ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ಗುರು ಶ್ರೀ ಮಧುಸೂದನ ಸಾಯಿ ಜನ್ಮದಿನ ಸಂಭ್ರಮ; 4 ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗ ಆರಂಭ

SMSIMSR Medical college: ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 47ನೇ ಜನ್ಮದಿನದ ಅಂಗವಾಗಿ ಮುದ್ದೇನಹಳ್ಳಿಯ 'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ'ದಲ್ಲಿ 4 ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗಗಳನ್ನು ಉದ್ಘಾಟಿಸಲಾಗಿದೆ.

ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ): ತಮ್ಮ 47ನೇ ಜನ್ಮದಿನದ ಅಂಗವಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಅವರು ಭಾನುವಾರ 'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ'ದಲ್ಲಿ (ಎಸ್‌ಎಂಎಸ್‌ಐಎಂಎಸ್‌ಆರ್) 4 ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗಗಳನ್ನು (SMSIMSR Medical college) ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ 'ಮೈ ಹ್ಯಾಪಿ ಹೆಲ್ತ್ ಮೊಬೈಲ್ ಆ್ಯಪ್‌ ಲೋಕಾರ್ಪಣೆ ಮಾಡಲಾಯಿತು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ನೂತನ ವೆಬ್‌ಸೈಟ್, ಲೋಗೋ ಹಾಗೂ ಸುವರ್ಣ ಮಹೋತ್ಸವದ ಸ್ಮಾರಕ ನಾಣ್ಯವನ್ನು ಅನಾವರಣಗೊಳಿಸಿದರು.

ಸತ್ಯ ಸಾಯಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, "ಪ್ರೇಮಿಸುವುದು ಹಾಗೂ ಪ್ರೇಮಿಸಲ್ಪಡುವುದೇ ಬದುಕಿನ ಉದ್ದೇಶ. ದೈವಪ್ರೇಮ ಅಪರಿಮಿತವಾದದ್ದು. ಅದು ಎಲ್ಲರ ಬದುಕನ್ನೂ ಪ್ರಕಾಶಮಾನಗೊಳಿಸುತ್ತದೆ. ಸ್ವಾರ್ಥವು ಕ್ಯಾನ್ಸರ್‌ನಂತೆ ಮನುಷ್ಯನನ್ನು ಒಳಗಿನಿಂದಲೇ ನಾಶಗೊಳಿಸುತ್ತದೆ. ಮನುಷ್ಯ ನಿಸ್ವಾರ್ಥಿಯಾದಾಗಲೇ ಅವನೊಳಗಿನ ದೈವತ್ವ ಅನಾವರಣಗೊಳ್ಳುತ್ತದೆ. ತನ್ನನ್ನು ತಾನು ಗೆದ್ದವನು ಇಡೀ ಜಗತ್ತನ್ನೇ ಗೆಲ್ಲಬಲ್ಲ" ಎಂದು ಹೇಳಿದರು.

ಕಬೀರರ ದೋಹವೊಂದನ್ನು ಉಲ್ಲೇಖಿಸಿದ ಅವರು, ದೇವರು ನಾನಾ ನಾಮರೂಪಗಳಲ್ಲಿ ಭಕ್ತರ ಉದ್ಧಾರಕ್ಕಾಗಿ ಅವತರಿಸುತ್ತಾನೆ. ಭಕ್ತಿ ಮತ್ತು ಸಮರ್ಪಣೆ ಒಂದಾದಾಗ ಅಸಾಧ್ಯವೂ ಸಾಧ್ಯವಾಗುತ್ತದೆ. ದೇವರ ಇಚ್ಛೆ ಹಾಗೂ ಮನುಷ್ಯನ ಪ್ರಯತ್ನ ಒಂದಾದಾಗಲೇ ಅದ್ಭುತಗಳು ಸಂಭವಿಸುತ್ತವೆ ಎಂದು ತಿಳಿಸಿದರು.

_SMSIMSR Hospital (1)

ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, "ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಂಕಲ್ಪದಿಂದ ವಿಶ್ವದಾದ್ಯಂತ ಗುರುತಿಸಿಕೊಂಡ ಸಿದ್ಧಭೂಮಿಯೇ ಸತ್ಯಸಾಯಿ ಗ್ರಾಮ. ಅವರು ಇಲ್ಲಿ ನೆಲೆಸಿದ ಬಳಿಕ ಕೇವಲ ಮುದ್ದೇನಹಳ್ಳಿಯಲ್ಲಿ ಮಾತ್ರವೇ ಅಲ್ಲ, ವಿಶ್ವದಾದ್ಯಂತ ಶಿಕ್ಷಣ, ಆರೋಗ್ಯ ಹಾಗೂ ಅನ್ನಸೇವೆಯ ಮೂಲಕ ಪರಿವರ್ತನೆಯ ಹೊಸ ಅಧ್ಯಾಯವೇ ಆರಂಭವಾಗಿದೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯಲ್ಲಿ ಜೀನೋಮಿಕ್ಸ್ ಮತ್ತು ಇಮ್ಯುನೊಥೆರಪಿ, ಹೃದಯ ಮತ್ತು ರಕ್ತನಾಳ ವಿಜ್ಞಾನ, ರೊಬೊಟಿಕ್ ಮೂಳೆ ಮತ್ತು ಕೀಲು ಚಿಕಿತ್ಸೆ ಹಾಗೂ ಕ್ಷೇಮ (ವೆಲ್‌ನೆಸ್) ಮತ್ತು ಲಾಂಜಿಟಿವಿಟಿ ಎಂಬ ನಾಲ್ಕು ನೂತನ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಉದ್ಘಾಟಿಸಲಾಯಿತು.

'ಮೈ ಹ್ಯಾಪಿ ಹೆಲ್ತ್' ಎಐ ಆ್ಯಪ್ ಲೋಕಾರ್ಪಣೆ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕೃತಕ ಬುದ್ಧಿಮತ್ತೆ (ಎಐ) ಆಧರಿತ 'ಮೈ ಹ್ಯಾಪಿ ಹೆಲ್ತ್' ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದರು. ಶಾ ಹ್ಯಾಪಿನೆಸ್ ಫೌಂಡೇಶನ್ ಅಭಿವೃದ್ಧಿಪಡಿಸಿರುವ ಈ ಆ್ಯಪ್ 26 ಭಾಷೆಗಳಲ್ಲಿ ಲಭ್ಯವಿದೆ. ವೈಯಕ್ತಿಕ ಆರೋಗ್ಯ ಮಾಹಿತಿಯ ಆಧಾರದ ಮೇಲೆ ಚಿಕಿತ್ಸಾ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ವೆಬ್‌ಸೈಟ್, ಲಾಂಛನ ಹಾಗೂ ಸ್ಮಾರಕ ನಾಣ್ಯ ಅನಾವರಣ

ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ನೂತನ ಲಾಂಛನ ಹಾಗೂ ವೆಬ್‌ಸೈಟ್ ಅನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಸತ್ಯಸಾಯಿ ಗ್ರಾಮವು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಸ್ಮರಣಾರ್ಥ ವಿಶೇಷ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಕುರಿತು 26 ಮಂದಿ ಬರೆದ ಅನುಭವ ಲೇಖನಗಳ ಸಂಕಲನವಾದ "ಶ್ರೀ ಮಧುಸೂದನ ಸಾಯಿ ಆಸ್ ಐ ನೋ ಹಿಮ್” (ನಾನು ಕಂಡಂತೆ ಶ್ರೀ ಮಧುಸೂದನ ಸಾಯಿ) ಇಂಗ್ಲಿಷ್ ಕೃತಿಯನ್ನೂ ಬಿಡುಗಡೆ ಮಾಡಲಾಯಿತು. 26 ಭಾಷೆಗಳಲ್ಲಿ ಪ್ರಕಟವಾಗಿರುವ ಈ ಕೃತಿಯಲ್ಲಿ ವಿವಿಧ ದೇಶಗಳ ಭಕ್ತರು ಹಾಗೂ ಸೇವಕರ ಅನುಭವಗಳನ್ನು ದಾಖಲಿಸಲಾಗಿದೆ.

ಕಾರ್ಯಕ್ರಮದಲ್ಲಿ ಸುಮಿತ್ ಟಪ್ಪು ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ದೇಶ-ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು, ವೈದ್ಯರು, ಸ್ವಯಂಸೇವಕರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

ಆರೋಗ್ಯ ಕ್ಷೇತ್ರಕ್ಕೆ ನಾಲ್ಕು ಹೊಸ ಆಯಾಮ

ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯಲ್ಲಿ ಆರಂಭಗೊಂಡ ನೂತನ ಸೂಪರ್ ಸ್ಪೆಷಾಲಿಟಿ ವಿಭಾಗಗಳು

  • ಜೀನೋಮಿಕ್ಸ್ ಮತ್ತು ಇಮ್ಯುನೊಥೆರಪಿ
  • ಹೃದಯ ಮತ್ತು ರಕ್ತನಾಳ ವಿಜ್ಞಾನ
  • ರೊಬೊಟಿಕ್ ಮೂಳೆ ಮತ್ತು ಕೀಲು ಚಿಕಿತ್ಸೆ
  • ವೆಲ್‌ನೆಸ್ ಮತ್ತು ಲಾಂಜಿಟಿವಿಟಿ