Caste census: ಜಾತಿ ಗಣತಿಗೆ ಆಧಾರ್ ಸಂಖ್ಯೆ ಜತೆ ಒಟಿಪಿ ಕೇಳುತ್ತಿರುವ ಸಮೀಕ್ಷಕರು; ಸೈಬರ್ ವಂಚನೆ ಭೀತಿಯಲ್ಲಿ ನಾಗರಿಕರು!
Chikkanayakanahalli News: ಜಾತಿ ಸಮೀಕ್ಷೆಗೆ ಬರುವವರು ಅಧಿಕೃತ ಸಿಬ್ಬಂದಿಯೇ ಅಥವಾ ವಂಚಕರೇ ಎಂಬುದನ್ನು ಧೃಡಪಡಿಸಿಕೊಳ್ಳುವುದು ಹೇಗೆ ಎಂಬ ಗೊಂದಲವೂ ಅನೇಕರನ್ನು ಕಾಡುತ್ತಿದೆ. ಸಮೀಕ್ಷೆ ವೇಳೆ ಒಟಿಪಿ ಪಡೆದು ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳು, ಅಥವಾ ಇತರೆ ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗುವ ಭೀತಿ ಇದೆ ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

-

ಚಿಕ್ಕನಾಯಕನಹಳ್ಳಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ (Caste census) ಸೈಬರ್ ವಂಚನೆ ಭೀತಿಯು ಸಾರ್ವಜನಿಕರಿಗೆ ಕಾಡುತ್ತಿದೆ. ಸಮೀಕ್ಷಾ ಸಿಬ್ಬಂದಿ ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್‌ಗೆ ಬರುವ ಒಟಿಪಿ ನೀಡುವಂತೆ ಕೇಳುತ್ತಿರುವುದು ಈ ಆತಂಕಕ್ಕೆ ಮೂಲ ಕಾರಣವಾಗಿದೆ.
ಸಮೀಕ್ಷಾ ಸಿಬ್ಬಂದಿ, ಮನೆ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆಯನ್ನು ದಾಖಲಿಸಿ, ಆನಂತರ ಮೊಬೈಲ್‌ಗೆ ಬರುವ ಒಟಿಪಿಯನ್ನು ಕೇಳುತ್ತಿದ್ದಾರೆ. ಒಂದು ವೇಳೆ ಗಣತಿದಾರರ ಸೋಗಿನಲ್ಲಿ ಸೈಬರ್ ಕಳ್ಳರು ಬಂದರೆ, ನಮ್ಮಿಂದ ಒಟಿಪಿ ಪಡೆದು ನಮ್ಮ ಮಾಹಿತಿಗಳನ್ನು ಕದಿಯುವ ಅಪಾಯವಿದೆ. ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳು, ಅಥವಾ ಇತರೆ ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗುವ ಭೀತಿ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಮೀಕ್ಷೆಗೆ ಬರುವವರು ಅಧಿಕೃತ ಸಿಬ್ಬಂದಿಯೇ ಅಥವಾ ವಂಚಕರೇ ಎಂಬುದನ್ನು ಧೃಡಪಡಿಸಿಕೊಳ್ಳುವುದು ಹೇಗೆ ಎಂಬ ಗೊಂದಲವೂ ಅನೇಕರನ್ನು ಕಾಡುತ್ತಿದೆ. ಸಮೀಕ್ಷಾ ಕಾರ್ಯದ ಮುನ್ನ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಿದ ನಂತರವೂ ಒಟಿಪಿ ಕೇಳುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ. ಇದರ ಜತೆಗೆ ಆ್ಯಪ್ ಓಪನ್ ಆಗದಿರುವುದು, ತಾಂತ್ರಿಕ ತೊಂದರೆ ಮತ್ತು ಒಟಿಪಿ ಸರಿಯಾದ ಸಮಯಕ್ಕೆ ಬರದಿರುವುದು ಕೂಡ ದತ್ತಾಂಶ ಸಂಗ್ರಹಕ್ಕೆ ಅಡಚಣೆಯಾಗಿದೆ.
ಈ ಸುದ್ದಿಯನ್ನೂ ಓದಿ | Caste Census: ವೈಯಕ್ತಿಕ ಮಾಹಿತಿ ಕೇಳಲು ಹೋಗಬೇಡಿ: ಸಮೀಕ್ಷೆ ಮಾಡೋರಿಗೆ ಡಿಕೆಶಿ ಸಲಹೆ
ಸರಕಾರದಿಂದ ದ್ವಿಮುಖ ನೀತಿ?
ಯಾವುದೇ ಕಾರಣಕ್ಕೂ ಅಪರಿಚಿತರಿಗೆ ಒಟಿಪಿ ಹಂಚಬೇಡಿ ಎಂದು ಸೈಬರ್ ಪೋಲೀಸರು ಹಾಗೂ ಬ್ಯಾಂಕುಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರಕಾರ ಸಮೀಕ್ಷೆ ಹೆಸರಲ್ಲಿ ಒಟಿಪಿ ಕೇಳುತ್ತಿರುವುದು ಜನರಲ್ಲಿ ಗೊಂದಲ ಹೆಚ್ಚಿಸಿದೆ. ಗಣತಿದಾರರ ಗುರುತಿನ ಚೀಟಿಯ ಅಧಿಕೃತತೆಯನ್ನು ಪರಿಶೀಲಿಸುವುದು ಸಾರ್ವಜನಿಕರಿಗೆ ಕಷ್ಟಕರವಾಗಿದೆ. ಒಟಿಪಿ ಕೇಳುವುದರ ಹಿಂದಿನ ಉದ್ದೇಶ ಮತ್ತು ಆ ಒಟಿಪಿ ಸುರಕ್ಷಿತವಾಗಿ ಬಳಕೆಯಾಗುವ ಬಗ್ಗೆ ಕುಟುಂಬಸ್ಥರು ತಕ್ಷಣ ಸ್ಪಷ್ಟನೆ ಪಡೆಯಬೇಕು. ಸಮೀಕ್ಷಾ ಸಿಬ್ಬಂದಿಯ ಸೂಕ್ತ ಗುರುತಿನ ಚೀಟಿ ಮತ್ತು ಕಾರ್ಯ ವಿಧಾನದ ಕುರಿತು ವಿವರವಾದ ಮಾಹಿತಿ ಪಡೆಯಬೇಕು.
(ವರದಿ: ಧನಂಜಯ್)