B L Santhosh: ಡಿವಿಜಿ ಆಶಯದ ಸಾಕಾರ ರೂಪ ಇಲ್ಲಿದೆ, ಸಮಾಜದ ಎಲ್ಲ ಮುಖಗಳಿಗೂ ಸತ್ಯ ಸಾಯಿ ಸಂಸ್ಥೆಯ ಪ್ರೀತಿಯ ಸ್ಪರ್ಶವಿದೆ : ಬಿ.ಎಲ್.ಸಂತೋಷ್
ಸತ್ಯ ಸಾಯಿ ಗ್ರಾಮದ ನೆಲದ ಪ್ರತಿ ಇಂಚು, ಇಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು, ಇಲ್ಲಿ ಕಳೆಯುವ ಪ್ರತಿ ಕ್ಷಣದಲ್ಲಿ ಅವರ ಪ್ರೇರಣೆಯ ಅನುಭವ ನಮಗೆ ಆಗುತ್ತಿದೆ. ಇಲ್ಲಿರುವ ಹಲವರ ಬದುಕಿನಲ್ಲಿ ಅವರ ಸ್ಪರ್ಶ, ಆಶೀರ್ವಾದ, ಬೆಂಬಲ ನಮಗೆ ಅರಿವಾಗುತ್ತದೆ. ಸದ್ಗುರು ಪ್ರಭಾವ, ಪ್ರೇರಣೆಯ ಬಗ್ಗೆ ನಾವು ಕೇಳಿ ತಿಳಿಯಬೇಕಿಲ್ಲ, ಅನುಭವಿಸಿಯೇ ಅರಿಯಬಹುದು

-

ಚಿಕ್ಕಬಳ್ಳಾಪುರ : ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವ ಮೂಲಕ ಡಿವಿಜಿ ಅವರ ಕಗ್ಗದ ಸಾಕಾರ ರೂಪದಂತೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮ ಕಾಣಿಸುತ್ತಿದೆ. ಸಮಾಜದ ಎಲ್ಲ ಮುಖಗಳಿಗೂ ಈ ಸಂಸ್ಥೆಯ ಚಟುವಟಿಕೆಗಳು ತೆರೆದುಕೊಳ್ಳುತ್ತಿದ್ದು ಇಲ್ಲಿನ ನೆಲದಲ್ಲಿ ಕೆಲಸ ಮಾಡುವವರಲ್ಲಿ ಸದ್ಗುರುಗಳ ಆಶೀರ್ವಾದ, ಪ್ರೇರಣೆ ಇರುವುದು ಅನುಭವಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B L Santhosh) ಹೇಳಿದರು.
ತಾಲೂಕಿನ ಸತ್ಯ ಸಾಯಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ನವರಾತ್ರಿ ಸಂಭ್ರಮದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಮನದ ಮಾತು ಹಂಚಿಕೊಂಡರು.
"ಸದ್ಗುರುಗಳು ಮತ್ತು ಎಲ್ಲ ಸಾಧಕರಿಗೆ ನಮಸ್ಕರಿಸುತ್ತೇನೆ. ಪ್ರಸ್ತುತ ಎರಡು ಪವಿತ್ರ ಸಂದರ್ಭಗಳಿವೆ. ನವರಾತ್ರಿ ಎನ್ನುವುದು ಭಾರತದ ಬಹುದೊಡ್ಡ ಹಬ್ಬ. ಭಗವಾನ್ ಸತ್ಯ ಸಾಯಿ ಬಾಬಾ ಅವರ ೧೦೦ ನೇ ವರ್ಷದ ಜನ್ಮ ದಿನಾಚರಣೆಯ ಮಧ್ಯದಲ್ಲಿ ನಾವೆಲ್ಲರೂ ಇದ್ದೇವೆ. ಸತ್ಯ ಸಾಯಿ ಗ್ರಾಮದ ನೆಲದ ಪ್ರತಿ ಇಂಚು, ಇಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು, ಇಲ್ಲಿ ಕಳೆಯುವ ಪ್ರತಿ ಕ್ಷಣದಲ್ಲಿ ಅವರ ಪ್ರೇರಣೆಯ ಅನುಭವ ನಮಗೆ ಆಗುತ್ತಿದೆ. ಇಲ್ಲಿರುವ ಹಲವರ ಬದುಕಿನಲ್ಲಿ ಅವರ ಸ್ಪರ್ಶ, ಆಶೀರ್ವಾದ, ಬೆಂಬಲ ನಮಗೆ ಅರಿವಾಗುತ್ತದೆ. ಸದ್ಗುರು ಪ್ರಭಾವ, ಪ್ರೇರಣೆಯ ಬಗ್ಗೆ ನಾವು ಕೇಳಿ ತಿಳಿಯಬೇಕಿಲ್ಲ, ಅನುಭವಿಸಿಯೇ ಅರಿಯಬಹುದು ಎಂದರು.
