Chikkaballapur News: ಯಶಸ್ವಿಯಾಗಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕ ಸಂಘಟನೆಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ
ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿನ ಕೆಲ ಕ್ಷೇತ್ರಗಳನ್ನು ಗೌರಿಬಿದನೂರು ವ್ಯಾಪ್ತಿಗೆ ಸೇರಿಸಿರುವುದು, ಶಿಡ್ಲಘಟ್ಟ, ಚಿಂತಾಮಣಿ, ಚೇಳೂರು ಭಾಗದ ವಿಂಗಡಣೆಯಲ್ಲಿ ಯಡವಟ್ಟುಗಳಾಗಿವೆ ಎಂದು ಕೆಲ ಮಾಜಿ ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿ ಸರಿಪಡಿಸುವಂತೆ ಒತ್ತಾಯಿಸಿದರು. ಆದರೆ ಎಲ್ಲವೂ ಕ್ರಮಬದ್ಧವಾಗಿಯೇ ನಡೆದಿದೆ ಎಂದು ಹೇಳಿ ಪುನರ್‌ವಿಂಗಡನೆಗೆ ಸಭೆಯ ಅನುಮೋದನೆ ಪಡೆಯ ಲಾಯಿತು

-

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಟನೆಗಳ ಒಕ್ಕೂಟದ ೨೦೨೪-೨೫ನೇ ಸಾಲಿನ ಪ್ರಥಮ ವಾರ್ಷಿಕ ಸಾಮಾನ್ಯ ಸಭೆಯು ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು.
ಚಿಮುಲ್ ಆಡಳಿತಾಧಿಕಾರಿ ಡಿ.ಎಚ್.ಅಶ್ವಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ಪುನರ್ ವಿಗಂಡನೆಯ ವೇಳೆ ನಿಗದಿಯಾಗಿದ್ದ ಆಡಳಿತ ಮಂಡಳಿಯ ೧೩ ನಿರ್ದೇಶಕ ಸ್ಥಾನಗಳಿಗೆ ಹಾಗೂ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು.
ಪುನರ್ ವಿಂಗಡನೆಯಂತೆ ೧೩ ಮಂದಿ ಚುನಾಯಿತ ನಿರ್ದೇಶಕರು ಹಾಗೂ ೫ ಮಂದಿ ನಾಮ ನಿರ್ದೇಶಕ ಸದಸ್ಯರು ಸೇರಿ ಒಟ್ಟು ೧೮ ನಿರ್ದೇಶಕ ಸ್ಥಾನಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಕೆಲ ಮಾಜಿ ನಿರ್ದೇಶಕರು ಸ್ವಕ್ಷೇತ್ರ ಪುನರ್‌ವಿಂಗಡಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೆಲವು ಕ್ಷೇತ್ರಗಳ ವಿಂಗಡಣೆಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಮರು ವಿಂಗಡಣೆ ಮಾಡಿ ಎಂದು ಆಗ್ರಹಿಸಲಾಯಿತು.
ಇದನ್ನೂ ಓದಿ: Chinthamani News: ಹಜರತ್ ಮೊಹಮ್ಮದ್ ಗೌಸ್ ಷಾ ಖಾದ್ರಿ ರವರ 21ನೇ ಗಂಧೋತ್ಸವ ಸಡಗರ ಸಂಭ್ರಮದಿಂದ ಆಚರಣೆ
ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿನ ಕೆಲ ಕ್ಷೇತ್ರಗಳನ್ನು ಗೌರಿಬಿದನೂರು ವ್ಯಾಪ್ತಿಗೆ ಸೇರಿಸಿರುವುದು, ಶಿಡ್ಲಘಟ್ಟ, ಚಿಂತಾಮಣಿ, ಚೇಳೂರು ಭಾಗದ ವಿಂಗಡಣೆಯಲ್ಲಿ ಯಡವಟ್ಟುಗಳಾಗಿವೆ ಎಂದು ಕೆಲ ಮಾಜಿ ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿ ಸರಿಪಡಿಸುವಂತೆ ಒತ್ತಾಯಿಸಿದರು. ಆದರೆ ಎಲ್ಲವೂ ಕ್ರಮಬದ್ಧವಾಗಿಯೇ ನಡೆದಿದೆ ಎಂದು ಹೇಳಿ ಪುನರ್‌ವಿಂಗಡನೆಗೆ ಸಭೆಯ ಅನುಮೋದನೆ ಪಡೆಯಲಾಯಿತು.
ಚಿಮುಲ್ ವಿಜಭನೆ ವೇಳೆ ಆಸ್ತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಇದರ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಆಸ್ತಿ ಹಂಚಿಕೆ ವಿಷಯದಲ್ಲಾಗಿರುವ ಅನ್ಯಾಯ ಸರಿಮಾಡಬೇಕು, ರಾಜ್ಯ ಸರ್ಕಾರ ದಿಂದ ಚಿಮುಲ್ ಅಭಿವೃದ್ಧಿಗೆ ಅನುದಾನ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸ ಲಾಯಿತು.
