ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಬಂಕಾಪುರ ಹಾಗೂ ಸವಣೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
- ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಶಿಗ್ಗಾಂವ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ನಾಗನೂರ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು 105.19 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ತೆವರಮಳ್ಳಿಹಳ್ಳಿ ಕೆರೆ ಸುಧಾರಣಾ ಕಾಮಗಾರಿಗಳನ್ನು 92.84 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.
- ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಸವಣೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಮೋತಿ ತಲಾಬ ಕೆರೆ ಸುಧಾರಣಾ ಕಾಮಗಾರಿಗಳನ್ನು153.20 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
- ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯತಿಯ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಆಸ್ತಿ ನಂ.3741, ಕ್ಷೇತ್ರ-400.63 ಚ.ಮೀಟರ್ ನಿವೇಶನವನ್ನು, ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು ಇವರಿಗೆ 30 ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.
- ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಯಡವಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ನೀರನ್ನೆತ್ತಿ, ತುಂಗಭದ್ರಾ ಎಡದಂಡೆ ಕಾಲುವೆಯ ವಿತರಣಾ ಕಾಲುವೆ 76ರಡಿ ಸುಮಾರು 10,000 ಎಕರೆ ಬಾಧಿತ ಅಚ್ಚುಕಟ್ಟಿಗೆ ನೀರೊದಗಿಸುವ 109.10 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ವಿಶ್ವೇಶ್ವರಯ್ಯ ನಾಲಾ ಜಾಲದಡಿಯಲ್ಲಿ ಬರುವ ಹೆಬ್ಬಕವಾಡಿ ಶಾಖಾ ನಾಲೆ ಮತ್ತು ನಿಡಘಟ್ಟ ಶಾಖಾ ನಾಲೆಯ ಅಭಿವೃದ್ಧಿ ಕಾಮಗಾರಿಯ 2ನೇ ಹಂತದ ಕಾಮಗಾರಿಯನ್ನು 293.47 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹೊಸಹೊಳಲು ಎಡದಂಡೆ ನಾಲೆ ಸರಪಳಿ 11 ಕಿ.ಮೀ.ನಿಂದ 16 ಕಿ.ಮೀ.ವರೆಗೆ ಉಳಿಕೆ ಕಾಮಗಾರಿ ಹಾಗೂ ಆಧುನೀಕರಣ ಕಾಮಗಾರಿಯನ್ನು 21.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನೀಡಿದೆ.
- ಬೆಳಗಾವಿ ಜಿಲ್ಲೆಯ ಖಾನಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು ನದಿ ದಂಡೆಯಲ್ಲಿ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- "ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಆವೃತ್ತಿ 2.0 (ಕೆ-ಜಿಐಎಸ್ 2.0)"ಯನ್ನು 150 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
- ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ (ESIS ಲಾಭ ಪಡೆಯುವವರನ್ನು ಸೇರಿಸಿ) ವಯೋ ವಂದನಾ ಯೋಜನೆಯನುಸಾರ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
- ಬೆಂಗಳೂರಿನ ಯಲಹಂಕ ಬೆಳ್ಳಹಳ್ಳಿಯಲ್ಲಿ ಮತ್ತು ತಾಲೂಕು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದಲ್ಲಿ ತಲಾ 50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಪ್ರತ್ಯೇಕವಾಗಿ 100 ಹಾಸಿಗೆಗಳ ಸಾಮರ್ಥ್ಯದ ಎರಡು ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಗಳ ಕಟ್ಟಡಗಳನ್ನು ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
- "ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರ (ತಿದ್ದುಪಡಿ) ನಿಯಮಗಳು,2025 ಕ್ಕೆ ತಿದ್ದುಪಡಿ ತಂದಿದ್ದು, ಸಚಿವ ಸಂಪುಟ ಅನುಮೋದನೆ ನೀಡಿದೆ.
- ರಾಜ್ಯದಲ್ಲಿ ಡಿಜಿ ಕಂದಾಯ ಯೋಜನೆಯಡಿ ಸೇವೆಗಳನ್ನು ನೀಡಲು ರಾಜಸ್ವ/ ಕಂದಾಯ ನಿರೀಕ್ಷಕರಿಗೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ 19.25 ಕೋಟಿ ರೂ. ಅಂದಾಜು ಮೊತ್ತದಲ್ಲಿ 3500 Chromebook ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- 11 ಅರಣ್ಯ/ ಅರಣ್ಯಾಧಾರಿತ/ ಸೂಕ್ಷ್ಮ ಸಮುದಾಯದ ವಸತಿ ರಹಿತ 6,856 ಕುಟುಂಬಗಳಿಗೆ 4.50 ಲಕ್ಷ ಘಟಕ ವೆಚ್ಚದಲ್ಲಿ (ಸೋಲಿಗ, ಹಸಲರು, ಗೌಡಲು, ಸಿದ್ಧಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಬೆಟ್ಟ, ಕುರುಬ, ಯರವ, ಪಣಿಯನ್ ಇತ್ಯಾದಿ) ಒಟ್ಟು 160 ಕೋಟಿ ರೂ. ಅಂದಾಜು ಮೊತ್ತದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಹಾಗೂ ಈ ಯೋಜನೆಗೆ "ಮುಖ್ಯಮಂತ್ರಿಗಳ ಆದಿವಾಸಿ ಗೃಹ ಭಾಗ್ಯ ಯೋಜನೆ" ಎಂದು ಕರೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) (ತಿದ್ದುಪಡಿ) ಆದೇಶ, 2025 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
- ದುರಸ್ತಿ ಅಗತ್ಯವಿರುವ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳ 149 ಕಾಮಗಾರಿಗಳನ್ನು ಒಟ್ಟು ರೂ.183.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
- ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
- ಕರ್ನಾಟಕದಲ್ಲಿ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಈ ಸುದ್ದಿಯನ್ನೂ ಓದಿ | Karnataka Ratna: ರಾಜ್ಯ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಕರ್ನಾಟಕ ರತ್ನʼ ಪಡೆದ ಸಾಧಕರ ಪಟ್ಟಿ