ಇದನ್ನೂ ಓದಿ: M L A T B Jayachandra: ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು
ಡಿ.ವಿ.ಗುಂಡಪ್ಪ ಅವರು ಕರ್ನಾಟಕದ ಪ್ರಖ್ಯಾತ ಕವಿಗಳು. ಅವರು ಮನುಷ್ಯನ ನಿತ್ಯ ಜೀವನದಲ್ಲಿ ಸ್ಮರಿಸಬಹುದಾದ ಅನೇಕ ಕವನಗಳನ್ನು ಬರೆದಿದ್ದಾರೆ. ಗುಂಡಪ್ಪನವರ (ಮಂಕುತಿಮ್ಮನ ಕಗ್ಗದ) ಪ್ರಸಿದ್ಧ ಸಾಲುಗಳು ಇವು. "ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ". ಗುಂಡಪ್ಪನವರ ಈ ಸಾಲುಗಳು ಇಲ್ಲಿ ಸಾಕಾರವಾಗಿವೆ. ಈ ನಾಲ್ಕು ಸಾಲುಗಳಲ್ಲಿ ಗುಂಡಪ್ಪನವರು ಈ ದೇಶ, ಈ ನಾಗರಿಕತೆ ಯಾವುದಕ್ಕೆ ಪ್ರತೀಕವಾಗಿ ನಿಲ್ಲುತ್ತವೆ ಎನ್ನುವುದನ್ನು ಸಾರಿ ಹೇಳಿದ್ದಾರೆ. ಸದ್ಗುರುಗಳು ಅದೇ ಆಶಯವನ್ನು ಇಲ್ಲಿ ಸಾಕಾರಗೊಳಿಸಿದ್ದಾರೆ, ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
'ಅನುಷ್ಠಾನ ವೇದಾಂತ'ದ ಮೂಲಕ ಅಧ್ಮಾತ್ಮವನ್ನು ಇಲ್ಲಿ ದೈನಂದಿನ ಬದುಕಿನಲ್ಲಿ ಅನುಸರಿಸು ತ್ತಾರೆ. ಇದು ಬಹಳ ಮುಖ್ಯ ವಿಚಾರ. ಧರ್ಮಗ್ರಂಥಗಳ ಆಶಯಗಳು ಇಲ್ಲಿನವರ ನಿತ್ಯದ ಬದುಕಿನಲ್ಲಿ ಅನುಷ್ಠಾನಕ್ಕೆ ಬರುತ್ತಿದೆ ಎಂದು ಬಣ್ಣಿಸಿದರು.
ಡಿವಿಜಿ ಅವರ ಕಗ್ಗದ ಸಾಲುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಬೆಟ್ಟದಲ್ಲಿ ಹುಲ್ಲಾದರೆ ಯಾವುದಾದರೂ ಪ್ರಾಣಿಗೆ ಪ್ರಯೋಜನವಾಗುತ್ತದೆ. ಮನೆಗೆ ಮಲ್ಲಿಗೆಯಂತೆ ಖುಷಿ ತರಬೇಕು. ಬದುಕಿನಲ್ಲಿ ಕಷ್ಟಗಳು ಬಂದರೆ ಕಲ್ಲಿನಂತೆ ಎದೆಗೊಟ್ಟು ನಿಲ್ಲಬೇಕು. ಆದರ್ಶಗಳನ್ನು ಅನುಸರಿಸ ಬೇಕು. ಕೇವಲ ಉಪನ್ಯಾಸಗಳನ್ನು ಮಾಡುತ್ತಾ ಇದ್ದರೆ ಪ್ರಯೋಜನವಿಲ್ಲ. ದೇವರನ್ನು ಪೂಜಿಸುತ್ತಲೇ, ದೇವರೇ ಆಗಿಬಿಡಬೇಕು. ನೀವು ಒಂದು ತತ್ತ್ವವನ್ನು ಅನುಸರಿಸುತ್ತಲೇ ಅದೇ ತತ್ತ್ವಕ್ಕೆ ಮಾದರಿಯಾಗಬೇಕು. ದೀನ ದುರ್ಬಲರಿಗೆ ಸಕ್ಕರೆಯಂತೆ ಸವಿಯಾಗಬೇಕು. ನಿಮಗೆ ಅಧ್ಯಾತ್ಮ ಬೇಕಿದ್ದರೆ ಈ ನಾಲ್ಕು ಸಾಲುಗಳಲ್ಲಿ ಎಲ್ಲವೂ ಇದೆ. "ಎಲ್ಲರೊಳಗೆ ಒಂದಾಗು ಮಂಕುತಿಮ್ಮ" ಎನ್ನುವುದೇ ಅಧ್ಯಾತ್ಮದ ಎತ್ತರ. ನಮ್ಮೆಲ್ಲರಲ್ಲಿ ಭಗವಂತನ ಅಂಶವಿದೆ. ಹೀಗಾಗಿ ನಾವೆಲ್ಲರೂ ಒಂದೇ ಅಂಶದ ಸಹೋದರಿಯರು, ಸಹೋದರರು ಎಂದು ಅರ್ಥವಿದೆ ಎಂದರು.
