ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Flower Prices Crash: ಹೂವಿನ ಬೆಲೆ ಕುಸಿತದಿಂದ ರೈತರು ಕಂಗಾಲು; ಚಿಕ್ಕಬಳ್ಳಾಪುರದಲ್ಲಿ ಬೆಳೆ ನಾಶಕ್ಕಿಳಿದ ಪುಷ್ಪಕೃಷಿಕರು!

ರಾಜ್ಯ ಹೊರ ರಾಜ್ಯಗಳ ರಫ್ತಿಗೆ ಬೇಡಿಕೆಯಿಲ್ಲದ ಕಾರಣ ಮಾರುಕಟ್ಟೆಯಲ್ಲಿ ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಕಾರ್ತಿಕ ಮಾಸದಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ತೋಟಗಳಲ್ಲಿ ಹೂವು ಸಮೃದ್ಧವಾಗಿ ಬೆಳೆದಿದ್ದರೂ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂಬ ನೋವು ರೈತರನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ.

| ಮುನಿರಾಜು ಎಂ ಅರಿಕೆರೆ, ಚಿಕ್ಕಬಳ್ಳಾಪುರ

ರಾಜ್ಯದ ಬೃಹತ್ ಹೂವಿನ ಮಾರುಕಟ್ಟೆ ಎಂಬ ಹಿರಿಮೆಗೆ ಪಾತ್ರವಾಗಿರುವ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ (Flower Prices Crash) ಎತ್ತ ನೋಡಿದರತ್ತ ಹೂವಿನ ಕಸದ ರಾಶಿ ಬೆಟ್ಟದಂತೆ ಬೆಳೆದಿದ್ದು, ಭಾನುವಾರ ಜೆಸಿಬಿ ಮೂಲಕ ವಿಲೇ ಮಾಡುತ್ತಿದ್ದ ದೃಶ್ಯಗಳು ಪುಷ್ಪಕೃಷಿಕರ ಕಣ್ಣೀರ ಕಥೆಗೆ ಸಾಕ್ಷಿಯಾಗಿದ್ದವು.

ಕಳೆದ ಒಂದೆರಡು ತಿಂಗಳಿಂದ ಪುಷ್ಪಕೃಷಿಕರ ಬಾಳಿಗೆ ಅಮಾವಾಸ್ಯೆ ಕವಿದಿದೆ ಎಂದರೆ ಸುಳ್ಳಲ್ಲ. ಒಂದು ಎಕರೆ ಪ್ರದೇಶದಲ್ಲಿ ಹೂ ಬೆಳೆಯಲು ನಾಟಿಯಿಂದ ಮೊದಲಾಗಿ ಹೂ ಕಟಾವಿಗೆ ಬರುವ ತನಕ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ರೈತರಿಗೆ ಸಕಾಲದಲ್ಲಿ ಸರಿಯಾದ ಬೆಲೆಯಿಲ್ಲದೆ ಕಂಗಾಲಾಗುವಂತೆ ಆಗಿದೆ.

ರಾಜ್ಯ ಹೊರ ರಾಜ್ಯಗಳ ರಫ್ತಿಗೆ ಬೇಡಿಕೆಯಿಲ್ಲದ ಕಾರಣ ಮಾರುಕಟ್ಟೆಯಲ್ಲಿ ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಕಾರ್ತಿಕ ಮಾಸದಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ತೋಟಗಳಲ್ಲಿ ಹೂವು ಸಮೃದ್ಧವಾಗಿ ಬೆಳೆದಿದ್ದರೂ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂಬ ನೋವು ರೈತರನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ. ಹೂವು ಕೀಳುವ ಕೂಲಿಯಿರಲಿ, ಗೊಬ್ಬರ, ಔಷಧಿ, ನೀರಾವರಿ ಹಾಗೂ ನಿರ್ವಹಣಾ ವೆಚ್ಚವನ್ನು ಭರಿಸುವುದೂ ಕಷ್ಟವಾಗಿದೆ. ಹೀಗಾಗಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವುದಕ್ಕಿಂತ ತೋಟವನ್ನೇ ನಾಶಪಡಿಸುವ ನಿರ್ಧಾರಕ್ಕೆ ರೈತರು ಬರುತ್ತಿದ್ದಾರೆ.

