ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hill) ಪಾದಯಾತ್ರೆ ವೇಳೆ ಚಿರತೆ ದಾಳಿಯಿಂದ ಭಕ್ತರೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇನ್ಮುಂದೆ ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆಗೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ (30) ಎಂಬುವವರು ಬಲಿಯಾಗಿದ್ದರು. ಹೀಗಾಗಿ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಜಿಲ್ಲಾಡಳಿತ ಹೊಸ ನಿಯಮ ಜಾರಿಗೊಳಿಸಿದೆ. ಅದರಂತೆ ಮಲೆ ಮಹದೇಶ್ವರ ಬೆಟ್ಟಕ್ಕೆ ಇನ್ಮುಂದೆ ರಾತ್ರಿ ವೇಳೆ ಪಾದಯಾತ್ರೆ ಬಂದ್ ಮಾಡಲಾಗಿದೆ.
ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಾದಯಾತ್ರೆ ಮಾಡುವುದಕ್ಕೆ ನಿರ್ಬಂಧವಿರಲಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಪಾದಯಾತ್ರೆಯಲ್ಲಿ ಭಕ್ತರು ಗುಂಪು ಗುಂಪಾಗಿ ತೆರಳಬೇಕು
ಈ ಬಗ್ಗೆ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಪ್ರತಿಕ್ರಿಯಿಸಿ, ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೆ ಪಾದಯಾತ್ರೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿಷೇಧಿಸಿದ್ದು, ಭಕ್ತರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಪಾದಯಾತ್ರೆಯ ಮೂಲಕ ಮಹದೇಶ್ವರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಜನವರಿ 21ರ ಬೆಳಗಿನ ಜಾವ ಮಂಡ್ಯ ಮೂಲದ ಪಾದಯಾತ್ರಿಕರೊಬ್ಬರು ಚಿರತೆ ದಾಳಿಯಿಂದ ಮೃತಪಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳು ಸಂಜೆ 6 ರಿಂದ ಬೆಳಗಿನ ಜಾವ 6ರವರೆಗೆ ಪಾದಯಾತ್ರೆಯ ಮೂಲಕ ತೆರಳುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಪಾದಯಾತ್ರಿಕರು ಜಿಲ್ಲಾಡಳಿತ ಹಾಗೂ ಪ್ರಾಧಿಕಾರಕ್ಕೆ ಸಹಕಾರ ನೀಡಬೇಕು. ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತರು ಗುಂಪು ಗುಂಪಾಗಿ ಆಗಮಿಸಬೇಕು. ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆನೆಯು ಆಗಾಗ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷವೂ ಸಹ ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಭಕ್ತಾದಿಗಳು ಸಹ ಮುಂಜಾಗ್ರತಾ ಕ್ರಮವಹಿಸಿ ಪಾದಯಾತ್ರೆಯ ಮೂಲಕ ತೆರಳಿ ದೇವರ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಭಕ್ತನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ
ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೊರಟಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಜನ
ಪಾದಯಾತ್ರೆ ತೆರಳುತ್ತಿದ್ದ ಭಕ್ತನನ್ನು ಎಳೆದೊಯ್ದಿತ್ತು ಚಿರತೆ
ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ (30) ಎಂಬ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ ಬುಧವಾರ ನಡೆದಿತ್ತು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ, ಬುಧವಾರ ಬೆಳಗ್ಗೆ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದರು. ಈ ಸಂದರ್ಭದಲ್ಲಿ ಪಾದಯಾತ್ರಿಕರ ಮಾರ್ಗದಲ್ಲಿ ಕುಳಿತಿದ್ದ ಚಿರತೆಯು ಏಕಾಏಕಿ ಪ್ರವೀಣ್ ಮೇಲೆ ದಾಳಿ ಮಾಡಿ ಎಳೆದೊಯ್ದಿತ್ತು. ಜತೆಯಲ್ಲಿದ್ದ ಐವರು ಸ್ನೇಹಿತರು ಕಿರುಚಾಡಿಕೊಂಡು ಚಿರತೆ ಓಡಿಸಲು ಎಷ್ಟೇ ಪ್ರಯತ್ನಪಟ್ಟರೂ ಪ್ರವೀಣ್ನನ್ನು ಚಿರತೆ ಅರಣ್ಯದೊಳಗೆ ಎಳೆದೊಯ್ದಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಪತ್ತೆ ಹಚ್ಚಿದ್ದರು.