ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಯಾವುದೇ ಜಾತಿ, ಸಮಾಜದವರು ಧರ್ಮದ ಕಾಲಂನಲ್ಲಿ 'ಹಿಂದೂ' ಎಂದೇ ಬರೆಸಿ: ಬಿ.ವೈ.ವಿಜಯೇಂದ್ರ ಮನವಿ

BY Vijayendra: ಯಾವುದೇ ಜಾತಿ, ಸಮಾಜದವರು ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕು ಎಂದು ಬಿಜೆಪಿಯ ರಾಜಕೀಯ ಚಿಂತನಾ ಶಿಬಿರದಲ್ಲಿ ನಿರ್ಣಯಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು: ಧರ್ಮ ಒಡೆಯುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಇದೊಂದು ದುರಂತ. ಆದರೆ, ಯಾವುದೇ ಜಾತಿ, ಸಮಾಜದವರು ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕು ಎಂದು ಬಿಜೆಪಿಯ ರಾಜಕೀಯ ಚಿಂತನಾ ಶಿಬಿರದಲ್ಲಿ ನಿರ್ಣಯಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಬಿಜೆಪಿಯ ರಾಜಕೀಯ ಚಿಂತನಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜಾತಿ, ಉಪ ಜಾತಿ ಆಯಾ ಸಮುದಾಯಕ್ಕೆ ಬಿಟ್ಟ ವಿಚಾರ. ಅದನ್ನು ಅವರು ತೀರ್ಮಾನಿಸಬೇಕು. ದೇಶ, ರಾಜ್ಯದ ಹಿತದೃಷ್ಟಿಯಿಂದ ಧರ್ಮದ ಕಾಲಂನಡಿ ಹಿಂದೂ ಎಂದು ಬರೆಸಲು ವಿನಂತಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿ ಮಾಡಲು ಮುಂದಾಗಿದೆ. ರಾಜ್ಯಗಳಿಗೆ ಜಾತಿ ಜನಗಣತಿ ಅಧಿಕಾರ ಇಲ್ಲದೇ ಇದ್ದರೂ 47 ಹೊಸ ಜಾತಿಗಳನ್ನು ಸೃಷ್ಟಿಸಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ನೇಕಾರ, ಕ್ರಿಶ್ಚಿಯನ್ ಪರಿಶಿಷ್ಟ ಜಾತಿ, ಪಂಗಡ ಎಂದು ಗೊಂದಲ ಸೃಷ್ಟಿ ಮಾಡಿದ್ದಾಗಿ ಆರೋಪಿಸಿದರು.

Vijayendra

ಸಿದ್ದರಾಮಯ್ಯರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂತರಾಜು ವರದಿ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಈ ವರದಿ ಅವೈಜ್ಞಾನಿಕ ಎಂದು ನಾವು ವಿರೋಧಿಸಿದ್ದೆವು. ರಾಹುಲ್ ಗಾಂಧಿಯವರು ಹೇಳಿದ್ದಾರೆಂಬ ಕಾರಣಕ್ಕೆ ಕಾಂತರಾಜು ವರದಿಯನ್ನು ಸಿದ್ದರಾಮಯ್ಯನವರ ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು ಎಂದು ಆಕ್ಷೇಪಿಸಿದರು. ಹಿಂದೆಯೂ ಸಿದ್ದರಾಮಯ್ಯರ ಸರ್ಕಾರವು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ಟೀಕಿಸಿದರು.

ಈ ಶಿಬಿರದಲ್ಲಿ ಎರಡು ಮಹತ್ವದ ನಿರ್ಣಯ ಮಾಡಲಾಗಿದೆ. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರವು ಸರಳೀಕೃತ ಜಿಎಸ್‍ಟಿ ಮೂಲಕ ಒಂದು ಐತಿಹಾಸಿಕ ನಿರ್ಧಾರವನ್ನು ಘೋಷಿಸಿದೆ. ಇದರಿಂದ ರಾಜ್ಯ, ದೇಶದ ಜನರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಅನೇಕ ಸವಾಲುಗಳು ಭಾರತದ ಮುಂದಿವೆ. ಇಂಥ ಸಂದರ್ಭದಲ್ಲಿ ಇಂಥ ಜಿಎಸ್‍ಟಿ ಸುಧಾರಣೆ ಘೋಷಿಸಿದ್ದು, ಇದಕ್ಕಾಗಿ ಈ ಶಿಬಿರದಲ್ಲಿ ಮೋದಿಜೀ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒಕ್ಕೊರಲ ಅಭಿನಂದನೆ ಸಲ್ಲಿಸಿದ್ದಾಗಿ ವಿವರಿಸಿದರು.

ಈ ಸುದ್ದಿಯನ್ನೂ ಓದಿ | Kota Srinivasa Poojary: ಹಿಂದೂಗಳಲ್ಲಿ ದೊಡ್ಡ ಗೊಂದಲ ಸೃಷ್ಟಿಸಲು ಹೊರಟಿದೆ ಕಾಂಗ್ರೆಸ್ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಉಪಮುಖ್ಯಮಂತ್ರಿ ಮತ್ತು ಸಂಸದರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಭೈರತಿ ಬಸವರಾಜ್, ಶಾಸಕ ಅರವಿಂದ್ ಬೆಲ್ಲದ್, ಮಾಜಿ ಸಚಿವೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ, ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ರಾಜು ಗೌಡ ನಾಯಕ್ ಅವರು ಉಪಸ್ಥಿತರಿದ್ದರು.