ಚಿಕ್ಕಬಳ್ಳಾಪುರ: ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವದ (Isha Gramotsavam) ವಿಭಾಗೀಯ ಪಂದ್ಯಗಳನ್ನು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ (Sadhguru Sannidhi) ನಾಳೆ (ಸೆಪ್ಟೆಂಬರ್ 7) ಬೆಳಗ್ಗೆ 8 ಗಂಟೆಯಿಂದ ಸಂಜೆ 6ರವರೆಗೆ ಆಯೋಜಿಸಲಾಗಿದೆ. ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಗಳು ನಡೆಯಲಿದ್ದು, ಸದ್ಗುರುಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ. ಇವರೊಂದಿಗೆ ವಿಶೇಷ ಅತಿಥಿಗಳಾಗಿ ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa) ಮತ್ತು ಜನಪ್ರಿಯ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಭಾಗವಹಿಸಲಿದ್ದಾರೆ.
ವಿಜೇತರು ಮತ್ತು ಉಪವಿಜೇತರು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ 112 ಅಡಿ ಎತ್ತರದ ಆದಿಯೋಗಿಯ ಬಳಿ ನಡೆಯುವ ಮಹಾ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಈ ದಿನ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಆಕರ್ಷಕ ಸ್ಥಳೀಯ ಆಟಗಳು ಸಹ ನಡೆಯಲಿದ್ದು, ಇದು ಗ್ರಾಮೀಣ ಕ್ರೀಡೆ ಮತ್ತು ಸಂಪ್ರದಾಯಗಳ ಬೃಹತ್ ಆಚರಣೆ ಎನಿಸಿಕೊಂಡಿದೆ. ಕಾರ್ಯಕ್ರಮ ಎಲ್ಲರಿಗೂ ಮುಕ್ತವಾಗಿದ್ದು, ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಸದ್ಗುರು ಸನ್ನಿಧಿ ಮತ್ತು ಈಶ ಫೌಂಡೇಶನ್ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯೊಂದಿಗೆ ಸಂಯೋಜಿತವಾಗಿಲ್ಲ : ಸ್ವಾಮಿ ವಿಮೋಹ ಸ್ಪಷ್ಟನೆ
ಈಶ ಗ್ರಾಮೋತ್ಸವದ ಕುರಿತು
2004ರಲ್ಲಿ ಸದ್ಗುರುಗಳಿಂದ ಪ್ರಾರಂಭವಾದ ಈಶ ಗ್ರಾಮೋತ್ಸವ ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಉತ್ಸವವು ಗ್ರಾಮೀಣ ಜನರು ವ್ಯಸನಗಳಿಂದ ಮುಕ್ತರಾಗಲು, ಜಾತಿ, ಮತ ಮತ್ತು ಧಾರ್ಮಿಕ ವಿಭಜನೆಗಳನ್ನು ಮೀರಿ ನಿಲ್ಲಲು ಸಹಾಯ ಮಾಡುತ್ತದೆ ಮತ್ತು ಸಮುದಾಯ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಸಕ್ರಿಯವಾಗಿ ಹೆಚ್ಚಿಸುತ್ತದೆ. ವೃತ್ತಿಪರ ಪಂದ್ಯಾವಳಿಗಳಿಗಿಂತ ಭಿನ್ನವಾಗಿ, ಗ್ರಾಮೋತ್ಸವವು ಗ್ರಾಮೀಣ ಜನಸಾಮಾನ್ಯರಿಗೆ ಆಟವಾಡಲು, ಸ್ಪರ್ಧಿಸಲು ಮತ್ತು ಕ್ರೀಡೆ ಮತ್ತು ಸಂಸ್ಕೃತಿಯ ಐಕ್ಯತೆಯನ್ನು ಆಚರಿಸಲು ವೇದಿಕೆಯನ್ನು ಒದಗಿಸುತ್ತದೆ.