ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಮತ್ತು ಹಿಂದೂ ಧರ್ಮದ ಕೆಲ ವಿರೋಧಿಗಳು ಕೂಡಿಕೊಂಡು ಸತ್ಯ ಕ್ಷೇತ್ರ ಧರ್ಮಸ್ಥಳ(Dharmasthala) ದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ರಾಜ್ಯ ಜೆಡಿಎಸ್ ಖಂಡಿಸುತ್ತಾ ಆಗಸ್ಟ್ 31ರಂದು ಸತ್ಯಯಾತ್ರೆ ಕೈಗೊಳ್ಳಲಾಗಿದ್ದು ೩೦೦ ಕಾರುಗಳಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ ಎಂದು ಜೆಡಿಎಸ್ (JDS) ಜಿಲ್ಲಾಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ತಿಳಿಸಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಧರ್ಮಸ್ಥಳ ಸತ್ಯಯಾತ್ರೆಯ ಸುದ್ದಿ ಗೋಷ್ಠಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು.
ಆಗಸ್ಟ್ ೩೧ರ ಭಾನುವಾರ ಚಿಕ್ಕಬಳ್ಳಾಪುರದಿಂದ ೩೦೦ ಕಾರುಗಳಲ್ಲಿ ಹಾಸನಕ್ಕೆ ತೆರಳಿ ಅಲ್ಲಿಂದ ನಮ್ಮ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಜೊತೆಗೂಡಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಇದರಲ್ಲಿ ಜಿಲ್ಲೆಯಿಂದ ಜೆಡಿಎಸ್ ಕಾರ್ಯಕರ್ತರು ಮುಖಂಡರು, ಧರ್ಮಸ್ಥಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಂಜುನಾಥ ಸ್ವಾಮಿಯ ಸತ್ಯದರ್ಶನ ಮಾಡಬೇಕು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತ ಮುನಿಯಪ್ಪ ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: ಕಾವಲು ಸಮಿತಿಗಳು ಬಲವರ್ಧನೆಯಾದಲ್ಲಿ ಪೋಕ್ಸೋ ಪ್ರಕರಣಗಳ ತಡೆಗಟ್ಟಬಹುದು
ಯೂಟ್ಯೂಬರ್ ಸಮೀರ್ ಕಾರಣಕ್ಕಾಗಿ ಧರ್ಮಸ್ಥಳದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣ ವಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯನ ಹೇಳಿಕೆಯನ್ನೇ ಆಧರಿಸಿ ಸರ್ಕಾರ ೧೩ ಕಡೆ ಗುಂಡಿಗಳನ್ನು ಆಗೆದಿದೆ.ಆದರೆ ಎಲ್ಲೂ ಕೂಡ ಒಂದೇ ಒಂದು ಹೆಣದ ಮೂಳೆಯೂ ಸಿಕ್ಕಿಲ್ಲ.ಧರ್ಮಸ್ಥಳ ಸತ್ಯ ಕ್ಷೇತ್ರವಾಗಿದ್ದು, ಇಂದಿಗೂ ಕೂಡ ಜನಸಾಮಾನ್ಯರು ತಮಗೆ ಏನಾದರೂ ತೊಂದರೆ ಆಗಿದ್ದರೆ, ಯಾರಾದರೂ ಮೋಸ ಮಾಡಿದ್ದರೆ ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಿಸುವುದು ಸಾಮಾನ್ಯವಾಗಿದೆ. ಇಂತಹ ಪುಣ್ಯಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಎಸ್‌ಐಟಿ ರಚನೆ ಸಂದರ್ಭದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಮುಂದುವರೆದ ಭಾಗವಾಗಿ ನಿಖಿಲ್‌ಕುಮಾರಸ್ವಾಮಿ ನೇತೃತ್ವದಲ್ಲಿ ಈ ಸತ್ಯಯಾತ್ರೆ ಕೈಗೊಳ್ಳಲಾಗಿದೆ.ನಿಖಿಲ್ ಕುಮಾರಸ್ವಾಮಿ ಏನೇ ಮಾಡಿದರೂ ಯೋಜನಾಬದ್ಧವಾಗಿ ಮಾಡುತ್ತಾರೆ. ಇದಕ್ಕೆ ಜನರೊಂದಿಗೆ ಜನತಾದಳ ಕಾರ್ಯಕ್ರಮವೇ ಸಾಕ್ಷಿ ಎಂದರು.
ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರ ಆದೇಶದಂತೆ ಭಾನುವಾರ ಜಿಲ್ಲೆಯಿಂದ ೩೦೦ ಕಾರುಗಳಲ್ಲಿ ಸಾವಿರಾರು ಮಂದಿ ಹೋಗುತ್ತಿದ್ದೇವೆ.ಕಾಂಗ್ರೆಸ್ ಸರಕಾರ ಯಾರದೋ ಕುಮ್ಮಕ್ಕಿನಿಂದ ಎಸ್‌ಐಟಿ ತಂಡ ತನಿಖೆಗೆ ಮುಂದಾಗಿದೆ.ಇದು ಫಲ ನೀಡುವುದಿಲ್ಲ.ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಿಂದ ನೇರವಾಗಿ ಧರ್ಮಸ್ಥಳಕ್ಕೆ ನಮ್ಮ ಪ್ರಯಾಣ ಸಾಗಲಿದೆ.ಧರ್ಮಸ್ಥಳದಲ್ಲಿರುವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥನ ದರ್ಶನ ಪಡೆದು ವೀರೇಂದ್ರ ಹೆಗಡೆಯವರ ಆಶೀರ್ವಾದ ಬೇಡುತ್ತಾ ಜೆಡಿಎಸ್ ಪಕ್ಷವು ನಿಮ್ಮ ಪರವಾಗಿ ಇರಲಿದೆ ಎಂಬ ಸಂದೇಶವನ್ನು ಕೊಡುತ್ತಿದ್ದೇವೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು ಮಾತನಾಡಿ ಚಿನ್ನಯ್ಯ ಎಂಬ ಒಬ್ಬ ಅಬ್ಬೇಪಾರಿಯ ಮಾತನ್ನು ಅವನು ತಂದ ಬುರುಡೆಯನ್ನೇ ಪ್ರಮಾಣವಾಗಿ ನಂಬಿ ಎಸ್‌ಐಟಿ ಮೂಲಕ ತನಿಖೆಗೆ ಮುಂದಾಗಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.ಈತನನ್ನು ಮೊದಲ ದಿನವೇ ತನಿಖೆಗೆ ಒಳಪಡಿಸಿ ದ್ದರೆ ಧರ್ಮಸ್ಥಳದ ಬಗ್ಗೆ ಈ ಮಟ್ಟಿಗಿನ ಅಪಪ್ರಚಾರ ನಡೆಯುತ್ತಿರಲಿಲ್ಲ. ಸರಕಾರ ಈ ವಿಚಾರದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಎಂಬುದು ಜಗಜ್ಜಾಹೀರು.ಸುಜಾತ ಭಟ್ ಎಂಬ ಮಹಿಳೆಯ ಸುಳ್ಳಿನ ಮಾತನ್ನೇ ನಂಬಿ ತನಿಖೆಗೆ ಮುಂದಾದರು.ಕಾAಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ಕಿಡಿ ಕಾರಿರುವ ಕೇಂದ್ರ ಮಂತ್ರಿ ಕುಮಾರಸ್ವಾಮಿ ಆದೇಶದಂತೆ ಈ ಸತ್ಯಯಾತ್ರೆ ನಡೆಯುತ್ತಿದೆ.ಈ ಮೂಲಕ ಸರಕಾರದ ಷಡ್ಯಂತ್ರದ ವಿರುದ್ಧ ಜನತೆಗೆ ಜಾಗೃತಿ ಮೂಡಿಸಲು ಜೆಡಿಎಸ್ ಮುಂದಾಗಿದೆ ಎಂದರು.
ಗೌರಿಬಿದನೂರು ಮುಖಂಡ ನರಸಿಂಹಮೂರ್ತಿ ಮಾತನಾಡಿ ಧರ್ಮಸ್ಥಳದ ಮೇಲೆ ಬಂದಿರುವ ಕಳಂಕ ತೊಡೆಯಲು ಸರಕಾರಕ್ಕೆ ೬೦ ದಿನಗಳ ಕಾಲ ಬೇಕಿರಲಿಲ್ಲ.ಚಿನ್ನಯ್ಯಗೆ ಮುಖವಾಡ ಹಾಕುವ ಅಗತ್ಯವಿರಲಿಲ್ಲ.ಇದರ ಬೇರುಗಳು ಆಡಳಿತ ಯಂತ್ರದ ಬಳಿಯೇ ಇವೆ.ಧರ್ಮವನ್ನು ನಾಶ ಮಾಡಲು ಮುಂದಾಗಿರುವ ಗ್ಯಾಂಗ್‌ನ ಕಾರಣವಾಗಿ ಹೀಗೆಲ್ಲಾ ಆಗಿದೆ.ಇಂತಹ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ನಡೆದಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಪ್ರಧಾನಕಾರ್ಯದರ್ಶಿ ನಾರಾಯಣಗೌಡ ಶಾಂತಮೂರ್ತಿ, ಬಾಗೇ ಪಲ್ಲಿಯ ಸೂರ್ಯನಾರಾಯಣರೆಡ್ಡಿ,ಗುಡಿಬಂಡೆ ಮಂಜುನಾಥರೆಡ್ಡಿ, ಹಿಂದುಳಿದ ವರ್ಗದ ಅಧ್ಯಕ್ಷ ಆರ್‌ಶ್ರೀನಿವಾಸ್‌ಗಾಂಧಿ, ಬಂಡ್ಲು ಶ್ರೀನಿವಾಶ್,ಸ್ಟುಡಿಯೋ ಮಂಜುನಾಥ್, ಮಹಿಳಾ ಮುಖಂಡ ರಾದ ಅರುಣಾ ಶ್ರೀನಿವಾಸ್ ಇದ್ದರು.