Cauvery Aarti: ಕಾವೇರಿ ಆರತಿ ಜ್ಯೋತಿ ಇಡೀ ರಾಜ್ಯವನ್ನು ಶಾಶ್ವತವಾಗಿ ಬೆಳಗುತ್ತದೆ: ಡಿಕೆಶಿ
DK Shivakumar: ಸೂರ್ಯ, ಚಂದ್ರ, ಗಾಳಿಯಿಲ್ಲದೇ ನಾವುಗಳು ಬದುಕಲು ಸಾಧ್ಯವಿಲ್ಲ. ಪಂಚಭೂತಗಳಿಗೆ ಪ್ರತಿದಿನ ನಾವು ಪೂಜೆ ಮಾಡುತ್ತೇವೆ. ಅದೇ ರೀತಿ ರಾಜ್ಯದ ಹಳೇ ಮೈಸೂರು ಭಾಗದ ಜೀವನದಿಯಾಗಿ ಮೂರುವರೆ ಕೋಟಿ ಜನರು ಸೇರಿದಂತೆ ಪಕ್ಕದ ತಮಿಳುನಾಡು, ಪಾಂಡಿಚೇರಿಯ ಜನರಿಗೆ ಜೀವನಾಧಾರವಾದ ಕಾವೇರಿಗೆ ನಾವು ಪೂಜೆ ಸಲ್ಲಿಸುತ್ತಿದ್ದೇವೆ. ಇಂದು ಬೆಳಗಿರುವ ಜ್ಯೋತಿ ಇಡೀ ರಾಜ್ಯವನ್ನು ಶಾಶ್ವತವಾಗಿ ಬೆಳಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

-

ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್) ಬೃಂದಾವನ ಉದ್ಯಾನದ ಆವರಣದಲ್ಲಿ ನಡೆದ ಐತಿಹಾಸಿಕ ಕಾವೇರಿ ಆರತಿಗೆ (Cauvery Aarti) ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಶುಕ್ರವಾರ ಸಂಜೆ ಚಾಲನೆ ನೀಡಿದರು. 10 ಸಾವಿರಕ್ಕೂ ಹೆಚ್ಚು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಮೊದಲಿಗೆ ದಕ್ಷಿಣ ಭಾರತ ಶೈಲಿಯಲ್ಲಿ ಸ್ಥಳೀಯ ಪುರೋಹಿತರ ತಂಡ ಆರತಿ ಬೆಳಗಿತು. ಆನಂತರ ವಾರಣಾಸಿಯಿಂದ ಬಂದಿದ್ದ 13 ಜನ ಪುರೋಹಿತರ ತಂಡ ಆರತಿ ಬೆಳಗಿತು.

ಆರತಿಯನ್ನು ಬರೀ ಧಾರ್ಮಿಕ ಕಾರ್ಯಕ್ರಮವಾಗಿ ರೂಪಿಸಿಲ್ಲ
ಕಾವೇರಿ ಆರತಿಯನ್ನು ಬರೀ ಧಾರ್ಮಿಕ ಕಾರ್ಯಕ್ರಮವಾಗಿ ರೂಪಿಸಿಲ್ಲ. ನಮ್ಮೆಲ್ಲರನ್ನು ಕಾಪಾಡುವ ಕಾವೇರಿ ತಾಯಿಗೆ ಗೌರವ ಸಲ್ಲಿಸುವ, ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವಾಗಿ ರೂಪಿಸಿದ್ದೇವೆ. ಇದನ್ನು ಯಾವುದೇ ತೊಂದರೆ ಬಂದರೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಹೆತ್ತತಾಯಿಗೆ ಗೌರವ ನೀಡುತ್ತಿರುವಂತೆ ತುತ್ತು ನೀಡುವ ತಾಯಿಗೆ ಶುಭ ಲಗ್ನ, ಶುಭ ಗಳಿಗೆಯಲ್ಲಿ ನಮನ ಸಲ್ಲಿಸುತ್ತಿದ್ದೇವೆ. ದೇಹದಲ್ಲಿ ರಕ್ತ ಹರಿದರೆ ಶಕ್ತಿ, ಈ ರಕ್ತಕ್ಕೆ ಶಕ್ತಿ ನೀಡುವುದು ಕಾವೇರಿ ತಾಯಿ ನೀರು. ಈ ತಾಯಿಗೆ ಪೂಜೆ ಮಾಡುವುದೇ ಮನಸ್ಸಿಗೆ ನೆಮ್ಮದಿ, ಕಣ್ಣಿಗೆ ಹಬ್ಬ. ಕನ್ನಡಿಗರ ಭಾಗ್ಯ ದೇವತೆ, ರೈತರ ಜೀವದಾತೆ ಕಾವೇರಿ ಮಾತೆ ಎಂದು ಬಣ್ಣಿಸಿದರು.

