ಚಿಕ್ಕಬಳ್ಳಾಪುರ: ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ (KM Suresh) ಅವರನ್ನು ಭಾರಿ ಅಂತರದಿಂದ ಗೆಲ್ಲಿಸುವ ಮೂಲಕ ಮೇಲ್ಮನೆಯ ಪಾವಿತ್ರ‍್ಯ ಕಾಪಾಡುವ ಜವಾಬ್ದಾರಿಯನ್ನು ಬಿಜೆಪಿ ಕಾರ್ಯಕರ್ತರು ಮುಖಂಡರು ನಿಭಾಯಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಕರೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
1971ರಿಂದ ಈವರೆಗೆ ನಡೆದ ಪ್ರತಿ ಚುನಾವಣೆಯಲ್ಲಿ 8 ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿಸದ್ದು, 2 ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಇಷ್ಟೂ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಒಮ್ಮೆಯೂ ಗೆಲುವು ಕಂಡಿಲ್ಲ. ಆದರೆ ಈ ಬಾರಿ ಹಣಬಲ ಹಾಗೂ ಅಧಿಕಾರದ ದುರುಪಯೋಗದ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಮುಖಂಡರು ಎಂದೂ ಕೂಡ ಅವಕಾಶ ಮಾಡಿಕೊಡುವುದಿಲ್ಲ. ಮೇಲ್ಮನೆಯ ಪಾವಿತ್ರ‍್ಯವನ್ನು ಹಾಳು ಮಾಡಲು ಅವಕಾಶ ನೀಡದೆ, ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ದಾವಣಗೆರೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುವ ಜತೆಗೆ ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯನ್ನು ಬಲಪಡಿಸಿರುವ ಕೆ.ಎಂ.ಸುರೇಶ್ ಅವರನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‌ರಂತೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿರುವುದು ಸಂತಸ ತಂದಿದೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ಸುರೇಶ್ ಅವರಿಗೆ ಪಕ್ಷ ಅವಕಾಶ ನೀಡಿರುವುದು ಬಿಜೆಪಿ ಎಂದೆಂದಿಗೂ ಕಾರ್ಯಕರ್ತರಿಗೆ ಅವಕಾಶ ನೀಡುವ ಪಕ್ಷ ಎಂಬುದಕ್ಕೆ ಸಾಕ್ಷಿಯಂತಿದೆ ಎಂದರು.
ಸಾವಿರಾರು ಕಾರ್ಯಕರ್ತರ ಉತ್ಸಾಹ ಕಂಡು ಸಂತಸ
ರಾಜ್ಯ ಭೀಕರ ಬರ ಎದುರಿಸುತ್ತಿದ್ದು, ಬಿಜೆಪಿ ವತಿಯಿಂದ ಏಳು ತಂಡಗಳನ್ನು ರಚಿಸಿ ರಾಜ್ಯದ ಉದ್ದಗಲಕ್ಕೂ ಬರ ಅಧ್ಯಯನ ನಡೆಸಲಾಗುತ್ತಿದೆ. ಕೋಲಾರದಲ್ಲಿ ಬರಪರಿಸ್ಥಿತಿ ಪರಿಶೀಲಿಸಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದೇನೆ. ಜಿಲ್ಲೆಯ ಜಂಗಮಕೋಟೆ ಹೋಬಳಿಯಲ್ಲಿ ರೈತರ ಇಚ್ಛೆಗೆ ವಿರುದ್ಧವಾಗಿ ಕೆಐಎಡಿಬಿಗೆ ಭೂಮಿ ನೀಡಲು ಹೊರಟಿರುವ ಸರಕಾರ ನಡೆ ಖಂಡನೀಯ. ಇದಕ್ಕೆ ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದರು.
ಕಾರ್ಯಕ್ರಮಕ್ಕೆ ಮೂರು ಗಂಟೆ ತಡವಾಗಿ ಆಗಮಿಸಿದ್ದಕ್ಕೆ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ವಿಜಯೇಂದ್ರ, ಇಷ್ಟೊಂದು ತಡವಾಗುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕಾಯುತ್ತಿರುವುದನ್ನು ನೋಡಿದಾಗ ಪಕ್ಷದ ಮೇಲಿನ ಅವರ ಪ್ರೀತಿ ಹಾಗೂ ಬದ್ಧತೆ ಸ್ಪಷ್ಟವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಕಣ್ಣೀರು ಒರೆಸುವಲ್ಲಿ ಸರ್ಕಾರ ವಿಫಲ: ವಿಜಯೇಂದ್ರ
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ರೈತರ ಕಣ್ಣೀರು ಒರೆಸುವ ಪ್ರಯತ್ನ ಮಾಡದೆ ಅಸಡ್ಡೆ ತೋರುತ್ತಿದ್ದಾರೆ. ರೈತರಿಗಿಂತ ಹೈಕಮಾಂಡ್ ಮೆಚ್ಚಿಸಿ ಸರಕಾರ ಉಳಿಸಿಕೊಳ್ಳುವುದು ಹೇಗೆ?, ರಿಯಲ್ ಎಸ್ಟೇಟ್‌ಗೆ ನೆರವು ನೀಡಲು ರೈತರ ಮೇಲೆ ದಬ್ಬಾಳಿಕೆ ಮಾಡುವುದು ಹೇಗೆ ಇತ್ಯಾದಿಗಳ ಮೇಲೆಯೇ ಸರ್ಕಾರಕ್ಕೆ ಹೆಚ್ಚು ಆಸಕ್ತಿ ಇದೆ ಎಂದು ಟೀಕಿಸಿದರು.
