ಗೌರಿಬಿದನೂರು: ಶಾಲಾ ವಾಹನಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವ ಜೊತೆಗೆ ಅಗತ್ಯವಾಗಿರುವ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಅಂಜನಕುಮಾರ್ ( Circle Inspector of Police Anjanakumar) ತಿಳಿಸಿದರು.
ಅವರು ನಗರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ಆಡಳಿತ ಮಂಡಲಿ ಮುಖ್ಯಸ್ಥರು, ಬಸ್ ಚಾಲಕರು ಮತ್ತು ಶಾಲಾ ಬಸ್ ಮಾಲೀಕರ ಸಭೆಯಲ್ಲಿ ಮಾತನಾಡಿ, ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲಾ ಮಕ್ಕಳ ಜೀವದ ರಕ್ಷಣೆಯ ಹೊಣೆಯನ್ನು ಚಾಲಕರ ಜೊತೆಗೆ ಶಾಲಾ ಮುಖ್ಯಸ್ಥರು ಹೊರಬೇಕು. ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ಯಬಾರದು ಎಂದು ಎಚ್ಚರಿಸಿದರು.
ಶಾಲಾ ವಾಹನದಲ್ಲಿ ಚಾಲಕರೊಂದಿಗೆ ಕ್ಷೇಮಪಾಲಕರು ಕಡ್ಡಾಯವಾಗಿ ಇರಬೇಕು, ಬಸ್ ಅರ್ಹತಾ ಪ್ರಮಾಣ ಪತ್ರ,ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಚಾಲಕ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು, ಚಾಲಕ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು, ಈ ಸಂಬಂಧ ಪದೇಪದೇ ಖಾತ್ರಿ ಪಡಿಸಿಕೊಳ್ಳಬೇಕೆಂದರು.
ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೊದಲ ಹಂತವಾಗಿ ಸಭೆ ನಡೆಸಿ ಸಂಬಂಧಿಸಿದಂತೆ ಎಲ್ಲರಿಗೂ ಸೂಚನೆ ನೀಡುತ್ತಿದ್ದೇನೆ. ಎರಡನೆ ಹಂತದಲ್ಲಿ ದಿಢೀರ್ ವಾಹನಗಳ ತಪಾಸಣೆ ಮಾಡಿ ,ಲೋಪ ಕಂಡು ಬಂದಲ್ಲಿ ಸ್ಥಳದಲ್ಲೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ, ಶಾಲಾ ಕಾಲೇಜುಗಳ ಸಮೀಪದಲ್ಲಿ ಇಲಾಖೆಯ ಸಿಬ್ಬಂದಿಗಳು ತರಗತಿಗಳು ಬಿಡುವ ಸಮಯದಲ್ಲಿ ಗಸ್ತು ತಿರುಗುವಂತೆ ಮಾಡಲಾಗುವುದು,ಸ್ವತಃ ನಾನೂ ಸಹ ಮಪ್ತಿಯಲ್ಲಿ ಸುಳಿದಾಡುವ ಮೂಲಕ ಕ್ರಮ ತೆಗೆದು ಕೊಳ್ಳುತ್ತೇನೆ ಎಂದು ತಿಳಿಸಿದರು.
ಸಮಸ್ಯೆಗಳನ್ನು ಖುದ್ದು ಅರಿತುಕೊಂಡು ಅಗತ್ಯ ಜಾಗೃತಿ ಮೂಡಿಸಬೇಕು. ರಸ್ತೆ ದಾಟುವಾಗ ಕೆಂಪು ದೀಪವಿದ್ದಾಗಲೂ ಬಸ್ ಓಡಿಸಿಕೊಂಡು ಹೋಗುವುದರಿಂದ ಸಿಗ್ನಲ್ ಜಂಪ್ ಮಾಡಬಹುದು ಎಂಬ ಭಾವನೆ ಮಕ್ಕಳಲ್ಲಿ ಮೂಡುವಂತೆ ಮಾಡಿದಂತಾಗುತ್ತದೆ. ಪೋಷಕರ ಮತ್ತು ಶಿಕ್ಷಕರ ಚಾಲಕರ ನಡವಳಿಕೆಯೂ ಮಕ್ಕಳ ಮೇಲೆ ಪರಿಣಾಮ ಬೀರಿದಂತೆ ಎಚ್ಚರಿಕೆ ವಹಿಸಬೇಕು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಜೀವ ಅಮೂಲ್ಯವಾದುದು, ಆ ಜೀವದ ಹಿಂದೆ ಒಂದು ಕುಟುಂಬದ ಭವಿಷ್ಯ ಹಾಗೂ ಕನಸುಗಳು ಇರುತ್ತದೆ ಎಂಬುದನ್ನು ಅರಿತುಕೊಂಡು ಎಳೆ ಜೀವ ಗಳನ್ನು ಜೋಪಾನ ಕೆಲಸ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ನಗರ ಪೊಲೀಸ್ ಠಾಣೆಯ ಅರಕ್ಷಕ ಉಪ ನಿರೀಕ್ಷಕ ಗೋಪಾಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.