ಚಿಕ್ಕಬಳ್ಳಾಪುರ: ರಸ್ತೆ ಬದಿ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಆಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿರುವುದು ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದಿದೆ. ನಗರಸಭೆ ಆಯುಕ್ತೆ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರಾಜೀವ್‌ಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ ಬ್ಯಾನರ್ ತೆರವು ಮಾಡಿದ ಹಿನ್ನೆಲೆಯಲ್ಲಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕೈ ಮುಖಂಡನ ವಿರುದ್ಧ ನಗರಸಭೆ ಸಿಬ್ಬಂದಿ ಸೇರಿ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಅಡಿಯೋದಲ್ಲಿ ಏನಿದೆ?
ನಗರಸಭೆ ಆಯುಕ್ತೆಗೆ ಕೈ ಮುಖಂಡ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಮೇಡಂ ಬ್ಯಾನರ್ ತೆಗೆಯಲು ಹೇಳಿದ್ರಾ? ಎಂದು ಕೈ ಮುಖಂಡ ರಾಜೀವ್ ಗೌಡ ಕೇಳುತ್ತಾರೆ. ಈ ವೇಳೆ ಪೌರಾಯುಕ್ತೆ, ಸಾರ್ವಜನಿಕರಿಂದ ದೂರು ಬಂದಿತ್ತು. ರಸ್ತೆ ಮಧ್ಯೆ ಕಟ್ಟಿದ್ದರಿಂದ ಬ್ಯಾನರ್ ತೆಗೆಸಲಾಗಿದೆ ಎನ್ನುತ್ತಾರೆ. ಇದಕ್ಕೆ ಕೋಪಗೊಂಡ ರಾಜೀವ್ ಗೌಡ, ಬ್ಯಾನರ್ ಏನಾದರೂ ಬಿಚ್ಚಿಸಿದರೆ ಬಂದು, ಬೆಂಕಿ ಹಚ್ಚಿಸಿಬಿಡುತ್ತೇನೆ. ನನ್ನ ಒಳ್ಳೆಯತನ ನೋಡಿದ್ದೀರಿ, ಕೆಟ್ಟತನ ನೋಡಿಲ್ಲ. ಬ್ಯಾನರ್ ಕಟ್ಟಿಸಿದರೆ ಸರಿ, ಇಲ್ಲವೆಂದರೆ ತಾಲೂಕು ಬಿಟ್ಟು ಓಡಬೇಕು, ಆ ರೀತಿ ಕೆಲಸ ಕೊಡ್ತೀನಿ. ಜನರನ್ನು ಕರೆತಂದು ಚಪ್ಪಲಿಯಿಂದ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿರುವುದು ಆಡಿಯೋದಲ್ಲಿದೆ.
ಈ ವಿಚಾರವಾಗಿ ಪೌರಾಯುಕ್ತೆ ಅಮೃತಾಗೌಡ ಧರಣಿ ಕೈಗೊಂಡಿದ್ದಾರೆ. ನಗರಸಭೆ ಸಿಬ್ಬಂದಿ, ನೌಕರರು ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದು, ರಾಜೀವ್ ಗೌಡ ಕ್ಷಮೆ ಕೇಳಬೇಕು ಆಗ್ರಹಿಸಿದ್ದಾರೆ. ರಾಜೀವ್ ಗೌಡ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಕಿಡಿ ಕಾರಿದ್ದಾರೆ.
ಶಿಡ್ಲಘಟ್ಟ ಪೌರಾಯಕ್ತೆಗೆ ಕೈ ಮುಖಂಡ ಬೆದರಿಕೆ ಆಡಿಯೋ
ಪಕ್ಷದಿಂದ ರಾಜೀವ್ ಗೌಡ ವಜಾ ಮಾಡಲು ಜೆಡಿಎಸ್ ಆಗ್ರಹ
ಘಟನೆ ಬಗ್ಗೆ ಜೆಡಿಎಸ್ ಆಕ್ರೋಶ ಹೊರಹಾಕಿದ್ದು, ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ವಜಾ ಮಾಡಲು ಆಗ್ರಹಿಸಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಜೋರಾಗಿದೆ. ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಸಿನಿಮಾದ ಪ್ಲೆಕ್ಸ್ʼಗಳನ್ನು ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ.
ಶಿಡ್ಲಘಟ್ಟದ ಕೋಟೆ ಸರ್ಕಲ್ ರಸ್ತೆಗಳಲ್ಲಿ ಅನುಮತಿ ಪಡೆಯದೆ, ಅಕ್ರಮವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದ್ದಕ್ಕೆ, ಪೌರಾಯುಕ್ತೆ ಅಮೃತಗೌಡ ಅವರು, ರಸ್ತೆಯಲ್ಲಿ ಅಪಘಾತ ಹೆಚ್ಚಿದ್ದು, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡ ದೂರವಾಣಿ ಕರೆ ಮಾಡಿ, ಬ್ಯಾನರ್ ತೆಗೆಸಿದವರನ್ನು ‘ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ, ಚಪ್ಪಲಿಯಲ್ಲಿ ಹೊಡೆಸುತ್ತೇನೆ, ಕಾರ್ಯಕರ್ತರನ್ನು ಕರೆಸಿ ದಂಗೆ ಎಬ್ಬಿಸುತ್ತೇನೆ ಎಂದು ಮಹಿಳಾಧಿಕಾರಿಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಾನೆ.
Ballari Firing: ಬಳ್ಳಾರಿ ಗಲಭೆ ಪ್ರಕರಣ ತನಿಖೆ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರೇ ಪೌರಾಯುಕ್ತೆಗೆ ಧಮ್ಕಿ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಗೂಂಡಾ ರಾಜೀವ್ ಗೌಡನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಜರುಗಿಸಿ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ಕೆಪಿಸಿಸಿ ರಾಜ್ಯ ಸಂಯೋಜಕನಾಗಿರುವ ಬೀದಿ ರೌಡಿ ರಾಜೀವ್ ಗೌಡನನ್ನು ಮೊದಲು ಪಕ್ಷದಿಂದ ವಜಾ ಮಾಡಿ ಎಂದು ಜೆಡಿಎಸ್ ಒತ್ತಾಯಿಸಿದೆ.