ನವದೆಹಲಿ: ಕಾವೇರಿ ನೀರು ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 9,000 ಕ್ಯುಸೆಕ್ ಕಾವೇರಿ ನದಿ ನೀರು ಹರಿಸುವಂತೆ 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ' (CWMA) ಮಂಗಳವಾರ (ಆ.25ರಂದು) ಆದೇಶಿಸಿದೆ. ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಎತ್ತಿಹಿಡಿಯಲಾಗಿದೆ.
ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಿಂದ ಎಸಿಎಸ್ (ಮುಖ್ಯ ಕಾರ್ಯದರ್ಶಿ) ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್ ಭಾಗಿಯಾಗಿದ್ದರು. ತಮಿಳುನಾಡಿನಿಂದ ನೀರಾವರಿ ಕಾರ್ಯದರ್ಶಿ ಪ್ರಶಾಂತ್, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಂ ಭಾಗಿಯಾಗಿದ್ದರು. ತೀರ್ಪಿನ ಬಳಿಕ ಮಾತನಾಡಿದ ಗೌರವ್ ಗುಪ್ತಾ, ಇಂದು ಒಂದೂವರೆ ಗಂಟೆಗಳ ಕಾಲ ಸಭೆ ಮಾಡಿದ್ದೇವೆ. ನೆನ್ನೆ ಕೊಟ್ಟಿರುವ ಶಿಫಾರಸನ್ನು ಪಾಲಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ . ತಮಿಳುನಾಡು 28 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು . ಆದರೆ, ಪ್ರಾಧಿಕಾರ ಅದನ್ನು ಒಪ್ಪಿಲ್ಲ. ಮುಂದೆ ಉತ್ತಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಆಶಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ನೀರು ಹರಿಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ತಮಿಳುನಾಡು ಸರ್ಕಾರದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳಲಾಯಿತು. ಕಳೆದ ವಿಚಾರಣೆಯ ವೇಳೆ ನೀಡಿದ್ದ ನಿರ್ದೇಶನದಂತೆ, ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಹರಿದು ಹೋದ ನೀರಿನ ಅಂಕಿ-ಅಂಶಗಳನ್ನು ನ್ಯಾಯಪೀಠದ ಮುಂದೆ ಮಂಡಿಸಿತು.
ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ನಾವು ಈಗಾಗಲೇ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಟ್ಟಿದ್ದೇವೆ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. "ನೀರು ಬಿಟ್ಟಿದ್ದಾರೆ ಅಂದ್ಮೇಲೆ ಇನ್ಯಾವ ಸಮಸ್ಯೆ?" ಎಂದು ಪ್ರಶ್ನಿಸಿದ ನ್ಯಾಯಪೀಠ, ಈ ಕುರಿತು ಹೆಚ್ಚಿನ ಪರಿಶೀಲನೆಗಾಗಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿ ಆದೇಶಿಸಿದೆ.