ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ (MM Hills) ಪಾದಯಾತ್ರೆ ಕೈಗೊಂಡಿದ್ದ ಭಕ್ತನ ಬಲಿಪಡೆದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ. ಅರಣ್ಯ ಇಲಾಖೆಯ ನೇತೃತ್ವದಲ್ಲಿ ಡ್ರೋನ್ ಮೇಲ್ವಿಚಾರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ಮೂಲಕ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಲಾಯಿತು. ಕೊನೆಗೆ ಅರವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಪಶುವೈದ್ಯರಾದ ಆದರ್ಶ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು. ಸೆರೆ ಸಿಕ್ಕಿರುವುದು ಸುಮಾರು 2ರಿಂದ 3 ವರ್ಷದ ಗಂಡು ಚಿರತೆ ಎಂದು ತಿಳಿದುಬಂದಿದೆ.
ಈ ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಇದೇ ವೇಳೆ, ಚಿರತೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ ಅವರು 5 ಲಕ್ಷ ರೂಪಾಯಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ. ಬುಧವಾರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಮೇಲೆ ಚಿರತೆ ದಾಳಿ ನಡೆಸಿತ್ತು. ಬಳಿಕ ಹಗಲಿನಲ್ಲೇ ಎರಡು ಬಾರಿ ಕಾಣಿಸಿಕೊಂಡು ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು.
ಚಿರತೆ ದಾಳಿ ಬಳಿಕ ಭಕ್ತರು ಕಾಲುದಾರಿಯಲ್ಲಿ ಮೆಟ್ಟಿಲೇರಿ ಬರುವ ಮಾರ್ಗದಲ್ಲಿ ಡ್ರೋನ್ ಕ್ಯಾಮರಾ ಅಳವಡಿಸಿ ಸತತ ನಿಗಾ ಇಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದರು. ಕಾಲುದಾರಿ, ಮೆಟ್ಟಿಲು ಇರುವ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ, ಹೋಂಗಾರ್ಡ್ಸ್ ಮತ್ತು ಸ್ಥಳೀಯ ಸಿಬ್ಬಂದಿಯ ತಂಡ ರಚಿಸಿ ಭಕ್ತರಿಗೆ ನೆರವಾಗುವ ಅಗತ್ಯವಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಭರಿಸುವಂತೆ ಮಲೆ ಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಚಿರತೆ ದಾಳಿ ಆತಂಕ; ಮಲೆ ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆ ನಿಷೇಧ
ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾವೇರಿ ನದಿ ದಾಟಿ, ಹನೂರು ತಾಲೂಕಿನ ಬಸವನಕಣಕ್ಕೆ ಬಂದು ಅಲ್ಲಿಂದ ಕಾಡಿನಲ್ಲಿಯೇ ನಡೆದುಕೊಂಡು ಶಾಗ್ಯ, ಡಿಎಂ ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ, ತಾಳುಬೆಟ್ಟ ಮಾರ್ಗವಾಗಿ ಬೆಟ್ಟಕ್ಕೆ ಬರುತ್ತಾರೆ ಎನ್ನಲಾಗಿದೆ.