ಚಿಕ್ಕಬಳ್ಳಾಪುರ: ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಬೆದರಿಕೆ ಹಾಕಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ದೂರು ದಾಖಲಾಗಿದೆ. ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವ ರಾಜೀವ್ ಗೌಡ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೌರಾಯುಕ್ತೆ ಅಮೃತಾಗೌಡ ಅವರು ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಶಿಡ್ಲಘಟ್ಟದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಅವರು ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ಅವರ ಭಾವಚಿತ್ರವುಳ್ಳ ಫ್ಲೆಕ್ಸ್ ನಗರದಾದ್ಯಂತ ಅಳವಡಿಸಿದ್ದರು. ನಗರದ ಕೋಟೆ ವೃತ್ತದಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದರಿಂದ, ನಮ್ಮ ಆರೋಗ್ಯ ನಿರೀಕ್ಷಕರಾದ ಕೃಷ್ಣಮೂರ್ತಿ ಅವರ ಮುಖಾಂತರ ತೆರವು ಮಾಡಿಸಿ ಕಚೇರಿಯಲ್ಲಿ ಇರಿಸಲಾಗಿತ್ತು. ಈ ವಿಷಯನ್ನು ತಿಳಿದುಕೊಂಡ ರಾಜೀವ್ ಗೌಡರು, ನನಗೆ ಮೊಬೈಲ್ ಕರೆ ಮಾಡಿ ಏಕ ವಚನದಲ್ಲಿ ಸಂಬೋಧಿಸಿ, ಕೂಡಲೇ ತೆಗೆದುಹಾಕಿರುವ ಬ್ಯಾನರ್ ಮರು ಸ್ಥಾಪಿಸಬೇಕು. ಇಲ್ಲವಾದಲ್ಲಿ ನಿನ್ನ ಕಚೇರಿಗೆ ಬಂದು ಬೆಂಕಿ ಇಟ್ಟು ಸುಟ್ಟು ಹಾಕುತ್ತೇನೆ. ಸಾರ್ವಜನಿಕರನ್ನು ನಿನ್ನ ವಿರುದ್ಧ ಎತ್ತಿ ಕಟ್ಟಿ ಚಪ್ಪಲಿಯಲ್ಲಿ ಹೊಡೆಸುವುದಾಗಿ ಹಾಗೂ ನಿನ್ನನ್ನು ಈ ತಾಲೂಕಿನಿಂದ ಒದ್ದು ಓಡಿಸುವುದಾಗಿ ಅಸಭ್ಯ ಪದಗಳನ್ನು ಬಳಸಿ ನನ್ನನ್ನು ತೇಜೋವಧೆ ಮಾಡಿರುತ್ತಾರೆ ಮತ್ತು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ದೂರಿನಲ್ಲಿ ಲೋಕಾಯುಕ್ತೆ ಅಮೃತಾಗೌಡ ತಿಳಿಸಿದ್ದಾರೆ.
ಕೈ ಮುಖಂಡನಿಂದ ಕ್ಷಮೆಯಾಚನೆ
ದೂರು ದಾಖಲಾದ ಬೆನ್ನಲ್ಲೇ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಕ್ಷಮೆ ಕೇಳಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಅಥವಾ ನನ್ನ ಮಾತುಗಳಿಂದ ಪೌರಾಯುಕ್ತೆ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ರಾಜೀವ್ ಗೌಡ ತಿಳಿಸಿದ್ದಾರೆ.
ಏನಿದು ಘಟನೆ?
ರಸ್ತೆ ಬದಿ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಆಯುಕ್ತೆ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿದ್ದರು. ರಾಜೀವ್‌ಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರಸಭೆ ಸಿಬ್ಬಂದಿ ಸೇರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
Ballari Clash Case: ಬಳ್ಳಾರಿ ಗಲಭೆ ಪ್ರಕರಣದ 25 ಆರೋಪಿಗಳಿಗೆ ಜಾಮೀನು ನೀಡಿದ ಕೋರ್ಟ್
ನಗರಸಭೆ ಆಯುಕ್ತೆಗೆ ಕೈ ಮುಖಂಡ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಮೇಡಂ ಬ್ಯಾನರ್ ತೆಗೆಯಲು ಹೇಳಿದ್ರಾ? ಎಂದು ಕೈ ಮುಖಂಡ ರಾಜೀವ್ ಗೌಡ ಕೇಳುತ್ತಾರೆ. ಈ ವೇಳೆ ಪೌರಾಯುಕ್ತೆ, ಸಾರ್ವಜನಿಕರಿಂದ ದೂರು ಬಂದಿತ್ತು. ರಸ್ತೆ ಮಧ್ಯೆ ಕಟ್ಟಿದ್ದರಿಂದ ಬ್ಯಾನರ್ ತೆಗೆಸಲಾಗಿದೆ ಎನ್ನುತ್ತಾರೆ. ಇದಕ್ಕೆ ಕೋಪಗೊಂಡ ರಾಜೀವ್ ಗೌಡ, ಬ್ಯಾನರ್ ಏನಾದರೂ ಬಿಚ್ಚಿಸಿದರೆ ಬಂದು, ಬೆಂಕಿ ಹಚ್ಚಿಸಿಬಿಡುತ್ತೇನೆ. ನನ್ನ ಒಳ್ಳೆಯತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ. ಬ್ಯಾನರ್ ಕಟ್ಟಿಸಿದರೆ ಸರಿ, ಇಲ್ಲವೆಂದರೆ ತಾಲೂಕು ಬಿಟ್ಟು ಓಡಬೇಕು, ಆ ರೀತಿ ಕೆಲಸ ಕೊಡ್ತೀನಿ. ಜನರನ್ನು ಕರೆತಂದು ಚಪ್ಪಲಿಯಿಂದ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿರುವುದು ಆಡಿಯೋದಲ್ಲಿದೆ.