Heart attack: ಗುಂಡ್ಲುಪೇಟೆಯಲ್ಲಿ ಪಾಠ ಕೇಳುವಾಗಲೇ ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಸಾವು!
Heart attack: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರಬರಗೇರಿಯ ಶಾಲೆಯಲ್ಲಿ ಬುಧವಾರ ಘಟನೆ ನಡೆದಿದೆ. 4ನೇ ತರಗತಿ ವಿದ್ಯಾರ್ಥಿಯೊಬ್ಬ ಪಾಠ ಕೇಳುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತಪಟ್ಟ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.


ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರಬರಗೇರಿಯ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಪಾಠ ಕೇಳುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮನೋಜ್ ಕುಮಾರ್(10) ಮೃತ ಬಾಲಕ. ಮನೋಜ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದ ಜಯದೇವ, ಅಪೋಲೋ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇದೀಗ ಶಾಲೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಮೂಲತಃ ದೊಡ್ಡಹುಂಡಿ ಗ್ರಾಮದ ದಿ. ನಾಗರಾಜು ಮತ್ತು ನಾಗರತ್ನ ದಂಪತಿ ಪುತ್ರನಾದ ಮನೋಜ್ ಕುಮಾರ್, ದೊಡ್ಡಹುಂಡಿ ಶಾಲೆಯಲ್ಲಿ 1, 2 ತರಗತಿ ವ್ಯಾಸಂಗ ಮಾಡಿ, 3ನೇ ತರಗತಿಗೆ ಕುರಬರಗೇರಿ ಶಾಲೆಗೆ ದಾಖಲಾಗಿದ್ದ ಮನೋಜ್ ಸದ್ಯ 4ನೇ ತರಗತಿ ಓದುತ್ತಿದ್ದ. ಈತನ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಧಾರವಾಡದಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ಸಾವು, ದಾವಣಗೆರೆಯಲ್ಲಿ ಯುವಕ ಮೃತ್ಯು
ದಾವಣಗೆರೆ: ರಾಜ್ಯದಲ್ಲಿ ಯುವಜನತೆಯ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಳವಾಗುತ್ತಿವೆ. ಧಾರವಾಡ (Dharawada) ಜಿಲ್ಲೆಯಲ್ಲಿ ಪದವಿ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ, ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ದಾವಣಗೆರೆಯಲ್ಲಿ (Davanagere) ಹೃದಯಸ್ತಂಭನದಿಂದ (Heart Failure) 22 ವರ್ಷದ ಯುವಕ ಮೃತಪಟ್ಟಿದ್ದಾನೆ.
ಕೆಎಎಸ್ ವಿದ್ಯಾರ್ಥಿನಿ ಸಾವು
ಧಾರವಾಡ ಪುರೋಹಿತನಗರದಲ್ಲಿರುವ ಪ್ರಭಾಕರ ಕುಸುಗೂರ ಅವರ ಮಗಳು ಜೀವಿತಾ ಕುಸುಗೂರ (26) ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಅವರು ಇತ್ತೀಚಿಗಷ್ಟೇ ಎಂಎಸ್ಸಿ ಅಗ್ರಿ ಪದವಿ ಮುಗಿಸಿ ಯುಪಿಎಸ್ಸಿ- ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ತಲೆ ಸುತ್ತು ಬಂದು ಬಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
22 ವರ್ಷದ ಯುವಕ ಸಾವು
ದಾವಣಗೆರೆಯ ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ (22) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸಂಭವಿಸುವ ಹಠಾತ್ ಸಾವುಗಳನ್ನು ಇನ್ನು ಮುಂದೆ ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸಲು ಹಾಗೂ ಆಸ್ಪತ್ರೆಯಿಂದ ಹೊರಗೆ ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಈ ಸುದ್ದಿಯನ್ನೂ ಓದಿ | Basavaraj Shivappa Giraganvi Column: ಹೃದಯಾಘಾತದ ತಡೆಗೆ ಇಲ್ಲೊಂದು ಮದ್ದು