ಚಿಕ್ಕಬಳ್ಳಾಪುರ: ಓಮ್ನಿ ಕಾರು ಹಾಗೂ ಮಿನಿ ಗೂಡ್ಸ್ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur Accident) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ನಡೆದಿದೆ. ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಕೊತ್ತನೂರು ಗೇಟ್ ಸಮೀಪ ದುರ್ಘಟನೆ ನಡೆದಿದ್ದು, ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (30), ರತ್ನಮ್ಮ (45) ಹಾಗೂ ಮುನಿಚೆನ್ನಮ್ಮ (40) ಮೃತಪಟ್ಟಿದ್ದಾರೆ.
ಮಲ್ಲಿಕಾರ್ಜುನಪುರ ಗ್ರಾಮದಿಂದ ಹುಜುಗೂರು ಗ್ರಾಮಕ್ಕೆ ಹೂ ಕಟಾವು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ರಾಮಚಂದ್ರಪ್ಪ ಎಂಬವರ ಕಾರಿಗೆ ಅಪಘಾತ ಸಂಭವಿಸಿದೆ.
ಇನ್ನು ಅಪಘಾತದಲ್ಲಿ ಓಮ್ನಿ ಕಾರಿನ ಚಾಲಕ ಮನೋಜ್ ಸೇರಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಚಾಲಕ ಮನೋಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕ್ಯಾಂಟರ್ ಪಲ್ಟಿ: 12 ಮಂದಿ ಬಲಿ, 16ಕ್ಕೂ ಹೆಚ್ಚು ಮಂದಿಗೆ ಗಾಯ
ಬೆಂಗಳೂರಿನಲ್ಲಿ ಟಿಪ್ಪರ್ ಲಾರಿ ಹರಿದು 5 ವರ್ಷದ ಮಗು ಸಾವು
ಬೆಂಗಳೂರು: ಟಿಪ್ಪರ್ ಲಾರಿ ಹರಿದು 5 ವರ್ಷದ ಮಗು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ಉತ್ತರಹಳ್ಳಿಯ ಸಾವನದರ್ಬಾರ್ ಆಶ್ರಮದ ಬಳಿ ಸಂಭವಿಸಿದೆ. ಭವೀನ್ (5) ಮೃತಪಟ್ಟ ಮಗು.
ತಾಯಿ ಶುಭಲತಾ ಅವರು ತಮ್ಮ ಇಬ್ಬರು ಮಕ್ಕಳ ಪೈಕಿ ಒಬ್ಬ ಮಗನನ್ನು ಶಾಲೆಗೆ ಬಿಟ್ಟು, ಮತ್ತೊಬ್ಬ ಮಗನಾದ ಭವೀನ್‌ನನ್ನು ಶಾಲೆಗೆ ಬಿಡಲು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿಯಾದ ಪರಿಣಾಮ ತಾಯಿ ಮತ್ತು ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅದೇ ವೇಳೆ ಹಿಂಭಾಗದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಭವೀನ್ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಭವೀನ್ ಕೊನೆಯುಸಿರೆಳೆದಿದ್ದಾನೆ.
ಅಪಘಾತದಲ್ಲಿ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತವೆಸಗಿದ ಟಿಪ್ಪರ್ ಚಾಲಕ ಹಾಗೂ ಅಪಘಾತಕ್ಕೆ ಕಾರಣವಾದ ಮತ್ತೊಂದು ದ್ವಿಚಕ್ರ ವಾಹನದ ಸವಾರ ಇಬ್ಬರೂ ವಾಹನಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಮೃತ ಮಗುವಿನ ತಂದೆ ನೀಡಿದ ದೂರಿನನ್ವಯ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಎಸಗಿದ ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.