Chikkaballapur News: ಸಾಮಾಜಿಕ ಆರ್ಥಿಕ ಸಮೀಕ್ಷೆಯಲ್ಲಿ ಗೊಲ್ಲ ಎಂದೇ ನಮೂದಿಸಿ: ಕೆ.ಎಂ.ಮುನೇಗೌಡ ಮನವಿ
ಈ ಸಮೀಕ್ಷೆ ಸಮಾಜದ ಭವಿಷ್ಯ ನಿರ್ಮಾಣಕ್ಕೆ ಮುಖ್ಯವಾದ ಹಂತ. ಗೊಲ್ಲರು ಜಾತಿ ಮತ್ತು ಉಪಜಾತಿ ಕಾಲಮ್‌ನಲ್ಲಿ ಗೊಲ್ಲ ಎಂದೇ ನಮೂದಿಸಬೇಕು. ಇದರಿಂದ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸರಿಯಾದ ಸ್ಥಾನ ಮಾನ ದೊರಕುತ್ತದೆ. ಜೊತೆಗೆ ಸರ್ಕಾರದ ವಿವಿಧ ಸೌಲಭ್ಯ ಗಳ ಪ್ರಯೋಜನ ಪಡೆಯಲು ಸಹಕಾರಿಯಾಗಲಿದೆ

ಸಾಮಾಜಿಕ ಆರ್ಥಿಕ ಸಮೀಕ್ಷೆಯಲ್ಲಿ ಗೊಲ್ಲ ಎಂದೇ ನಮೂದಿಸಿ ಎಂದು ಕೆ.ಎಂ.ಮುನೇಗೌಡ ಮನವಿ ಮಾಡಿದರು. -

ಚಿಕ್ಕಬಳ್ಳಾಪುರ : ರಾಜ್ಯಸರ್ಕಾರದಿಂದ 15 ದಿನ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಗೊಲ್ಲರು ಯಾವುದೇ ಗೊಂದಲಕ್ಕೆ ಒಳಗಾಗದೇ ಧರ್ಮ ಕಾಲಮ್‌ನಲ್ಲಿ ಹಿಂದೂ ಎಂದು, ಜಾತಿ ಮತ್ತು ಉಪಜಾತಿಯ ಕಾಲಮ್‌ನಲ್ಲಿ ಗೊಲ್ಲ ಎಂದೇ ನಮೂದಿಸಬೇಕು ಎಂದು ಯಾದವ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವಕೀಲ ಕೆ.ಎಂ.ಮುನೇಗೌಡ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಈ ಸಮೀಕ್ಷೆ ಸಮಾಜದ ಭವಿಷ್ಯ ನಿರ್ಮಾಣಕ್ಕೆ ಮುಖ್ಯವಾದ ಹಂತ. ಗೊಲ್ಲರು ಜಾತಿ ಮತ್ತು ಉಪಜಾತಿ ಕಾಲಮ್‌ನಲ್ಲಿ ಗೊಲ್ಲ ಎಂದೇ ನಮೂದಿಸಬೇಕು. ಇದರಿಂದ ಸಮಾಜಕ್ಕೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸರಿಯಾದ ಸ್ಥಾನ ಮಾನ ದೊರಕುತ್ತದೆ. ಜೊತೆಗೆ ಸರ್ಕಾರದ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆಯಲು ಸಹಕಾರಿಯಾಗಲಿದೆ ಎಂದರು.
ಇದನ್ನೂ ಓದಿ: Chikkaballapur News: ದುರ್ಬಲರ ಬದುಕಿನ ಉಳಿವಿಗಾಗಿ ಒಂದು ಜಗತ್ತು ಒಂದು ಕುಟುಂಬದ ಅಭಿಯಾನ: ಸದ್ಗುರು ಶ್ರೀ ಮಧುಸೂದನ ಸಾಯಿ
ಸಮುದಾಯದವರು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದೇವೆ. ಈ ನಿಟ್ಟಿನಲ್ಲಿ ಸಮೀಕ್ಷೆ ಯಲ್ಲಿ ಸೂಕ್ತ ವಿವರ ನಮೂದಿಸುವುದು ಅವಶ್ಯಕ ಯಾರೂ ಮುಜುಗರ ಪಡುವ ಅಗತ್ಯವಿಲ್ಲ. ಜಾತಿ ಕಾಲಮ್‌ನಲ್ಲಿ ಗೊಲ್ಲ ಎಂದೇ ನಮೂದಿಸಬೇಕು ತಪ್ಪಾಗಿ ಬೇರೆ ಜಾತಿ ನಮೂದಿಸಿದರೆ ಭವಿಷ್ಯದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು.
ಯಾದವ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಕೀಲ ಮುನಿಕೃಷ್ಣಪ್ಪ ರಾಜ್ಯಸಂಘದ ನಿರ್ದೇಶನದಂತೆ ಸ್ಥಳೀಯ ಸಂಘಟನೆಗಳು ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದು, ಜಿಲ್ಲೆಯ ಸಮುದಾಯದವರು ಸಮೀಕ್ಷೆ ನಡೆಸುವ ಅಧಿಕಾರಿಗಳಿಗೆ ಸಹಕಾರ ನೀಡಿ ಸರಿಯಾದ ಮಾಹಿತಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್, ನರಸಪ್ಪ, ರವಿ, ನಾರಾಯಣಸ್ವಾಮಿ ಇದ್ದರು.