ಸೂರ್ಯ, ಚಂದ್ರ, ಗಾಳಿಯಿಲ್ಲದೇ ನಾವುಗಳು ಬದುಕಲು ಸಾಧ್ಯವಿಲ್ಲ. ಪಂಚಭೂತಗಳಿಗೆ ಪ್ರತಿದಿನ ನಾವು ಪೂಜೆ ಮಾಡುತ್ತೇವೆ. ಅದೇ ರೀತಿ ರಾಜ್ಯದ ಹಳೇ ಮೈಸೂರು ಭಾಗದ ಜೀವನದಿಯಾಗಿ ಮೂರುವರೆ ಕೋಟಿ ಜನರು ಸೇರಿದಂತೆ ಪಕ್ಕದ ತಮಿಳುನಾಡು, ಪಾಂಡಿಚೇರಿಯ ಜನರಿಗೆ ಜೀವನಾಧಾರವಾದ ಕಾವೇರಿಗೆ ನಾವು ಪೂಜೆ ಸಲ್ಲಿಸುತ್ತಿದ್ದೇವೆ. ಇಂದು ಬೆಳಗಿರುವ ಜ್ಯೋತಿ ಇಡೀ ರಾಜ್ಯವನ್ನು ಶಾಶ್ವತವಾಗಿ ಬೆಳಗುತ್ತದೆ ಎಂದರು.
ಕೊಡಗಿನಲ್ಲಿ ಹುಟ್ಟಿದ ಈ ನದಿ ಕನ್ನಂಬಾಡಿಯಲ್ಲಿ ನೆಲೆ ನಿಂತಿದ್ದಾಳೆ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಕಾವೇರಿ ಆರತಿ ಕಾರ್ಯಕ್ರಮ ಎಷ್ಟು ದೊಡ್ಡ ಮಟ್ಟದ ಕಾರ್ಯಕ್ರಮವಾಗಿ ಬೆಳೆಯುತ್ತದೆ ಎಂಬುದನ್ನು ನಾನು ಈಗ ಹೇಳಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು.

ಕಾವೇರಿ ಆರತಿಯನ್ನು ಹತ್ತು ಸಾವಿರ ಜನರು ಕುಳಿತು ವೀಕ್ಷಣೆ ಮಾಡುವಂತಹ ಸ್ಟೇಡಿಯಂ ಮಾದರಿ ಮಂಟಪ ನಿರ್ಮಾಣ ಮಾಡಿ ವಾರಕ್ಕೆ ಮೂರು ದಿನ ಆರತಿ ನಡೆಸುವುದು ನಮ್ಮ ಆಲೋಚನೆಯಾಗಿತ್ತು. ಕಾರಣಾಂತರಗಳಿಂದ ಇದು ಸಾಧ್ಯವಾಗಿಲ್ಲ. ಸಚಿವರಾದ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ವಾರಣಾಸಿ, ಹರಿದ್ವಾರಗಳಲ್ಲಿ ನಡೆಯುವ ಗಂಗಾ ಆರತಿಯನ್ನು ಅಧ್ಯಯನ ಮಾಡಲು ತಂಡವನ್ನು ಕಳುಹಿಸಲಾಗಿತ್ತು. ಇವರು ವರದಿ ನೀಡಿದ್ದಾರೆ. ಆದಷ್ಟು ಬೇಗ ಇದು ನೆರವೇರುವಂತೆ ಆಗಲಿ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Cauvery Aarti: ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಜತೆಗೆ ಸಾಹಸ ಹಾಗೂ ಜಲ ಕ್ರೀಡೆ ಆಯೋಜನೆ
ಮೇಕೆದಾಟು ಯೋಜನೆಗೆ ನಾವೆಲ್ಲರೂ ಹೆಜ್ಜೆ ಹಾಕಿದ್ದೇವೆ ಆದಷ್ಟು ಬೇಗ ಫಲ ದೊರಕುವಂತೆ ಕಾವೇರಿ ತಾಯಿ ಹಾಗೂ ಚಾಮುಂಡಿ ತಾಯಿ ಆಶೀರ್ವಾದ ಮಾಡುತ್ತಾರೆ. ರಾಜ್ಯದ ಜನರೂ ಸಹ ಪ್ರಾರ್ಥನೆ ಮಾಡಬೇಕೆಂದು ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವು ರೂಪಿಸಿರುವ ಯೋಜನೆಯನ್ನು ಮುಂದುವರೆಸುತ್ತೇವೆ. ನಮಗೆ ತಾಯಿ ಚಾಮುಂಡಿ ಸಂಪೂರ್ಣವಾದ ಶಕ್ತಿ ನೀಡುತ್ತಾಳೆ ಎನ್ನುವ ಭರವಸೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.