ಗೌರಿಬಿದನೂರು: ಭಾರತೀಯರ ಜೀವನಕ್ರಮವನ್ನು ಪ್ರಭಾವಿಸಿರುವ ದೈವಾರಾಧನೆಯಂತಹ ಧಾರ್ಮಿಕ ಕೈಂಕರ್ಯಗಳು ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಸಾಧ್ಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Union Minister Shobha Karandlaje) ತಿಳಿಸಿದರು.
ತಾಲೂಕಿನ ಮುದುಗೆರೆ ಗ್ರಾಮದ ಶ್ರೀಲಕ್ಷ್ಮೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನಡೆಯುತ್ತಿರುವ ದೇವತಾ ಕಾರ್ಯದಲ್ಲಿ ಪಾಲ್ಗೊಂಡ ನಂತರ ಮಾತನಾಡಿದರು..
ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಿಂದ ಬರುವ ಆದಾಯ ಮತ್ತು ಸಂಪತ್ತನ್ನು ಅನ್ಯ ಧರ್ಮಗಳ ಅಭಿವೃದ್ಧಿಗೆ ಬಳಸಬಾರದು. ಇಲ್ಲಿನ ಹಣವನ್ನು ದೊಡ್ಡ ದೊಡ್ಡ ದೇವಸ್ಥಾನಗಳಿಂದ ಬರುವ ಹೆಚ್ಚಿನ ಆದಾಯವನ್ನು ರಾಜ್ಯದ ಚಿಕ್ಕಪುಟ್ಟ ದೇವಸ್ಥಾನಗಳ ಅಭಿವೃದ್ಧಿಗೆ ಹಾಗೂ ಜೀರ್ಣೋದ್ಧಾರಕ್ಕೆ ಬಳಸಬೇಕು ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಹಾಗೂ ಮುಜರಾಯಿ ಇಲಾಖೆಗೆ ಸಲಹೆ ನೀಡಿದರು.
ಮುದುಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀಲಕ್ಷ್ಮೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನಪ್ರತಿಷ್ಟಾನೆಯನ್ನು ಸರ್ಕಾರ ಹಾಗೂ ಭಕ್ತಾಧಿಗಳ ನೆರವಿನಿಂದ ಅತ್ಯಂತ ಶ್ರದ್ದಾಭಕ್ತಿ ಯಿಂದ ನೆರೆವೇರಿಸಿದ್ದಾರೆ ಎಂದು ತಿಳಿಸಿದ ಅವರು ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಲಿ, ದೇಶ ಸಮೃದ್ದಿಯಾಗುವಂತೆ ಕಾಪಾಡಲಿ ಎಂದು ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿ ದ್ದೇನೆ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಮಹಾಸಂಪ್ರೋಕ್ಷಣೆಯ ನಾಲ್ಕನೆಯ ದಿನವಾದ ಇಂದು ದೇವಾಲಯದಲ್ಲಿ ಮುಂಜಾನೆಯಿಂದಲೆ ಸುಪ್ರಭಾತ, ವಿಶ್ವರೂಪ ದರ್ಶನ, ವಿಶ್ವಕ್ಸೇನಾರಾಧನೆ, ಸ್ವಸ್ತಿ ಪುಣ್ಯಾಹ ವಾಚನೆ, ಅಗ್ನಿ ಪ್ರಣಯನ, ಕುಂಭಾರಾಧನೆ, ಉಕ್ತಹೋಮಗಳು, ಪ್ರಾಣಪ್ರತಿಷ್ಟೆ, ನಿವೇದನೆ, ಸರ್ವಾಗ್ನಿ ಕುಂಡೇಷು, ಮಹಾಪೂರ್ಣಾಹುತಿ, ಪ್ರಥಮಾರಾಧನೆ ಮುಂತಾದ ದೇವತಾ ಕಾರ್ಯಗಳು ನೆರವೇರಿಸಲಾಯಿತು.
ಮಹಾ ಮಂಗಳಾರತಿಯ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಎನ್.ಕುಮಾರ್, ಮಾಜಿ ಶಾಸಕಿ ಎನ್ ಜ್ಯೋತಿರೆಡ್ಡಿ, ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ವರಪ್ರಸಾದ್ ರೆಡ್ಡಿ ,ಅಪರ ಜಿಲ್ಲಾಧಿಕಾರಿ ಭಾಸ್ಕರ್, ತಹಶಿಲ್ದಾರ್ ಅರವಿಂದ್, ಜಿ.ಪಂ ಮಾಜಿ ಅಧ್ಯಕ್ಷ ಎಚ್ವಿ ಮಂಜುನಾಥ್, ತಾಲೂಕು ಪಂಚಾಯತಿ ಇಓ ಜಿಕೆ.ಹೊನ್ನಯ್ಯ,ವಕೀಲರಾದ ಮುದುಗೆರೆ ಹರೀಶ್,ಕೋಚಿಮುಲ್ ಮಾಜಿ ಅಧ್ಯಕ್ಷ ಎಸ್ ರಮೇಶ್, ಬಿಜೆಪಿ ಪಕ್ಷದ ಮುಖಂಡರಾದ ರಮೇಶ್ ರಾವ್,ಕೋಡ್ಲೀರಪ್ಪ, ಮುರುಳೀಧರ್, ಶ್ರೀಧರ್ ಮೂರ್ತಿ,ಎಂಎಸ್ ಆನಂದ್,ನಾಗರಾಜಪ್ಪ,ಚನ್ನಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.