ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಬೃಹತ್‌ ಪ್ರತಿಭಟನೆ; ಕಣ್ಣೀರಿಟ್ಟ ಗ್ರಾಮಸ್ಥರು

ಇರಾನ್ ಮೇಲೆ ಅಮೆರಿಕ-ಇಸ್ರೇಲ್‌ ದಾಳಿ ಹಾಗೂ ಇಸ್ಲಾಂ ಧಾರ್ಮಿಕ ನಾಯಕ ಖಮೇನಿ ಹತ್ಯೆ ಖಂಡಿಸಿ ಅಲೀಪುರ ಗ್ರಾಮಸ್ಥರು ಭಾನುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಾಯಕನ ಸಾವಿಗೆ ಕಣ್ಣೀರಿಟ್ಟಿದ್ದಾರೆ.

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಲೀಪುರದಲ್ಲಿ ಪ್ರತಿಭಟನೆ.

ಗೌರಿಬಿದನೂರು: ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ (Ali Khamenei) ಹತ್ಯೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲೀಪುರ (Alipur Protest) ಗ್ರಾಮದ ಶಿಯಾ ಮುಸ್ಲಿಮರು ಕಂಬನಿ ಮಿಡಿದಿದ್ದಾರೆ. ತಮ್ಮ ಧಾರ್ಮಿಕ ನಾಯಕನ ಹತ್ಯೆ ಖಂಡಿಸಿ ಗ್ರಾಮದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, 3 ದಿನಗಳ ಕಾಲ ʻಬ್ಲಾಕ್ ಡೇʼ (ಕರಾಳ ದಿನ) ಆಚರಣೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಇನ್ನು ಇರಾನ್ ಮೇಲೆ ಅಮೆರಿಕ-ಇಸ್ರೇಲ್‌ ದಾಳಿಯನ್ನು ಖಂಡಿಸಿ ಗ್ರಾಮಸ್ಥರು ಭಾನುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ.

ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಜನ, ಖಮೇನಿ ಫೋಟೋ ಇಟ್ಟುಕೊಂಡು ಕಣ್ಣೀರು ಹಾಕಿದ್ದಾರೆ. ಶಿಯಾ ಸಮುದಾಯ ಅಷ್ಟೇ ಅಲ್ಲದೆ ಇಡೀ ಇರಾನ್‌ನ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ. ಇದಕ್ಕೆ ಅರಬ್ ರಾಷ್ಟ್ರಗಳ ಕುಮ್ಮಕ್ಕು ಇದೆ ಎಂದು ಕಿಡಿಕಾರಿದ್ದಾರೆ.

_alipur protest

ಖಮೇನಿಗೂ ಅಲೀಪುರಕ್ಕೂ ಏನು ನಂಟು?

ಬೇಬಿ ಆಫ್‌ ಇರಾನ್ ಅಂತಲೇ ಕರೆಸಿಕೊಳ್ಳುವ ಅಲೀಪುರ ಗ್ರಾಮಕ್ಕೆ 1986ರಲ್ಲಿ ಖಮೇನಿ ಭೇಟಿ ನೀಡಿದ್ದರು. ಇವರ ಹೆಸರಲ್ಲಿ ಆಸ್ಪತ್ರೆ ಸಹ ಈ ಗ್ರಾಮದಲ್ಲಿದೆ. ಈ ಆಸ್ಪತ್ರೆ ಉದ್ಘಾಟನೆಗಾಗಿ ಗ್ರಾಮಕ್ಕೆ ಖಮೇನಿ ಆಗಮಿಸಿದ್ದರು. ಇಲ್ಲಿನ ಜನರಿಗೆ ಖಮೇನಿ ಎಂದರೆ ಪೂಜ್ಯ ಮತ್ತು ಗೌರವ ಭಾವ. ಹಾಗಾಗಿ ಅವರ ಸಾವಿನ ಸುದ್ದಿಯಿಂದ ಅಲೀಪುರ ಸ್ತಬ್ಧವಾಗಿದೆ.



ಈ ಹಿಂದೆ 'ಬೆಳ್ಳಿಕುಂಟೆ' ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮವು ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ವಲಸೆ ಬಂದವರಿಂದ 'ಅಲೀಪುರ'ವಾಗಿ ರೂಪಾಂತರಗೊಂಡಿತು ಎನ್ನಲಾಗಿದೆ. ಅಲೀಪುರದ ಕೆಲವರು ಧಾರ್ಮಿಕ ಶಿಕ್ಷಣ ಪಡೆಯುವ ಸಲುವಾಗಿ ಇರಾನ್‌ನಲ್ಲಿ ನೆಲೆಸಿದ್ದಾರೆ. ಕೆಲ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಇರಾನ್‌ನಲ್ಲಿ ಯುದ್ಧ ಸಂಭವಿಸಿದಾಗಲೆಲ್ಲಾ ಇಲ್ಲಿನ ಜನರ ಹೃದಯ ಕಲುಕುತ್ತದೆ. ತಮ್ಮವರಿಗೆ ಏನಾಯ್ತೋ ಎನ್ನುವ ಆತಂಕವಾಗುತ್ತದೆ. ಹೀಗಾಗಿಯೇ ಖಮೇನಿ ಹತ್ಯೆಯನ್ನು ಗ್ರಾಮಸ್ಥರು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.