Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!
Bus Accident: ಗುಂಡ್ಲುಪೇಟೆ-ನಂಜನಗೂಡು ಮಾರ್ಗದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಅಪಘಾತ ನಡೆದ ಬಳಿಕ ಚಾಲಕ, ಲಾರಿ ನಿಲ್ಲಿಸದೇ ಪರಾರಿಯಾಗಿದ್ದು, ಈ ಸಂಬಂಧ ನಂಜನಗೂಡು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅಚಾನಕ್ಕಾಗಿ ಕಿಟಕಿಯಿಂದ ತಲೆ ಹೊರಹಾಕಿ ದಾರುಣವಾಗಿ ಪ್ರಾಣ ಕಳೆದುಕೊಂಡಿರುವುದು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ-ನಂಜನಗೂಡು ಮಾರ್ಗದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಬಸ್‌ನಿಂದ ಮಹಿಳೆ ತಲೆ ಹೊರ ಹಾಕಿದಾಗ, ಗೂಡ್ಸ್ ಲಾರಿ ಡಿಕ್ಕಿಯಾಗಿ ರುಂಡ ಬೇರ್ಪಟ್ಟಿದೆ.
ಹಾಲಹಳ್ಳಿ ನಿವಾಸಿ ಶಿವಲಿಂಗಮ್ಮ (58) ಮೃತರು ಎಂದು ತಿಳಿದುಬಂದಿದೆ. ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಏಕಾಏಕಿ ಬಸ್‌ನ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದಾಳೆ. ಈ ವೇಳೆ ಪಕ್ಕದಲ್ಲಿ ವೇಗವಾಗಿ ಬಂದಂತಹ ಲಾರಿ ಡಿಕ್ಕಿ ಹೊಡೆದ ಪರಿಣಾಮ, ದೇಹದಿಂದ ರುಂಡ ತುಂಡಾಗಿ ಮಹಿಳೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ತಾಲೂಕಿನ ಪೊಲೀಸರು ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ.
ಅಪಘಾತ ನಡೆದ ಬಳಿಕ ಚಾಲಕ, ಲಾರಿ ನಿಲ್ಲಿಸದೇ ಪರಾರಿಯಾಗಿದ್ದು, ಈ ಸಂಬಂಧ ನಂಜನಗೂಡು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Open Fire: ಅಜ್ಮೀರ್; ಹಿಂದೂ ಸೇನಾ ಅಧ್ಯಕ್ಷನ ಕಾರಿನ ಮೇಲೆ ಗುಂಡು ಹಾರಿಸಿದ ಕಿಡಿಗೇಡಿಗಳು!
ಲೋ ಬಿಪಿಯಿಂದ 7ನೇ ತರಗತಿ ವಿದ್ಯಾರ್ಥಿ ಸಾವು
ನಂಜನಗೂಡು: ಹೃದಯ ವೈಫಲ್ಯದಿಂದ (Heart Failure) ಸಣ್ಣ ಮಕ್ಕಳು ಸಾಯುತ್ತಿರುವ ಸುದ್ದಿಗಳ ನಡುವೆಯೇ, ಲೋ ಬಿಪಿಯಿಂದಾಗಿ (Low BP) ಬಾಲಕನೊಬ್ಬ ಮೃತಪಟ್ಟ (Student Death) ಘೋರ ಘಟನೆ ನಂಜನಗೂಡಿನಿಂದ (Nanjanagud) ವರದಿಯಾಗಿದೆ.
ಲೋ ಬಿಪಿಯಿಂದಾಗಿ ಕುಸಿದು ಬಿದ್ದು 13 ವರ್ಷದ ಬಾಲಕ ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ತರಗನಹಳ್ಳಿಯಲ್ಲಿ ನಡೆದಿದೆ. ತರಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಮಹಾಂತೇಶ (13) ಲೋ ಬಿಪಿಯಿಂದ ಮೃತಪಟ್ಟ ಬಾಲಕ.
ಅನಾರೋಗ್ಯದ ಕಾರಣ ಗುರುವಾರ ರಾತ್ರಿ ಮಹಾಂತೇಶನನ್ನು ಸಮೀಪದ ಹುಲ್ಲಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷೆ ನಡೆಸಿದಾಗ ಲೋ ಬಿಪಿ ಕಂಡು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಮಹಿಳೆ ಮೇಲೆ ಬೆಂಗಳೂರಿನಲ್ಲಿ ಅತ್ಯಾಚಾರ, ಕೊಲೆ
ಬೆಂಗಳೂರು: ಬಾಂಗ್ಲಾದೇಶ ಮೂಲದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ (Physical Abuse) ಮಾಡಿರುವುದು ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಕೆರೆ ಲೇಕ್ ಬಳಿ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ, ಕಲ್ಲು ಎತ್ತಿ ಹಾಕಿ ಹತ್ಯೆ (Murder Case) ಮಾಡಿರುವ ಸ್ಥಿತಿಯಲ್ಲಿ ಮೂಲದ 28 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ಮೂಲದ ಮಹಿಳೆ ಹಾಗೂ ಆಕೆಯ ಪತಿ ಕಳೆದ 6 ವರ್ಷಗಳಿಂದಲೂ ಮೂವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನಗರದ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಹಿಳೆ ಮನೆಗೆಲಸ ಮಾಡಿಕೊಂಡಿದ್ದಳು. ಗುರುವಾರ ಕೆಲಸ ಮುಗಿಸಿ ಅಪಾರ್ಟ್‌ಮೆಂಟ್‌ನಿಂದ ತೆರಳಿದ್ದ ಮಹಿಳೆ, ಮನೆಗೆ ಮರಳಿರಲಿಲ್ಲ. ಬೆಳಗ್ಗೆ ಕಲ್ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಠಾಣೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಸೋಕೋ ಟೀಂ ಸಿಬ್ಬಂದಿ ಭೇಟಿ ನೀಡಿ, ತಪಾಸಣೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಈ ಬಗ್ಗೆ ಬೆಂಗಳೂರು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿ, ಮಹಿಳೆಯ ಪತಿ ಪಾಸ್‌ಪೋರ್ಟ್ ಮೂಲಕವೇ ಭಾರತಕ್ಕೆ ಬಂದಿದ್ದಾರೆ. ಆದರೆ ಹತ್ಯೆಯಾದ ಮಹಿಳೆಯು ಪಾಸ್‌ಪೋರ್ಟ್ ಇಲ್ಲದೆ, ಅಕ್ರಮವಾಗಿ ಬಂದಿರುವುದು ತಿಳಿದು ಬಂದಿದೆ. ಪತಿ ನೀಡಿರುವ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Praveen Nettaru murder case: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್, ಪ್ರಮುಖ ಸಂಚುಕೋರ ಅತೀಕ್ ಅಹ್ಮದ್ ಅರೆಸ್ಟ್