ಚಿಕ್ಕಬಳ್ಳಾಪುರ, ಜು.31: ನಗರದ ರೈಲು ನಿಲ್ದಾಣದ ಸಮೀಪ ಯುವಕನೊಬ್ಬನ ಶವ ಪತ್ತೆಯಾಗಿದ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ನಗರದ (Chikkaballapur News) ಟಿ.ಜಿ. ಟ್ಯಾಂಕ್ ರಸ್ತೆಯ ನಿವಾಸಿ ಇಸ್ಮಾಯಿಲ್ ಪಾಷಾ (28) ಮೃತ ಯುವಕ ಎಂದು ಗುರುತಿಸಲಾಗಿದೆ. ನಗರದ ರೈಲು ನಿಲ್ದಾಣದ ಹಳಿ ಸಮೀಪ ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿದ್ದು, ತಲೆಗೆ ಭಾರೀ ಗಾಯಗಳಾಗಿರುವುದರಿಂದ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ.
ಮೃತ ಇಸ್ಮಾಯಿಲ್ ಪಾಷಾ ಮೆಕಾನಿಕ್ ಕೆಲಸ ಮಾಡುತ್ತಿದ್ದು, ಕಳೆದ ಆರು–ಏಳು ತಿಂಗಳುಗಳಿಂದ ಪೇಂಟಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದುಬಂದಿದೆ. ಗುರುವಾರ ತಡರಾತ್ರಿ ಈ ಕೃತ್ಯ ನಡೆದಿರಬಹುದೆಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ವೃತ್ತ ನಿರೀಕ್ಷಕ ಶಿವಣ್ಣ ಎಸ್. ಮಾಗಿ, ರೈಲ್ವೆ ಪೊಲೀಸ್ ಉಪನಿರೀಕ್ಷಕ ಶಿವಕುಮಾರ್, ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಮರ್ ಸೇರಿದಂತೆ ರೈಲ್ವೆ ಹಾಗೂ ನಗರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಊಟ ಬಡಿಸುವುದು ವಿಳಂಬವಾಯಿತು ಎಂದು ಅತ್ತಿಗೆಯ ತಲೆಯನ್ನೇ ಕಡಿದ ಮೈದುನ!
ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.