ಭೀಕರ ಬರಕ್ಕೆ ತುತ್ತಾದ ರಾಜ್ಯ ಜನತೆ ಕಾಪಾಡುವುದು ಹೇಗೆ ಎಂದು ಚಿಂತಿಸದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಪರಿಹಾರಕ್ಕಾಗಿ ಕಾಯುತ್ತಿದೆ. ಆದರೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇವಲ ಪತ್ರ ಬರೆದು ಕೈಕಟ್ಟಿ ಕುಳಿತುಕೊಳ್ಳದೆ, ಕೇಂದ್ರದ ಮಾರ್ಗಸೂಚಿಗಳನ್ವಯ ರೈತರ ಪರವಾಗಿ ಕಾರ್ಯನಿರ್ವಹಿಸಿದ್ದರು. ಇದು ಬಿಜೆಪಿ ಪಕ್ಷದ, ಮುಖ್ಯಮಂತ್ರಿಗಳ ಬದ್ಧತೆ ಎಂದು ಡಿ.ಕೆ.ಕಾಲೆಳೆದರು.
ಕಾಂಗ್ರೆಸ್ ಸರಕಾರದಲ್ಲಿ ಬಡವರ ಬಿಪಿಎಲ್ ಕಾರ್ಡುಗಳ ರದ್ದು, ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹಣವನ್ನು ವಿತರಣೆಗೆ ಹಣವಿಲ್ಲದೆ ನಿಲ್ಲಿಸಲಾಗಿದೆ ಎಂದು ಆರೋಪಿಸಿದ ಅವರು, ಹೈನುಗಾರಿಕೆ ಕ್ಷೇತ್ರಕ್ಕೂ ಸುಮಾರು 1,000 ಕೋಟಿ ಪ್ರೋತ್ಸಾಹದ ಹಣ ಬಾಕಿ ಉಳಿದಿದೆ ಎಂದು ದೂರಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು?
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದ ವಿಜಯೇಂದ್ರ, ಭೂ ಪರಿವರ್ತನೆಗೆ ಎಕರೆಗೆ 35 ಲಕ್ಷದವರೆಗೆ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ರಾಜೀನಾಮೆಗೆ ಹೋರಾಟ!
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಪ್ರಶ್ನಿಸಿದರು. ನ್ಯಾಯಾಲಯದ ವಿಚಾರಣೆಯ ವ್ಯಾಪ್ತಿಯನ್ನು ಬಿಟ್ಟು ದೆಹಲಿಯಲ್ಲಿ ರಾಜಕೀಯ ನಡೆಸುವುದು ಸರಿಯಲ್ಲ. ಎಸ್ಟಿ ಸಮುದಾಯದ ಅನುದಾನ ದುರ್ಭಳಕೆ ಮಾಡಿಕೊಂಡಿರುವ “ನಾಗೇಂದ್ರ ರಾಜೀನಾಮೆ ನೀಡುವವರೆಗೆ ಸದನದ ಒಳಗೂ ಹೊರಗೂ ಬಿಜೆಪಿ ಹೋರಾಟ ನಡೆಸಲಿದೆ” ಎಂದು ಎಚ್ಚರಿಕೆ ನೀಡಿದರು.