Flower Prices Crash (2)

ಕಳೆದ ಕೆಲದಿನಗಳ ಹಿಂದೆ ಗುಣಮಟ್ಟದ ಹೂವನ್ನಾಧರಿಸಿ ಕೆ.ಜಿಗೆ 250-300, 250-400ವರೆಗೆ ಇದ್ದ ಧಾರಣೆ ದಿಢೀರ್ ಕುಸಿತ ಕಂಡಿದ್ದು ಹೂವನ್ನು ಕೇಳುವವರೇ ಇಲ್ಲವಾಗಿದೆ. ಕೇಳಿದರೂ 10 ರೂಪಾಯಿಗೋ 20 ರೂಪಾಯಿಗೆ ಕೇಳುತ್ತಾರೆ. ತೋಟಗಳಲ್ಲಿ ಹೂವನ್ನು ಗಿಡಿದಿಂದ ಬಿಡಿಸಿ ಮಾರುಕಟ್ಟೆಗೆ ತರುವ ಕೂಲಿಯೂ ಗಿಟ್ಟದ ಪರಿಣಾಮ ನೊಂದ ರೈತರು 25 ಕೆ.ಜಿ ತೂಗುವ ಬ್ಯಾಗ್ ಸಮೇತ ಹೂವನ್ನು ತಿಪ್ಪೆಗೆ ಸುರಿದು ಬೇಸರದಲ್ಲಿ ಮನೆಗೆ ತೆರಳುತ್ತಿರುವುದರಿಂದ ಬೆಟ್ಟದಂತೆ ಹೂವಿನ ಕಸ ಬೆಳೆದಿದೆ.



ಹೂ ಬೆಳೆಗೆ ವಿಪರೀತ ಕೀಟಬಾಧೆಯಿರುವುದರಿಂದ ಔಷದೋಪಚಾರ ಮಾಡದಿದ್ದರೆ ಬೆಳೆ ಹಾಳಾಗಲಿದೆ. ವಾರದಲ್ಲಿ ಎರಡು ದಿನ ಕೀಟನಾಶಕ ಸಿಂಪಡಣೆ ಮಾಡಲೇಬೇಕಿದೆ. ದುಬಾರಿ ಕೀಟನಾಶಕಗಳ ಭರಾಟೆಯಲ್ಲಿ ಕೆಜಿಗೆ 150 ರಿಂದ 200ರ ಮೇಲೆ ಧಾರಣೆಯಿದ್ದರಷ್ಟೇ ಹಾಕಿದ ಬಂಡವಾಳದೊಂದಿಗೆ ಬೆವರಿಗೆ ತಕ್ಕ ಪ್ರತಿಫಲ ಕಾಣಲು ಸಾಧ್ಯ. ಇತ್ತೀಚೆಗಂತೂ ಹಬ್ಬ ಹರಿದಿನ ಬಿಟ್ಟರೆ ಮದುವೆ ಇತ್ಯಾದಿ ಶುಭ ಕಾರ್ಯಗಳ ದಿನದಲ್ಲಿಯೂ ಕೂಡ ಈ ಬೆಲೆಗೆ ಹೂವು ಮಾರಾಟವಾಗುವುದೇ ದುರ್ಲಭ. ಹೀಗಾಗಿ ಜಿಲ್ಲೆಯ ಪುಷ್ಪ ಕೃಷಿಕರು ಬೇಸತ್ತು ಹೂ ತೋಟಗಳನ್ನು ಸ್ವತಃ ಟ್ರ್ಯಾಕ್ಟರ್ ಬಳಸಿ ನಾಶಮಾಡಲು ಮುಂದಾಗಿದ್ದಾರೆ.

Flower Prices Crash (3)

ರಾಜ್ಯದಲ್ಲಿಯೇ ಅತಿಹೆಚ್ಚು ಪುಷ್ಪಕೃಷಿಕರಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಕ್ಕಬಳ್ಳಾಪುರದಲ್ಲಿ ಫ್ಲೋರಿಕಲ್ಚರ್ ದೊಡ್ಡಮಟ್ಟದಲ್ಲಿ ತಲೆಯೆತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ವಿಜ್ಞಾನಿಗಳ ನೆರವಿನಲ್ಲಿ ಬೆಳೆಯುವ ಮೆರಾಬುಲ್, ಸೆಂಟ್‌ಯೆಲ್ಲೋ, ಗುಲಾಬಿ, ಸೇವಂತಿ, ಐಶ್ವರ್ಯ, ಚೆಂಡುಹೂ ಸೇರಿ ಇತರೆ ತಳಿಯ ಬಗೆಬಗೆಯ ಹೂವಿಗೆ ದೇಶವಿದೇಶಗಳಲ್ಲಿ ಬಾರೀ ಬೇಡಿಕೆಯಿರುವುದು ಸುಳ್ಳಲ್ಲ. ಆದರೆ ಕಳೆದೆರಡು ತಿಂಗಳಿಂದ ಬೇಡಿಕೆ ಕುಸಿದಿದೆ. ಬೆಲೆಯಿಳಿಕೆಗೆ ಆವಕ ಹೆಚ್ಚಿದ್ದೇ ಕಾರಣ ಎಂಬುದನ್ನು ಒಪ್ಪಿದರೂ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರದಲ್ಲಿಯೂ ಕೂಡ ಹೂವಿನ ಮಾರುಕಟ್ಟೆಗಳು ತಲೆಯೆತ್ತಿರುವುದು ಕಾರಣವಾಗಿದೆ ಎನ್ನುವುದು ಕೆಲ ವರ್ತಕರ ಅಭಿಪ್ರಾಯವಾಗಿದೆ.

