ಚಿಕ್ಕಬಳ್ಳಾಪುರ : ಇತ್ತೀಚೆಗೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಯ ಚಾಲಕ ಎಂ.ಬಾಬು ಆತ್ಮಹತ್ಯೆಗೆ ಹೊಸ ತಿರುವು ಸಿಕ್ಕಿದೆ.
ಮೃತ ಬಾಬು ಉದ್ಯೋಗದ ಆಮಿಷವೊಡ್ಡಿ ನನ್ನಿಂದ ಕಂತುಗಳಲ್ಲಿ ೧೮ ಲಕ್ಷ ಹಣಪಡೆದು ಉದ್ಯೋಗ ಕೊಡಿಸದೆ,ಕೊನೆಗೆ ಹಣವೂ ನೀಡದೆ, ಆತ್ಮಹತ್ಯೆ ಮಾಡಿಕೊಂಡು ನನಗೆ ಬಾರೀ ಮೋಸ ಮಾಡಿದ್ದಾನೆ ಎಂದು ಈತನ ದೂರದ ಸಂಬಂಧಿ ನಟೇಶ್ ಎಂಬಾತ ಗಂಭೀರ ಆರೋಪ ಮಾಡಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮೃತ ಬಾಬು ನನಗೆ ದೂರದ ಸಂಬಂಧಿಯಾಗಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ ಚಾಲಕ ನಾಗಿ ಉದ್ಯೋಗ ಮಾಡುತ್ತಿದ್ದು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು.ಈ ವಿಚಾರವನ್ನು ಊರಿಗೆ ಬಂದಾಗಲೆಲ್ಲಾ ನನಗೆ ತಿಳಿಸುತ್ತಿದ್ದನು.ಇದೇ ನಂಬಿಕೆಯಲ್ಲಿ ನನಗೊಂದು ಕೆಲಸಕೊಡಿಸು ಎಂದು ಕೇಳಿದಾಗ ಹಣದ ಪ್ರಸ್ತಾಪ ಮಾಡಿ ನನ್ನಿಂದ ಹಂತಹಂತವಾಗಿ ಪೋನ್‌ಪೇ ರೂಪದಲ್ಲಿ, ನಗದು ರೂಪದಲ್ಲಿ ಐದಾರು ಟ್ರಾನ್ಸಾಕ್ಷನ್‌ಗಳಲ್ಲಿ ೧೮ ಲಕ್ಷ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡು ಮೋಸಮಾಡಿಬಿಟ್ಟ ಎಂದು ದೂರಿದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಹಣ ಪಡೆಯುವುದನ್ನೇ ರೂಢಿ ಮಾಡಿಕೊಂಡಿದ್ದ ಬಾಬು ನಾನು ಉದ್ಯೋಗದ ಪ್ರಸ್ತಾಪ ಮಾಡಿದಾಗಲೆಲ್ಲಾ ಒಂದೊಂದು ಸಬೂಬು ಹೇಳಿ ಸಾಗಹಾಕುತ್ತಿದ್ದ. ಇದಾಗಿ ಕೆಲ ದಿನಗಳು ಸುಮ್ಮನಿದ್ದು ಮತ್ತೆ ಕೆಲಸ ಆಗಿಯೇ ಆಗುತ್ತದೆ,ಅಂತಿಮ ಹಂತದಲ್ಲಿದೆ ಎನ್ನುತ್ತಾ ಹಣಕ್ಕಾಗಿ ಬೇಡಿಕೆಯಿಡುತ್ತಲೇ ಬಂದಿದ್ದ.ಈತನ ಮಾತನ್ನು ನಂಬಿ ಕೇಳಿದಾಗಲೆಲ್ಲಾ ಸಾಲ ಮಾಡಿ ಹಣ ನೀಡಿದ್ದೇನೆ. ನಾನು ನೀಡಿದ ಹಣಕ್ಕೆ ಗ್ಯಾರೆಂಟಿಯಾಗಿ ಖಾಲಿ ಚೆಕ್ ಕೂಡ ನೀಡಿದ್ದಾನೆ. ಹೇಗೋ ಕೆಲಸ ಬಂದರೆ ಸಾಕು ಎಂದು ಜಾತಕ ಪಕ್ಷಿಯಂತೆ ಕಾದಿದ್ದೆ ನನಗೆ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ತಿಳಿದು ಆಘಾತವಾಯಿತು.ಕೂಡಲೇ ಈ ವಿಚಾರ ಎಲ್ಲರಿಗೂ ತಿಳಿಸೋಣ ಎಂದು ಮುಂದಾದಾಗ ಕೆಲವರು ಈಗ ಹೇಳಬೇಡ. ಆಕುಟುಂಬ ದು:ಖದಲ್ಲಿದೆ. ಎಂದು ತಿಳಿಸಿದ ಕಾರಣ ಸುಮ್ಮನ್ನಿದ್ದೆ.ಈಗ ನನಗಾಗಿರುವ ಅನ್ಯಾಯವನ್ನು ತಿಳಿಸಿ ನ್ಯಾಯ ಬೇಡಲು ಮಾಧ್ಯಮದ ಮುಂದೆ ಬಂದಿರುವುದಾಗಿ ತಿಳಿಸಿದರು.
ಈತನ ಮರಣ ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಆದರೆ ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ೧೮ ಲಕ್ಷ ಹಣವನ್ನು ಪಡೆದು ಮೋಸ ಮಾಡಿದ್ದಾನೆ. ನನಗೆ ಆಗಿರುವ ವಂಚನೆಯ ಬಾಬು ಅವರ ತಾಯಿ, ಅವರ ಅಣ್ಣ, ಆತನ ಪತ್ನಿಗೆ ತಿಳಿಸಿದಾಗ ಏನಾದರೂ ಮಾಡೋಣ ಸುಮ್ಮನಿರಿ ಎಂದು ಹೇಳಿದ್ದರು. ಈಗ ಈ ವಿಚಾರ ಪ್ರಸ್ತಾಪ ಮಾಡಿದರೆ ನೀವು ಹಣ ಕೇಳಿದರೆ ನಿಮ್ಮ ಹೆಸರು ಬರೆದಿಟ್ಟು ನಾವೂ ಕೂಡ ಆತ್ಮಹತ್ಯೆ ಮಾಡಿ ಕೊಳ್ಳುತ್ತೇವೆ ಎಂದು ಬೆದರಿಸುತ್ತಾರೆ.ಶಾಸಕ ಪ್ರದೀಪ್ ಈಶ್ವರ್, ಸಂಸದ ಡಾ.ಕೆ.ಸುಧಾಕರ್ ದಯವಿಟ್ಟು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ನಮಗೆ ನ್ಯಾಯಕೊಡಬೇಕು ಎಂದು ಮನವಿ ಮಾಡಿದ ಅವರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎನ್ನುತ್ತಾರೆ.
ಸುದ್ದಿಗೋಷ್ಟಿಯಲ್ಲಿ ನಟೇಶ್ ಅವರ ತಾಯಿ ಮುದ್ದಮ್ಮ ಇದ್ದರು.