ಚಿಕ್ಕಮಗಳೂರು: ಅಂದಾಜು 1 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಎರಡು ತಲೆ ಮಣ್ಣು ಮುಕ್ಕ ಹಾವನ್ನು (Red Sand Boa) ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ನಗರದ ವಾಜಪೇಯಿ ಲೇಔಟ್ ಬಡಾವಣೆಯಲ್ಲಿ ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ಮಾಡಿದ ಅಧಿಕಾರಿಗಳು, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರ ಮೂಲದ ವಂಶಿಕೃಷ್ಣ, ಆರೀಫ್ ಬಾಷಾ ಹಾಗೂ ಕರ್ನಾಟಕ ಶಿವಮೊಗ್ಗ ಹಾಗೂ ತುಮಕೂರು ಮೂಲದ ಯತೀಶ್, ಷಫಿ ಹಾಗೂ ಆರೀಫ್ ಭಾಷಾ ಎಂದು ಗುರುತಿಸಲಾಗಿದೆ.
ಬಂಧಿತರಿಂದ 1 ಸ್ವಿಫ್ಟ್ ಕಾರು, 1 ವ್ಯಾಗನರ್ ಕಾರು ಹಾಗೂ 5 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಚನ್ನಗಿರಿಯಲ್ಲಿ ಸಿಕ್ಕ ಹಾವನ್ನು ಚಿಕ್ಕಮಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಐಡಿ ಅರಣ್ಯ ಸಂಚಾರ ದಳದ ಬಲೆಗೆ ಬಿದ್ದಿದ್ದಾರೆ. ಆರೋಪಿ ಯತೀಶ್ ಪ್ರಕರಣ ಕಿಂಗ್ ಪಿನ್ ಆಗಿದ್ದು, ಆಂಧ್ರ ಮೂಲದ ವ್ಯಕ್ತಿಗಳಿಂದ ವಿದೇಶಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ; ಆರೋಪಿಗೆ ತಮಿಳುನಾಡು ನಂಟಿನ ಶಂಕೆ
ಎರಡು ತಲೆ ಹಾವನ್ನು ಮನೆಯಲ್ಲಿ ಇರಿಸಿಕೊಂಡರೆ ಸಂಪತ್ತು ವೃದ್ಧಿಯಾಗುತ್ತದೆ, ಗುಪ್ತನಿಧಿ ಹುಡುಕಾಟ, ಮಾಟ ಮಂತ್ರಕ್ಕೆ ಸಹಾಯಕವಾಗುತ್ತದೆ ಎಂದು ನಂಬಿಸಿ ಇವುಗಳನ್ನು ಕೆಲವರು ಮಾರಾಟ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಈ ಹಾವನ್ನು ಯಾವ ಪ್ರದೇಶದಿಂದ ಹಿಡಿದು ತರಲಾಗಿತ್ತು ಹಾಗೂ ಇದರ ಹಿಂದೆ ದೊಡ್ಡ ಜಾಲವಿದೆಯೇ? ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.