗಟ್ಟಿಯಾಗಿದೆ.
ಬಿಹಾರ ಚುನಾವಣೆಯ ಬಿಸಿಯ ನಡುವೆ, ಕಾಂಗ್ರೆಸ್‌ನಲ್ಲಿ ʼನವೆಂಬರ್ ಕ್ರಾಂತಿʼಯ ಕುರಿತ ಮಾತುಕತೆಗಳು ಬಿದ್ದೇ ಹೋಗಿದ್ದವು. ಆರಂಭದಲ್ಲಿ ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಸಿಎಂ ಸ್ಥಾನಾವಧಿ ಮುಗಿದಿದ್ದು, ಮುಂದಿನ ಅವಧಿಗೆ ಡಿಕೆ ಶಿವಕುಮಾರ್ ಅವರನ್ನು ಕೂರಿಸಬೇಕು ಎಂದು ಡಿಕೆಶಿ ಅವರ ಬೆಂಬಲಿಗರು ಧ್ವನಿ ಎತ್ತಿದ್ದರು. ಬಿಹಾರ ಫಲಿತಾಂಶದ ಬಗ್ಗೆ ಯಾವುದೇ ಕ್ಲೂ ಇಲ್ಲದ ಹೊತ್ತಿನಲ್ಲಿ, ಸಿದ್ದರಾಮಯ್ಯ ಅವರನ್ನು ಬದಲಿಸಿ ಇರುವೆ ಬಿಟ್ಟುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧವಿರಲಿಲ್ಲ. ಒಂದು ವೇಳೆ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದಿದ್ದರೆ, ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ದಕ್ಕಿದ್ದರೆ, ಆಗ ಕಾಂಗ್ರೆಸ್ ಹೈಕಮಾಂಡ್ ಇನ್ನಷ್ಟು ಬಲಿಷ್ಠವಾಗುತ್ತಿತ್ತು. ತನ್ನ ಕಾರ್ಯತಂತ್ರಗಳು ನಡೆಯುತ್ತವೆ ಎಂಬ ಆತ್ಮವಿಶ್ವಾಸದಿಂದ ಇತರ ರಾಜ್ಯಗಳಲ್ಲೂ ಆಂತರಿಕ ಬದಲಾವಣೆಗಳನ್ನು ಮಾಡಿಕೊಳ್ಳಲು ಕೈ ವರಿಷ್ಠರು ಮುಂದಾಗುತ್ತಿದ್ದರು.
ಆದರೆ ಇದೀಗ ಬಿಹಾರದಲ್ಲಿ ಕಾಂಗ್ರೆಸ್ ದಯನೀಯವಾಗಿ ಸೋತಿದೆ. ಐದು ಸ್ಥಾನಗಳನ್ನು ದಕ್ಕಿಸಿಕೊಳ್ಳಲೂ ಸಾಧ್ಯವಾಗಿಲ್ಲ. ನಾಲ್ಕನೇ ಸ್ಥಾನದಲ್ಲಿಯೂ ಅದು ಇಲ್ಲ. ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು ಅದರ ವರಿಷ್ಠರೂ ಆಗಿರುವುದು ಕಾಕತಾಳೀಯವಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ವಾಧ್ರಾ ಅಲ್ಲಿ ಪ್ರಚಾರ ನಡೆಸಿದ್ದಾರೆ. ಇವರೆಲ್ಲರಿಗೂ ಮುಖಭಂಗವಾಗಿದೆ. ಸೋತ ಮುಖ ಹೊತ್ತ ವರಿಷ್ಠರು ಇದೀಗ ಯಾವುದೇ ರಾಜ್ಯದಲ್ಲಿ ಯಾವುದೇ ಬದಲಾವಣೆಗೆ ಮುಂದಾಗುವ ಸಾಧ್ಯತೆ ಇಲ್ಲ. ಕರ್ನಾಟಕದಲ್ಲಂತೂ ಸಿದ್ದರಾಮಯ್ಯನವರನ್ನು ಬದಲಿಸುವ ಇರಾದೆಯನ್ನೂ ಹೈಕಮಾಂಡ್ ಇದೀಗ ಮುಂದಿಡದು. ರಾಜ್ಯ ನಾಯಕರು ಯಾರಾದರೂ ಅಂಥ ಯೋಚನೆ ಮುಂದಿಟ್ಟರೂ ಅವರ ಮಾತು ಕೇಳಿಸಿಕೊಳ್ಳಲಾರರು.
