ಬೆಂಗಳೂರು: ಮುಸ್ಲಿಂ ವ್ಯಕ್ತಿಯ ಮೊದಲ ವಿವಾಹ ಅನೂರ್ಜಿತವಾಗಿಲ್ಲದಿದ್ದರೆ ಅಥವಾ ರದ್ದಾಗಿಲ್ಲವಾದರೆ ವಿಶೇಷ (Karnataka High Court) ವಿವಾಹ ಕಾಯಿದೆಯಡಿ ಎರಡನೇ ವಿವಾಹ ಮಾಡಿಕೊಂಡರೆ ಅದು ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. ಮುಸ್ಲಿಂ ವ್ಯಕ್ತಿಯ ಎರಡನೇ ಪತ್ನಿ ಬಳ್ಳಾರಿಯ ಮೀನಾಕುಮಾರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಮುಸ್ಲಿಂರ ಮದುವೆ ಸಂಬಂಧ ಈ ಆದೇಶ ನೀಡಿದೆ.
ಹೈಕೋರ್ಟ್ನಲ್ಲಿ ನಡೆದ ಅರ್ಜಿ ವಿಚಾರಣೆ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, 'ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ನೀಡಿದೆ, ಆದ್ರೂ ವೈಯಕ್ತಿಕ ಕಾನೂನಿನಡಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದ್ರೆ ಮಾತ್ರ ಈ ಕಾನೂನು ಸ್ಥಾನವು ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದೆ. ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾಗಲು ಕಕ್ಷಿದಾರರು ಆಯ್ಕೆ ಮಾಡಿಕೊಂಡರೆ ಕಾನೂನುಬದ್ಧವಾಗುತ್ತದೆ. ಆಗ ಈಗಾಗಲೇ ವಿವಾಹವಾದ ವ್ಯಕ್ತಿಯ ಹಿಂದಿನ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಈ ಕಾಯಿದೆಯಡಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ,'' ಎಂದು ಆದೇಶಿಸಿದೆ.
ವಿಶೇಷ ವಿವಾಹ ಕಾಯಿದೆಯಡಿ 2008ರಲ್ಲಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ''ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹವಾದಾಗ ಅರ್ಜಿದಾರರ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರಿಂದ ಅರ್ಜಿದಾರರು ಮತ್ತು ಮೃತ ವ್ಯಕ್ತಿಯ ನಡುವಿನ ವಿವಾಹವು ಅನೂರ್ಜಿತವಾಗಿದೆ,'' ಎಂದು ನ್ಯಾಯಾಲಯವು ಹೇಳಿದೆ.
''ಜತೆಗೆ ವಿಶೇಷ ವಿವಾಹ ಕಾಯಿದೆ ಸೆಕ್ಷನ್ 4(ಎ) ಪ್ರಕಾರ ಮೊದಲ ಮದುವೆ ರದ್ದಾಗದೇ ಇದ್ದಾಗ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಹಿಂದಿನ ವಿವಾಹ ಚಾಲ್ತಿಯಲ್ಲಿರುವುದರಿಂದ ಕಾಯಿದೆಯಡಿ ನಡೆದ ವಿವಾಹವು ಅನೂರ್ಜಿತವಾಗಿದೆ. ಅಲ್ಲದೆ, ಅದು ಪತಿ ಮತ್ತು ಪತ್ನಿಯ ಕಾನೂನುಬದ್ಧ ಸ್ಥಾನಮಾನವನ್ನು ಪಕ್ಷಕಾರರಿಗೆ ನೀಡುವುದಿಲ್ಲ,'' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.