ಹೊರನಾಡು: ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ (Sri Kshetra Horanadu) ಕ್ಷೇತ್ರದ 5ನೇ ಧರ್ಮಕರ್ತರಾದ ದಿ. ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಮತ್ತು ದಿ. ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿ ಅನಾವರಣ, ಶ್ರೀ ಅನ್ನಪೂರ್ಣಾ ಪಾದಸೇವಾ ಧುರಂಧರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ಗುರುವಾರ ನೆರವೇರಿತು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರು ಪುತ್ಥಳಿ ಅನಾವರಣ ಮಾಡಿದರು. ಬಳಿಕ ಶ್ರೀ ಲಲಿತಾಕಲಾ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮ ನಡೆಯಿತು. ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಅರ್ಚಕ ನಿವಾಸ ಕಟ್ಟಡದ ಗುದ್ದಲಿ ಪೂಜೆಯನ್ನು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಇದೇ ವೇಳೆ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಲ್ಲಿ ಉಚಿತ ಹಂಚುಗಳ ವಿತರಣೆ, ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುಚ್ಛಕ್ತಿ ಸಂಪರ್ಕ ಪತ್ರ ವಿತರಣೆ, ಕೃಷಿ ಸಮೃದ್ಧಿ ಯೋಜನೆಯಲ್ಲಿ ಕೃಷಿ ಉಪಕರಣಗಳ ವಿತರಣೆ ಹಾಗೂ ಮಹಿಳಾ ಯೋಜನೆಯಲ್ಲಿ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಉಗ್ರರ ನಿಗ್ರಹಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

ಚಿಕ್ಕಮಗಳೂರು: ಪಾಕಿಸ್ತಾನದ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಕಳಸ ತಾಲೂಕಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ರಾಜ್ಯಪಾಲರಿದ್ದ ವೇದಿಕೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಈ ಹಣವನ್ನು ಹಸ್ತಾಂತರ ಮಾಡಲಾಗಿದೆ. ಕ್ಷೇತ್ರದ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿ ಅವರು ಚೆಕ್ ಹಸ್ತಾಂತರಿಸಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮೂಲಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಹಾಗೂ ರಾಜ್ ನಾಥ್ ಸಿಂಗ್ ಅವರಿಗೆ ಪತ್ರ ಬರೆದು ಜತೆಗೆ ಶ್ರೀ ಕ್ಷೇತ್ರದಿಂದ 10 ಲಕ್ಷ ರೂ ಚೆಕ್‌ನ್ನು ಪ್ರಸಾದ ರೂಪವಾಗಿ ಭಾರತೀಯ ಸೇನೆಗೆ ನೀಡಲಾಗಿದೆ. ಆಪರೇಷನ್ ಸಿಂದೂರ ಬಳಿಕ ಇಂತಹ ಮಹತ್ತರ ನಡೆಯನ್ನು ಕೈಗೊಂಡಿರುವ ಕ್ಷೇತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Operation Sindoor: ಮತ್ತೆ ಬಾಲ ಬಿಚ್ಚಿದ ಪಾಕ್; ಇಂದೂ 7 ಕಡೆಗಳಲ್ಲಿ ಡ್ರೋನ್ ದಾಳಿ