ಇದನ್ನೂ ಓದಿ: Bihar Election 2025 Results: ಬಿಹಾರಲ್ಲಿ ಎನ್‌ಡಿಎ ಸ್ಪಷ್ಟ ಬಹುಮತದತ್ತ; ಸಂಜೆ ದೆಹಲಿ ಬಿಜೆಪಿ ಕಚೇರಿಗೆ ಮೋದಿ ಭೇಟಿ
ಬಲಿಷ್ಠ ಪ್ರಾದೇಶಿಕ ನಾಯಕರ ಅಗತ್ಯವನ್ನೂ ಈ ಫಲಿತಾಂಶ ವಿಶದಪಡಿಸಿದೆ. ಬಿಜೆಪಿಯಂಥ ಬಲಿಷ್ಠ ರಾಷ್ಟ್ರೀಯ ಪಕ್ಷವೇ ರಾಜ್ಯದಲ್ಲಿ ಬಂದು ನಿಂತಿದ್ದರೂ, ರಾಜ್ಯ ನಾಯಕ ನಿತೀಶ್ ಕುಮಾರ್ ನೆಲಗಟ್ಟು ಅಲ್ಲಾಡಿಲ್ಲ. ನಿತೀಶ ಕುಮಾರ್ ಅವರ ಬೆಂಬಲದಿಂದಲೇ ಬಿಜೆಪಿ ನೆಲೆಗಟ್ಟೂ ಅಲ್ಲಿ ಗಟ್ಟಿಯಾಗಿದೆ. ಹೀಗಾಗಿ, ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್ ಮಾತುಗಳಿಗಿಂತ ಬಲಿಷ್ಠ ರಾಜ್ಯ ನಾಯಕರೇ ಮುಖ್ಯ ಪಾತ್ರ ವಹಿಸುತ್ತಾರೆ ಎಂಬುದು ಖಚಿತಗೊಂಡಿದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರು ಈಗ ಪ್ರಶ್ನಾತೀತ ನಾಯಕ. ಅವರ ಜನಪ್ರಿಯತೆಯೂ ಅಕುಂಠಿತ, ಅಬಾಧಿತ. ಗ್ಯಾರಂಟಿ ಯೋಜನೆಗಳಿಂದಾಗಿ ತಮ್ಮ ಪ್ರಭಾವವನ್ನು ಇನ್ನಷ್ಟು ವಿಸ್ತರಿಸಿಕೊಂಡಿರುವ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ಬಣದ ಯಾವುದೇ ಆಟ ನಡೆಯದಂತೆ ನೋಡಿಕೊಂಡಿದ್ದಾರೆ.
ಇವೆಲ್ಲದರ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಇನ್ನಷ್ಟು ಗಟ್ಟಿಯಾಗಿದೆ ಎಂದರೆ ಅತಿಶಯೋಕ್ತಿಯಿಲ್ಲ. ಈ ಅವಧಿಯಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸುವ ರಿಸ್ಕನ್ನು ಹೈಕಮಾಂಡ್ ತೆಗೆದುಕೊಳ್ಳಲಾರದು.
ಇದನ್ನೂ ಓದಿ: Bihar Election Result 2025: ಮುಗ್ಗರಿಸಿದ ಮಹಾಘಟಬಂಧನ್; ಗ್ಯಾರಂಟಿ ಸ್ಕೀಮ್‌ಗಳು ಫೇಲ್ ಆಗಿದ್ದೆಲ್ಲಿ?