ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಗುರುವಾರ ಸಾವಿನ ಸರಣಿ ಮುಂದುವರಿದಿದ್ದು, ಟಿಪ್ಪರ್ ಡಿಕ್ಕಿಯಾಗಿ ಬೈಕ್‌ನಲ್ಲಿ ಸಾಗುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur Road Accident) ನಗರ ಹೊರವಲಯದ ಅಜ್ಜವಾರ ಗೇಟ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತ ಯುವಕರೆಲ್ಲರೂ ಅಜ್ಜವಾರ ಗ್ರಾಮಕ್ಕೆ ಸೇರಿದವರಾಗಿದ್ದು, ಟಿಪ್ಪರ್ ಚಾಲಕನ ವೇಗ ಮತ್ತು ಅಜಾಗರೂಕ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅರುಣ್ (18), ನಂದೀಶ್ (19), ನರಸಿಂಹ (22) ಮತ್ತು ಮನೋಜ್ (23) ಮೃತರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಕ್ರಿಸ್‌ಮಸ್ ಅಂಗವಾಗಿ ನಗರದ ಸಿಎಸ್ಐ ಚರ್ಚೆಗೆ ಭೇಟಿ ನೀಡಿದ್ದ ಈ ನಾಲ್ವರು ಯುವಕರು, ಹಬ್ಬದ ಖುಷಿಯಲ್ಲಿಯೇ ಊರಿನ ಕಡೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್ ಮೇಲೆ ಹರಿದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಅಸು ನೀಗಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ನಾಲ್ವರು ಯುವಕರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಆಸ್ಪತ್ರೆಯ ಎದುರು ಮೃತರ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೋಲಿಸರು, ತನಿಖೆ ಆರಂಭಿಸಿದ್ದಾರೆ.
ಮೈಸೂರಿನಲ್ಲಿ ಬಲೂನ್‌ಗೆ ಗಾಳಿ ತುಂಬುವಾಗ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಒಬ್ಬ ಸಾವು, ನಾಲ್ವರಿಗೆ ಗಾಯ
ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಜೀಪ್ ಪಲ್ಟಿ; 7 ಮಂದಿಗೆ ಗಂಭೀರ ಗಾಯ
ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ತಿರುವಿನಲ್ಲಿ ಪ್ರವಾಸಿಗರ ಜೀಪ್ ಪಲ್ಟಿಯಾಗಿ 7 ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಬಾಬುಡನ್ ಸ್ವಾಮಿ ದರ್ಗಾಗೆ ಹೋಗಿದ್ದಾಗ ಜೀಪ್ ಪಲ್ಟಿಯಾಗಿ, ಅಪಘಾತ ಸಂಭವಿಸಿದೆ.
ಪುತ್ತೂರಿನಿಂದ ಜೀಪ್‌ನಲ್ಲಿ ಪ್ರವಾಸಕ್ಕೆ 7 ಮಂದಿ ತೆರಳಿದ್ದರು. ಮುಳ್ಳಯ್ಯನಗಿರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಇದರಿಂದಾಗಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.