Chikkaballapur News: ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮುನಿಕೃಷ್ಣ ವಿರೋಧ ಆಯ್ಕೆ
ಎಲ್ಲರಿಗೂ ಅಧಿಕಾರ ದೊರೆತಾಗ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಲಿದೆ ಎನ್ನುವ ದೃಷ್ಟಿಯಿಂದ ಎಲ್ಲಾ ಸದಸ್ಯರು ಒಮ್ಮತದಿಂದ ಒಪ್ಪಿ ಮುನಿಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದ್ದಾರೆ. ಯುವಕರಿಗೆ ಅವಕಾಶ ನೀಡಬೇಕು ಎನ್ನುವ ನಮ್ಮ ಉದ್ದೇಶ ಈ ಮೂಲಕ ಈಡೇರಿದೆ. ಹಿರಿಯರೇ ಸದಾಕಾಲ ಅಧಿಕಾರ ಸ್ಥಾನದಲ್ಲಿ ಇರುವುದು ತರವಲ್ಲ.

ತಾಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಶುಕ್ರವಾರ ಮುನಿಕೃಷ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. -

ಚಿಕ್ಕಬಳ್ಳಾಪುರ : ತಾಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಶುಕ್ರವಾರ ಮುನಿಕೃಷ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಿರಿಯ ಸಹಕಾರಿ ಧುರೀಣ, ಬಿಜೆಪಿ ಮುಖಂಡ ಖಾದಿ ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ವಿ.ನಾಗರಾಜ ಸಮ್ಮುಖದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮುನಿಕೃಷ್ಣ ಅವರನ್ನು ಮುಂದಿನ ಅವಧಿಗೆ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆರಿಸಲಾಯಿತು.
ಈ ವೇಳೆ ಮಾತನಾಡಿದ ಕೆ ವಿ ನಾಗರಾಜ್, ಎಲ್ಲರಿಗೂ ಅಧಿಕಾರ ದೊರೆತಾಗ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಲಿದೆ ಎನ್ನುವ ದೃಷ್ಟಿಯಿಂದ ಎಲ್ಲಾ ಸದಸ್ಯರು ಒಮ್ಮತದಿಂದ ಒಪ್ಪಿ ಮುನಿಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದ್ದಾರೆ. ಯುವಕರಿಗೆ ಅವಕಾಶ ನೀಡಬೇಕು ಎನ್ನುವ ನಮ್ಮ ಉದ್ದೇಶ ಈ ಮೂಲಕ ಈಡೇರಿದೆ. ಹಿರಿಯರೇ ಸದಾಕಾಲ ಅಧಿಕಾರ ಸ್ಥಾನದಲ್ಲಿ ಇರುವುದು ತರವಲ್ಲ. ಹೀಗಾಗಿ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಮುಂದಿರುವುದರಿಂದ ಇದೆ ಪ್ರಗತಿಯನ್ನು ನೂತನ ಅಧ್ಯಕ್ಷರಾದ ಮುನಿಕೃಷ್ಣ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿ ಅಧ್ಯಕ್ಷರಿಗೆ ಶುಭ ಕೋರಿದರು.
ಇದನ್ನೂ ಓದಿ: Chikkaballapur News: ಬೀದಿ ಬದಿ ವ್ಯಾಪಾರಸ್ಥರ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ರಚನೆ
ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮುನಿಕೃಷ್ಣ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ ಈ ಚುನಾವಣೆಯಲ್ಲಿ ಕೆ.ವಿ ನಾಗರಾಜಣ್ಣ ಸೇರಿದಂತೆ ಪಂಚಾಯ್ತಿಯ ಎಲ್ಲಾ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆರಿಸಿದ್ದಾರೆ. ಹೀಗಾಗಿ ಎಲ್ಲಾ ಸದಸ್ಯರಿಗೆ ಮುಖಂಡರಿಗೆ ಸದಾ ಕಾಲ ಚಿರರುಣಿಯಾಗಿರುತ್ತೇನೆ ಎಂದು ಹೇಳಿದರು.
ನನ್ನ ಅವಧಿಯಲ್ಲಿ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು,ಪAಚಾಯಿತಿ ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಗಮನ ಹರಿಸಲಾಗುವುದು. ಕಳೆದ ಎರಡುವರೆ ವರ್ಷದಿಂದ ನಮ್ಮ ಪಂಚಾಯಿತಿಗೆ ಸರ್ಕಾರ ಒಂದೇ ಒಂದು ಮನೆಯನ್ನು ಮಂಜೂರು ಮಾಡಿಲ್ಲ. ನನ್ನ ಅವಧಿಯಲ್ಲಾದರೂ ಮನೆಗಳನ್ನು ಮಂಜೂರು ಮಾಡಿದರೆ ಬಡವರಿಗೆ, ಸಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಿ ಮನೆ ಕಟ್ಟಿಸಿಕೊಳ್ಳಲು ಮುನ್ನಡೆಯು ತ್ತೇನೆ.
ಸಂಸದ ಡಾ.ಕೆ.ಸುಧಾಕರ್ ಅವಧಿಯಲ್ಲಿ ವಿತರಣೆಯಾಗಿರುವ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಜನತೆಗೆ ನೀಡಲಾಗುವುದು. ನಾನಿಂದು ಅವಿರೋಧವಾಗಿ ಆಯ್ಕೆಯಾಗಲು ಆಶೀರ್ವಾದ ಮಾಡಿರುವ ಡಾ.ಕೆ.ಸುಧಾಕರ್, ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರಿಗೆ ಸದಾ ಋಣಿಯಾಗಿರುತ್ತೇನೆ ಎಂದರು.
ಈ ವೇಳೆ ನಿರ್ಗಮಿತ ಅಧ್ಯಕ್ಷ ಶಶಿಕುಮಾರ್,ಸದಸ್ಯರಾದ ಶಿವು,ಮುನಿರಾಜ್, ಉಪಾಧ್ಯಕ್ಷೆ ಶೈಲಜಾ ನಾಗೇಶ್, ಮಾಜಿ ಅಧ್ಯಕ್ಷೆ ಉಷಾ ಮುರಳಿ, ಮುಖಂಡರಾದ ರಂಗಪ್ಪ ಮತ್ತಿತರರು ಇದ್ದರು.