ಹೌದು, ನದಿ ನಾಲೆಗಳ ಆಶ್ರಯವಿಲ್ಲದ ಜಿಲ್ಲೆಯಲ್ಲಿ ಅಂತರ್ಜಲವನ್ನು ನಂಬಿಕೊಂಡು ಇಲ್ಲಿನ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿರುವ ಪ್ರಗತಿಪರ ರೈತರು ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಬಳಸಿರುವ ತಂತ್ರಜ್ಞಾನ, ನವೀನ ಬೆಳೆಗಳ ಪ್ರಯೋಗ ಮತ್ತು ಹನಿ ನೀರಾವರಿಯ ಸಮರ್ಥ ನಿರ್ವಹಣೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸ್ವಾವಲಂಬನೆಯಲ್ಲಿ ಸತಃ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು, ವಿಜ್ಞಾನಿಗಳಿಗೆ ತಿಳಿವಳಿಕೆ ಕೊಡುವಷ್ಟು ಜ್ಞಾನವಂತರಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.

ಕಷ್ಟಪಟ್ಟು ಬೆಳೆದು ತಂದ ಹೂವಿಗೆ ಬೆಲೆಯಿಲ್ಲದ ಕಾರಣ ನೊಂದ ಪುಷ್ಪಕೃಷಿಕರು ಒಲ್ಲದ ಮನಸ್ಸಿನಲ್ಲೇ ತಿಪ್ಪೆಗೆ ಸುರಿದು ಬಂದ ದಾರಿಗೆ ಸುಂಕವಿಲ್ಲದಂತೆ ತೆರಳುತ್ತಿರುವುದರಿಂದ ದೇವರ ಪಾದ ಸೇರಬೇಕಾದ ಹೂವು ಕಸವಾಗಿ ಕೊಳೆಯುವಂತಾಗಿದೆ. ಇಷ್ಟಾದರೂ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಾಗಲಿ, ಕೃಷಿ ತೋಟಗಾರಿಕೆ ಇಲಾಖೆಯಾಗಲಿ, ಶಾಸಕ ಸಂಸದ, ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಮೊದಲಾದ ಜನಪ್ರತಿನಿಧಿಗಳಾಗಲಿ ಇದಕ್ಕೊಂದು ಪರಿಹಾರ ಕಾಣಿಸದಿರುವುದು ರೈತರ ಬೆನ್ನಿಗೆ ಬರೆಯೆಳೆದಂತಾಗಿದೆ.

Flower Prices Crash (1)

ಲಕ್ಷಾಂತರ ರೂಪಾಯಿ ಸುರಿದು ಬೆಳೆಯುವ ಬೆಲೆಗೆ ಸೂಕ್ತ ಬೆಲೆಯಿಲ್ಲದೆ ಸಂಕಷ್ಟಕ್ಕೊಳಗಾಗಿರುವ ರೈತರ ಸಿಟ್ಟು ರಟ್ಟೆಗೆ ಬರುವ ಮುನ್ನ, ಹೋರಾಟ, ಹರತಾಳ ಎಂದು ಪರ್ಯಾಯ ಮಾರ್ಗ ತುಳಿಯುವ ಮುನ್ನ ಸಂಬಂಧಪಟ್ಟವರು ಇದಕ್ಕೊಂದು ಪರಿಹಾರ ರೂಪಿಸುವುದು ಒಳಿತು. ಬೆಲೆಯೇರಿಕೆ ಇಳಿಕೆಯೆಂಬ ಹಾವು ಏಣಿ ಆಟಕ್ಕೆ ಬ್ರೇಕ್ ಹಾಕಿ, ಸಂಕಷ್ಟಕ್ಕೆ ಒಳಗಾಗುವ ರೈತರಿಗೆ ಬೆಂಬಲ ಬೆಲೆ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗುವಂತೆ ಮಾಡಬೇಕಿದೆ.

ಇಲ್ಲವಾದಲ್ಲಿ ದಿನೇದಿನೇ ಇಳಿಮುಖವಾಗುತ್ತಿರುವ ಕೃಷಿ ತೋಟಗಾರಿಕೆ ಕ್ಷೇತ್ರವು ಜಿಲ್ಲೆಯಲ್ಲಿ ಕಣ್ಮರೆಯಾಗುವ ದಿನಗಳು ದೂರವಿಲ್ಲ ಎಂಬ ಮಾತನ್ನು ಬಹಳ ನೋವಿನಿಂದಲೇ ರೈತ ಸಂಕುಲ ನುಡಿಯುತ್ತಿದೆ. ರೈತರ ಬೆಲೆನಷ್ಟದ ಸಂಕಷ್ಟಕ್ಕೆ ಸರಕಾರವಾಗಲಿ, ಜಿಲ್ಲಾಡಳಿತವಾಗಲಿ ಪರಿಹಾರ ಕಾಣಿಸುವುದೋ ಇಲ್ಲವೋ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.