ಸಭೆಯಲ್ಲಿ ಪ್ರತ್ಯೇಕ ಒಕ್ಕೂಟವಾದ ನಂತರ ಚಿಮುಲ್ ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ವಿವರಿಸಲಾಯಿತು. ಪ್ರತ್ಯೇಕ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿರುವ ಜೊತೆಗೆ ತೋಟಗಾರಿಕೆ ಇಲಾಖೆಗೆ ಸೇರಿದ ೯.೩ ಎಕರೆ ಜಮೀನು ಕೂಡಾ ಚಿಮುಲ್‌ಗೆ ವರ್ಗಾವಣೆಯಾಗಿದೆ. ಅಲ್ಲದೇ ಸರ್ಕಾರಕ್ಕೆ ಚಿಮುಲ್ ನೀಡಬೇಕಿದ್ದ ೫ ಕೋಟಿ ಹಣವನ್ನು ಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಲಾಯಿತು.
ವಾರ್ಷಿಕ ಲೆಕ್ಕಪತ್ರ ಮಂಡಿಸಿ ಸರ್ವಸದಸ್ಯರ ಸಭೆಯ ಅನುಮೋದನೆ ಪಡೆಯಲಾಯಿತು. ಈ ವೇಳೆ ಚಿಮುಲ್ ಅಸ್ತಿತ್ವಕ್ಕೆ ಬಂದ ಬಳಿಕ ಆಗಿರುವ ಜಮೆ, ಖರ್ಚಿನ ಲೆಕ್ಕಾಚಾರವನ್ನು ಚಿಮುಲ್ ವ್ಯವಸ್ಥಾಪಕರು ಮಂಡಿಸಿ ಸಭೆಯ ಅನುಮೋದನೆ ಪಡೆಯುವುದು ಹಾಲು ಉತ್ಪಾದಕ ಮಂಡಳಿಗಳ ವಾಡಿಕೆಯಾಗಿದೆ.
೯೫೦ ಕ್ಕೂ ಹೆಚ್ಚು ಸದಸ್ಯರು ೧೩ ನಿರ್ದೇಶಕ ಸ್ಥಾನಗಳಿಗೆ ಸರ್ವಾನುಮತದಿಂದ ಒಪ್ಪಿಗೆಯನ್ನು ನೀಡಿದ್ದು, ವಿಶೇಷವಾಗಿ ಚಿಮುಲ್‌ಗೆ ಸರ್ಕಾರಿ ಕಾಯ್ದೆಗಳ ಪ್ರಕಾರ ರಚಿಸಿರುವ ಹೊಸ ಬೈಲಾಗೂ ಸರ್ವ ಸದಸ್ಯರು ತಮ್ಮ ಒಪ್ಪಿಗೆ ಸೂಚಿಸಿರುವುದರಿಂದ ೩ ತಿಂಗಳೊಳಗೆ ಚಿಮುಲ್ ಆಡಳಿತ ಮಂಡಳಿ ಚುನಾವಣೆ ನಡೆಯುವುದು ಖಚಿತವಾಗಿದೆ.
ಚಿಮುಲ್ ಆಡಳಿತಾಧಿಕಾರಿ ಡಿ.ಎಚ್.ಅಶ್ವಿನ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಸಿ.ಶ್ರೀನಿವಾಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ನಿರ್ದೇಶಕರಾದ ಅಶ್ವತ್ಥನಾರಾಯಣಬಾಬು, ಭರಣಿ ವೆಂಕಟೇಶ್, ಕಾಂತರಾಜು, ಮಂಜುನಾಥರೆಡ್ಡಿ, ಆದಿನಾರಾಯಣರೆಡ್ಡಿ, ಶ್ರೀನಿವಾಸ್ ರಾಮಯ್ಯ, ಹನುಮಂತೇಗೌಡ, ಮುನಿಯಪ್ಪ ಇದ್ದರು.
ಪೊಲೀಸ್ ಭದ್ರತೆಯಲ್ಲಿ ಸಭೆ
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಮೊದಲ ಚಿಮುಲ್ ಸರ್ವಸದಸ್ಯರ ಸಭೆಗೆ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸ್ಥಳದಲ್ಲಿ ೧ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಜೊತೆಗೆ ಸುಮಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಾಮಾನ್ಯ ಸಭೆಗೆ ಆಹ್ವಾನಿತರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ. ಪ್ರವೇಶ ದ್ವಾರ ದಲ್ಲಿಯೆ ಗುರುತಿನ ಚೀಟಿ ಪರಿಶೀಲಿಸಿದ ಚಿಮುಲ್ ಭದ್ರತಾ ಸಿಬ್ಬಂದಿ ಸದಸ್ಯರನ್ನು ಮಾತ್ರ ಸರ್ವಸದಸ್ಯರ ಸಭೆಗೆ ಕಳುಹಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಚಿಮುಲ್ ರಚನೆಯಾದ ನಂತರ ನಡೆದ ಮೊದಲ ಸರ್ವಸದಸ್ಯರ ಸಭೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ಯಾವುದೇ ಗದ್ದಲ, ಗೊಂದಲಗಳಿಗೆ ಅವಕಾಶ ಇಲ್ಲದಂತೆ ಸಭೆಯು ಮುಕ್ತಾಯವಾಗಿದ್ದು ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು.