ಚಿಕ್ಕಬಳ್ಳಾಪುರ: ಸಂಕಷ್ಟದ ಸಂದರ್ಭದಲ್ಲಿ ತೋರುವ ಸಮಯಪ್ರಜ್ಞೆ ಮತ್ತು ಮಾನವೀಯ ಕಾಳಜಿ ಅಮೂಲ್ಯ ಜೀವಗಳನ್ನು ಉಳಿಸಬಲ್ಲದು ಎಂಬುದಕ್ಕೆ ಚಲಿಸುತ್ತಿದ್ದ ರೈಲಿನಲ್ಲೇ ನಡೆದ ಈ ಘಟನೆ ಸಾಕ್ಷಿಯಾಗಿದೆ. ವಾರಾಣಸಿಗೆ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶ ಮೂಲದ ತುಂಬು ಗರ್ಭಿಣಿಯೊಬ್ಬರಿಗೆ ಮಾರ್ಗಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಾಗ, ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಬಳ್ಳಾಪುರದ (Chikkaballapur) ಅಂಗನವಾಡಿ ಕಾರ್ಯಕರ್ತೆಯರು (Anganwadi workers) ತಕ್ಷಣ ನೆರವಿಗೆ ಧಾವಿಸಿ ಹೆರಿಗೆ (delivery) ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು, ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆಗೆ ಹಲವು ಸೌಲಭ್ಯಗಳು ಲಭ್ಯವಿವೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯವಸ್ಥೆಗಳ ನಡುವೆಯೂ ದೂರದ ಪ್ರಯಾಣದ ವೇಳೆ ಎದುರಾಗುವ ತುರ್ತು ಆರೋಗ್ಯ ಸಮಸ್ಯೆಗಳು ಕೆಲವೊಮ್ಮೆ ಅನಿರೀಕ್ಷಿತ ಸಂಕಷ್ಟಕ್ಕೆ ಕಾರಣವಾಗುತ್ತವೆ.

ಉತ್ತರ ಪ್ರದೇಶದ ವಾರಾಣಸಿ ಮೂಲದ ಗರ್ಭಿಣಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವು ತಾಳಲಾರದೆ ರೈಲಿನ ಶೌಚಾಲಯದಲ್ಲಿ ಒದ್ದಾಡುತ್ತಿದ್ದ ಮಹಿಳೆಯ ಸಂಕಷ್ಟವನ್ನು ಗಮನಿಸಿದ ಸಹ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಅದೇ ರೈಲಿನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಚಿಕ್ಕಬಳ್ಳಾಪುರ ಅಂಗನವಾಡಿ ನೌಕರರ ಸಿಐಟಿಯು ಜಿಲ್ಲಾಧ್ಯಕ್ಷೆ ಗಂಜಿಗುಂಟೆ ಲಕ್ಷ್ಮೀದೇವಮ್ಮ ಹಾಗೂ ಅವರ ಸಹಚರರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣ ನೆರವಿಗೆ ಧಾವಿಸಿದ್ದಾರೆ.
ಶೌಚಾಲಯದೊಳಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಹೊರತಂದು, ತುರ್ತು ಪರಿಸ್ಥಿತಿಯಲ್ಲಿ ರೈಲಿನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಬಳಿಕ ತಮ್ಮ ಬಳಿಯಿದ್ದ ಬಟ್ಟೆಗಳನ್ನು ನೀಡಿ ತಾಯಿ ಮತ್ತು ಮಗುವನ್ನು ಬೆಚ್ಚಗಿಟ್ಟುಕೊಂಡು ಆರೈಕೆ ಮಾಡಿದ್ದಾರೆ. ರೈಲು ತಕ್ಷಣ ನಿಲ್ಲಿಸಲು ಸಾಧ್ಯವಾಗದ ಸಂದರ್ಭದಲ್ಲಿಯೂ ಧೈರ್ಯ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸಿರುವುದು ಅವರ ಮಾನವೀಯ ಕಾಳಜಿ ಮತ್ತು ಸಮಯಪ್ರಜ್ಞೆಗೆ ಸಾಕ್ಷಿಯಾಗಿದೆ.
ಘಟನೆಯ ಕುರಿತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು, ರೈಲ್ವೆ ಪೊಲೀಸರ ನೆರವನ್ನೂ ಕೋರಿದ್ದಾರೆ. ಬಳಿಕ ಅಗತ್ಯ ವ್ಯವಸ್ಥೆ ಕಲ್ಪಿಸಿ ತಾಯಿ ಮತ್ತು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಿದ್ದಾರೆ. ತಾಯಿ-ಮಗು ಸುರಕ್ಷಿತವಾಗಿ ವೈದ್ಯಕೀಯ ಆರೈಕೆ ಪಡೆಯುವ ವ್ಯವಸ್ಥೆಯಾದ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.
ಸಹ ಪ್ರಯಾಣಿಕರಿಂದ ಮೆಚ್ಚುಗೆ
ಯಾವುದೇ ನಿರೀಕ್ಷೆಯಿಲ್ಲದೆ ಅಪರಿಚಿತ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿ, ತುರ್ತು ಸಂದರ್ಭದಲ್ಲಿ ಧೈರ್ಯದಿಂದ ನೆರವಾದ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಕ್ಕೆ ಬೋಗಿಯಲ್ಲಿದ್ದ ಸಹ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ರೈಲ್ವೆ ಅಧಿಕಾರಿಗಳೂ ಅವರ ಸಮಯೋಚಿತ ನೆರವಿಗೆ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರು, ಮಾರ್ಗಮಧ್ಯೆ ಅಪರಿಚಿತ ಗರ್ಭಿಣಿಯೊಬ್ಬರ ಜೀವದ ಸಂಕಷ್ಟಕ್ಕೆ ಸ್ಪಂದಿಸಿ ತೋರಿದ ಮಾನವೀಯತೆ ಎಲ್ಲರ ಗಮನ ಸೆಳೆದಿದೆ. ಸೇವೆ ಎನ್ನುವುದು ಕೇವಲ ಕರ್ತವ್ಯಕ್ಕೆ ಸೀಮಿತವಲ್ಲ, ಅಗತ್ಯವಿದ್ದಾಗ ಮತ್ತೊಬ್ಬರ ನೋವಿಗೆ ಮಿಡಿಯುವುದೂ ನಿಜವಾದ ಮಾನವೀಯತೆ ಎಂಬುದನ್ನು ಈ ಘಟನೆ ಸಾರಿದೆ.