ರೈತರ ಭೂಮಿಗೆ ಕೈಹಾಕಿದರೆ ಸರ್ಕಾರ ಸರ್ವನಾಶ: ವಿಜಯೇಂದ್ರ
ಸಾತನೂರು ಹಾಗೂ ಬಿಡದಿ ಭಾಗದ ರೈತರ ಭೂಮಿ ವಿಚಾರವನ್ನು ಪ್ರಸ್ತಾಪಿಸಿದ ವಿಜಯೇಂದ್ರ, ಸಾತನೂರು ಭಾಗದ ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಡಬಾರದು, ಭವಿಷ್ಯದಲ್ಲಿ ಚಿನ್ನದ ಬೆಲೆ ಬರಲಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಬಿಡದಿ ರೈತರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಜಂಗಮಕೋಟೆ ಭಾಗದಲ್ಲಿ ರೈತರ ಭೂಮಿಗೆ ಕೈಹಾಕಿದರೆ ಸರ್ಕಾರಕ್ಕೆ ತಕ್ಕ ಪರಿಣಾಮ ಎದುರಾಗಲಿದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಗಳೇ “ಕಣ್ಣಿದ್ದೂ ಕುರುಡರಾಗಬೇಡಿ. ಅಧಿಕಾರ ಶಾಶ್ವತವಲ್ಲ. ರೈತರ ಕಣ್ಣೀರು ಹಾಕಿಸಲು ಬಿಜೆಪಿ ಬಿಡುವುದಿಲ್ಲ” ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ನೆಪದಲ್ಲಿ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಬಾರದು. ಅಬಕಾರಿ ಆದಾಯ ಹೆಚ್ಚಿಸುವ ಮೂಲಕ ರಾಜ್ಯವನ್ನು ನಶೆಯ ರಾಜ್ಯವನ್ನಾಗಿ ಮಾಡಲು ಹೊರಡಿರುವ ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಮರಳಲಿದೆ
ಮುಂದೆ ಯಾವಾಗ ಚುನಾವಣೆ ನಡೆದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಿಯಲ್ ಎಸ್ಟೇಟ್ ದಂಧೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವಂತೆ ಕರ್ನಾಟಕದಲ್ಲೂ ಬಿಜೆಪಿ 2028ಕ್ಕೆ ಅಧಿಕಾರಕ್ಕೆ ಬರಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಯಾರೂ ಅಧೀರರಾಗುವ ಅಗತ್ಯವಿಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಭಾರಿ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕ್ಷೇತ್ರದ ಪದವೀಧರ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿ ಗೆಲುವು ಸಾಧಿಸುವಂತೆ ಕರೆ ನೀಡಿದರು.
ಸಂಘಟನೆಯೇ ಬಿಜೆಪಿ ಪಕ್ಷದ ಅಭ್ಯರ್ಥಿ: ಕೆ.ಎಂ.ಸುರೇಶ್
ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಮಾತನಾಡಿ, 2000ರಲ್ಲಿ ತಾವು ಯುವ ಮೋರ್ಚಾ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದು, ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡುವುದು ಬಿಜೆಪಿಯ ಅಜೆಂಡಾ.ಆಗ್ನೇಯ ಪದವೀಧರರ ಕ್ಷೇತ್ರವು ಸುಮಾರು 600 ಕಿ.ಮೀ. ವಿಸ್ತಾರ ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ಹೀಗಾಗಿ ನಾನು ಮಾತ್ರ ಅಭ್ಯರ್ಥಿಯಲ್ಲ; ಬಲಿಷ್ಠ ಸಂಘಟನೆಗ ಕಾರಣವಾಗಿರುವ ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿ ಅಭ್ಯರ್ಥಿಯೇ ಎಂದು ಭಾವಿಸಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅವಳಿ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೀಡುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಲ್ಲರ ಸಹಕಾರ ಹಾಗೂ ಯೋಗದಾನದೊಂದಿಗೆ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.
NICE Road: ನೈಸ್ ಕಂಪನಿಯಿಂದ ಅಕ್ರಮವಾಗಿ 2,000 ಕೋಟಿಗೂ ಹೆಚ್ಚು ಟೋಲ್ ಸಂಗ್ರಹ: ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ ಶಿವಯೋಗಿ ಸ್ವಾಮಿ, ಮಾಜಿ ಸಂಸದ ಮುನಿಸ್ವಾಮಿ, ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್, ಚಿಂತಾಮಣಿಯ ವೇಣುಗೋಪಾಲ್, ತಮ್ಮೇಶ್ ಗೌಡ, ಎಸ್.ವಿ.ರಾಮಚಂದ್ರಗೌಡ, ಮಧುಸೂದನ್, ಕೆ.ವಿ.ನವೀನ್ ಕಿರಣ್, ಕೊಂಡೇನಹಳ್ಳಿ ಮುರಳಿ, ಅಶೋಕ್, ಮಧುಚಂದ್ರ, ಸೀಕಲ್ ಆನಂದ್, ಬಾಲಕುಂಟಹಳ್ಳಿ ಗಂಗಾಧರ್, ನರಸಪ್ಪ, ಲಕ್ಷ್ಮೀನಾರಾಯಣ ಗುಪ್ತ, ಹರಿಸ್ಥಳ ಗಿರೀಶ್, ಕುಡಾ ಮಾಜಿ ಆಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.