ಸತ್ಯ ಸಾಯಿ ಗ್ರಾಮದಲ್ಲಿ ಈ ಎಲ್ಲ ಆಶಯಗಳೂ ಕುಡಿಯೊಡೆಯುತ್ತಿರುವುದು ಕಾಣಿಸುತ್ತಿದೆ. ಪ್ರತಿಯೊಂದೂ ತನ್ನನ್ನು ತಾನು ಉಳಿಸಿಕೊಳ್ಳಬೇಕು. ಹೊರಗಿನ ಸಹಾಯವು ಬಹುಕಾಲ ಯಾವುದೇ ಸಂಸ್ಥೆಯನ್ನು ಉಳಿಸಲಾರದು. ಈ ಸಂಸ್ಥೆಯಲ್ಲಿ ನನಗೆ ದೀರ್ಘಕಾಲದ ಮುನ್ನೋಟ ಕಾಣಿಸುತ್ತಿದೆ. ಇಲ್ಲಿ ಓದಿದ ಹಲವು ವಿದ್ಯಾರ್ಥಿಗಳು ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹಲವು ಸಾಧಕರು ಸಹ ಇಲ್ಲಿನ ಹಿಂದಿನ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ. ಇಲ್ಲಿ ಓದಿದವರೇ ಇಲ್ಲಿಯ ಸೇವಾ ಚಟುವಟಿಕೆಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.
'ಕೆರೆಯ ನೀರನು ಕೆರೆಗೆ ಚೆಲ್ಲು' ಎನ್ನುವುದಕ್ಕೂ ಸತ್ಯ ಸಾಯಿ ಗ್ರಾಮವು ಮಾದರಿ. ಸಮಾಜದಿಂದ ಪಡೆದುಕೊಂಡಿದ್ದನ್ನು ಇಲ್ಲಿನ ವಿದ್ಯಾರ್ಥಿಗಳು, ಸಾಧಕರು ಮತ್ತಷ್ಟು ವಾಪಸ್ ಕೊಡುತ್ತಿದ್ದಾರೆ. ಸದ್ಗುರುಗಳ ಪ್ರೇರಣೆ, ಆಶೀರ್ವಾದದಿಂದ ಸಮಾಜದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಒಳ್ಳೆಯದನ್ನು ಮಾಡುವವರಿಗೆ ಭಗವಂತ ಸದಾ ಸಹಕಾರಿಗಳನ್ನು ಕೊಡ್ತಾನೆ. ಮಧ್ಯಾಹ್ನದ ಬಿಸಿಯೂಟ, ಬೆಳಗಿನ ಉಪಾಹಾರ ಇವತ್ತು ದೇಶಾದ್ಯಂತ ಜಾರಿಯಾಗಿದೆ. ಸರ್ಕಾರವು ಅನ್ನ ದಾಸೋಹ ಆರಂಭಿಸುವ ಮೊದಲು ಸಿದ್ದಗಂಗಾ ಮಠ, ಶೃಂಗೇರಿ ಮಠ, ಪೇಜವಾರ, ಚಿತ್ರದುರ್ಗ, ಕೊಪ್ಪಳ ಮಠಗಳು ಆರಂಭಿಸಿದ್ದವು.
