ಚಾಮರಾಜನಗರ: ಹನೂರಿನಲ್ಲಿ ಇತ್ತೀಚೆಗೆ (Hanur encounter case) ನಡೆದಿದ್ದ ಎನ್‌ಕೌಂಟರ್ ಬೆನ್ನಲ್ಲೇ ಕಿಡಿಗೇಡಿಗಳು ಅರಣ್ಯ ಇಲಾಖೆಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಮಲೆ ಮಹದೇಶ್ವರ ವನ್ಯಜೀವಿಧಾಮದ (Male Mahadeshwara Hills) ಸುಮಾರು 10 ಎಕರೆ (2.5 ಹೆಕ್ಟೇರ್) ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಜಾಗೇರಿ ಬಳಿಯ ಒಂದು ಕಳ್ಳಬೇಟೆ ತಡೆ ಶಿಬಿರ ಕೂಡ ಧ್ವಂಸವಾಗಿದೆ. ಇಷ್ಟೇ ಅಲ್ಲದೇ ಉದ್ರಿಕ್ತ ಜನರು 9 ಕಳ್ಳಬೇಟೆ ತಡೆ ಶಿಬಿರಗಳನ್ನು ಜಿಲೆಟಿನ್ ಕಡ್ಡಿ, ಡೈನಮೈಟ್ ಬಳಸಿ ಧ್ವಂಸಗೊಳಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕಿಡಿಗೇಡಿಗಳು ಹಚ್ಚಿದ ಬೆಂಕಿಯ ಕೆನ್ನಾಲಿಗೆಗೆ ಬರೋಬ್ಬರಿ 10 ಎಕರೆ ಅರಣ್ಯ ಪ್ರದೇಶ ಸಂಪೂರ್ಣವಾಗಿ ಭಸ್ಮವಾಗಿದೆ. ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಇನ್ನೊಂದೆಡೆ ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ಹಲ್ಲೆ ನಡೆಸಲು ಗ್ರಾಮಸ್ಥರು ಮುಂದಾಗಿದ್ದರು ಎಂದು ಹೇಳಲಾಗಿದೆ.
ಅರಣ್ಯದ ಒಳಗಿರುವ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸಲು ದುಷ್ಕರ್ಮಿಗಳು ಮಾರಕ ಜಿಲೆಟಿನ್ ಮತ್ತು ಡೈನಾಮೈಟ್ ಕಡ್ಡಿಗಳನ್ನು ಬಳಸಿರುವುದು ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ. ದಟ್ಟ ಅರಣ್ಯದಲ್ಲಿ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರ ಜೊತೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ತಂಡವು ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಘಟನೆಯ ಕುರಿತು ಕಾವೇರಿ ವನ್ಯಧಾಮದ ಎಸಿಎಫ್ (ACF) ಮರಿಸ್ವಾಮಿ ಅವರು ಮಾಹಿತಿ ನೀಡಿ, "ವನ್ಯಧಾಮದಲ್ಲಿ ಒಟ್ಟು 28 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಈ ಪೈಕಿ 8 ಶಿಬಿರಗಳನ್ನು ಜಿಲೆಟಿನ್ ಮತ್ತು ಡೈನಾಮೈಟ್ ಬಳಸಿ ತೀವ್ರವಾಗಿ ಹಾನಿಗೊಳಿಸಲಾಗಿದೆ. 3 ಸಿಬ್ಬಂದಿ ವಸತಿ ಗೃಹ, ಸೋಲಾರ್ ಫೆನ್ಸಿಂಗ್, ಬ್ಯಾಟರಿಗಳು ಹಾಗೂ ಒಂದು ಇಲಾಖಾ ಜೀಪ್ ಅನ್ನು ನಾಶಮಾಡಲಾಗಿದೆ" ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ರಾಮಾಪುರ ಮತ್ತು ಹನೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅರಣ್ಯದ ಒಳಗಿರುವ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.