ಸತ್ಯ ಸಾಯಿ ಗ್ರಾಮದಲ್ಲಿ ಯಾವುದೇ ಚಟುವಟಿಕೆ ಬಹಳ ಬೇಗ ಆಗುತ್ತಿದೆ. ಆಸ್ಪತ್ರೆಗೆ ಹೋಗಿದ್ದಾಗ ಅಲ್ಲಿನ ವೈದ್ಯರು ಒಂದು ವಿಷಯ ತಿಳಿಸಿದರು. ಒಂದು ಯಂತ್ರವನ್ನು ಇನ್‌ಸ್ಟಾಲ್ ಮಾಡಲು ೪೦ ದಿನ ಆಗಬೇಕಿತ್ತು. ಆದರೆ ಇಲ್ಲಿ ಕೇವಲ ೧೦ ದಿನಗಳಲ್ಲಿ ಅದು ಇನ್‌ಸ್ಟಾಲ್ ಆಗಿ ವೈದ್ಯಕೀಯವಾಗಿ ಉಪಯೋಗಿಸಲೂ ಆರಂಭಿಸಿದ್ದೇವೆ ಎಂದು ವೈದ್ಯರು ಹೇಳಿದರು. ಸದ್ಗುರುಗಳ ಆಶೀರ್ವಾದದ ಶಕ್ತಿಯಿಂದ ಇವೆಲ್ಲವೂ ನಡೆಯುತ್ತಿದೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಭಗವಾನ್ ಸತ್ಯ ಸಾಯಿ ಬಾಬಾ ಅವರ ಆಶೀರ್ವಾದ, ಸ್ಮೃತಿ (ನೆನಪು) ಇದ್ದೇ ಇರುತ್ತದೆ. ಈ ಕ್ಯಾಂಪಸ್‌ಗೆ ಸತ್ಯ ಸಾಯಿ ಬಾಬಾ ೨೯ ಸಲ ಬಂದಿದ್ದರು ಎಂದು ನನ್ನ ಜೊತೆಗಿದ್ದವರು ಹೇಳುತ್ತಿದ್ದರು. ಇಂದಿಗೂ ಅವರು ಇಲ್ಲಿ ಇದ್ದಾರೆ ಎನಿಸುತ್ತಲೇ ಇರುತ್ತದೆ. ಕಳೆದ ಹತ್ತಾರು ವರ್ಷಗಳಿಂದ ಪೂಜ್ಯರ (ಸದ್ಗುರು ಶ್ರೀ ಮಧುಸೂದನ ಸಾಯಿ) ಆಶೀರ್ವಾದವು ಎಲ್ಲರಿಗೂ ಸಿಗುತ್ತಿದೆ. ನಿಧಾನವಾಗಿ ಸಮಾಜದ ಎಲ್ಲ ಮುಖಗಳಿಗೂ ಸಂಸ್ಥೆಯ ಕಾರ್ಯ ಚಟುವಟಿಕೆಗಳು ತೆರೆದುಕೊಳ್ಳುತ್ತಿವೆ.
ನಾನು 'ನಾದ ಗುರುಕುಲಂ' ಉದ್ಘಾಟನೆಯಲ್ಲಿಯೂ ಪಾಲ್ಗೊಂಡಿದ್ದೆ. ಇದು ದೃಶ್ಯ, ಶ್ರಾವ್ಯ, ಶಿಲ್ಪ, ಚಿತ್ರಕಲೆಗಳಿಗೆ ಅತಿದೊಡ್ಡ ಕೇಂದ್ರವಾಗಿ ಬೆಳೆಯಲಿದೆ. ರೇವತಿ ರಾಮಚಂದ್ರನ್ ಅವರ ಮಾರ್ಗ ದರ್ಶನದಲ್ಲಿ ಇಲ್ಲಿನ ಮಕ್ಕಳು ಇಡೀ ದೇಶದಲ್ಲಿ ಹೆಸರು ಮಾಡುತ್ತಿದ್ದಾರೆ.
ನಮಗಿರುವುದು ಎರಡೇ ಕೆಲಸ. ನಮ್ಮೆಲ್ಲರ ಮೇಲೆ ಪೂಜ್ಯರ ಆಶೀರ್ವಾದ ಇರಲಿ ಎಂದು ಕೋರು ವುದು. ಹುಲ್ಲಾಗು ಬೆಟ್ಟದಡಿ ಎನ್ನುವ ರೀತಿಯಲ್ಲಿ ಈ ರೀತಿಯ (ಸೇವಾ) ಚಟುವಟಿಕೆಗಳಿಗೆ ಸಮಯ ಕೊಡುವುದು. ಸಂಪನ್ಮೂಲ, ತಜ್ಞತೆ ಹೀಗೆ ನಮ್ಮಿಂದಾದ ಯಾವುದೇ ರೀತಿಯಲ್ಲಿ ಸದ್ಗುರು ಗಳ ಪ್ರಯತ್ನಕ್ಕೆ ಸಹಕರಿಸುವುದು.
ಇಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಎಲ್ಲದಕ್ಕೂ ಶುಭ ಹಾರೈಸುತ್ತೇನೆ. ನವರಾತ್ರಿಯ ಸಂದರ್ಭದಲ್ಲಿ ತಾಯಿ ದುರ್ಗೆ ಮತ್ತು ಭಗವಾನ್ ಸತ್ಯ ಸಾಯಿ ಬಾಬಾ ಅವರ ಅಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಕೋರುತ್ತೇನೆ ಎಂದು ಹೇಳಿದರು.