ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ; ಆರೋಪಿಗೆ ತಮಿಳುನಾಡು ನಂಟಿನ ಶಂಕೆ

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಉಂಟಾಗಿರುವ ಭದ್ರತಾ ಲೋಪವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಕರಣದ ಬೆನ್ನತ್ತಿವೆ.

ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ; NIA ತನಿಖೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 12, 2026 10:35 AM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೆಂಗಳೂರು ಭೇಟಿ ವೇಳೆ ಉಂಟಾಗಿರುವ ಭದ್ರತಾ ಲೋಪವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಕರಣದ ಬೆನ್ನತ್ತಿವೆ. ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಆಯೋಜನೆ­ಯಾಗಿದ್ದ ಧ್ಯಾನ ಮಂದಿರ ಉದ್ಘಾಟನೆಗೆಂದು ಪ್ರಧಾನಿ ತೆರಳುವ ಮಾರ್ಗದಲ್ಲಿ ತಾತಗುಣಿ ಸಮೀಪದ ವಡೇರಹಳ್ಳಿ ಗೇಟ್‌ ಬಳಿ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದವು.

ಎನ್‌ಐಎ ಹಾಗೂ ಕೇಂದ್ರ ಗುಪ್ತಚರ ದಳದ ಅಧಿಕಾರಿಗಳು, ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿರುವ ಸ್ಥಳಕ್ಕೆ ಸೋಮವಾರ(ಮೇ.11) ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರು ನಗರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರಿಂದ NIA ಅಧಿಕಾರಿಗಳು ಹೆಚ್ಚಿನ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿರುವ ಎನ್‌ಎಸ್‌ಜಿ ಪಡೆ ಮುಖ್ಯಸ್ಥರು ಹಾಗೂ ಎಸ್‌ಪಿಜಿ ಅಧಿಕಾರಿಗಳು ರಾಜ್ಯ ಪೊಲೀಸ್‌ ಇಲಾಖೆಯಿಂದ ತನಿಖಾ ಪ್ರಗತಿಯ ವರದಿ ಕೇಳಿದ್ದಾರೆ.

ಕನಕಪುರ ರಸ್ತೆಯ ಪ್ರವೇಶ ಮತ್ತು ನಿರ್ಗಮನ ಭಾಗದ ಸಿ.ಸಿ ಕ್ಯಾಮೆರಾಗಳಲ್ಲಿಸೆರೆಯಾಗಿರುವ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ರಾಜ್ಯದ ಪೊಲೀಸರು ಮತ್ತು NIA ಅಧಿಕಾರಿಗಳು, ಜಿಲೆಟಿನ್‌ ಕಡ್ಡಿ ಪತ್ತೆಯಾದ ಸ್ಥಳದ ಆಸುಪಾಸಿನ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಸ್ಥಳೀಯ ಕಲ್ಲುಕ್ವಾರಿ ಮಾಲೀಕರು ಮತ್ತು ಕ್ವಾರಿ ಕಾರ್ಮಿಕರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ವೇಳೆ, ಕಾರ್ಯಕ್ರಮದ ಸ್ಥಳದಲ್ಲಿ ಬಾಂಬ್‌ ಸ್ಪೋಟಿಸುವುದಾಗಿ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿ ಲೋಹಿತ್‌ನ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ದೇಶಾದ್ಯಂತ ಜಾರಿಯಾಗುತ್ತಾ ಆನ್‌ಲೈನ್‌ ಕ್ಲಾಸ್‌? ಪ್ರಧಾನಿ ಮೋದಿ ಹೇಳಿದ್ದೇನು?

ಇದೀಗ ತಮಿಳುನಾಡಿನಿಂದ ಜಿಲೆಟಿನ್‌ ಕಡ್ಡಿಗಳನ್ನು ತಂದು ಪ್ರಧಾನಿ ಸಾಗುವ ಮಾರ್ಗದ ರಸ್ತೆ ಬಳಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯದ ವಿಶೇಷ ಪೊಲೀಸ್‌ ತಂಡವು ತಮಿಳುನಾಡಿಗೆ ತೆರಳಿ ತನಿಖೆ ಆರಂಭಿಸಿದೆ. ರಾಮನಗರ ಡಿವೈಎಸ್‌ಪಿ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಕೆಲ ಸ್ಫೋಟಕ ಸಂಗತಿಗಳು ಬಯಲಾಗಿವೆ. ಜಿಲೆಟಿನ್‌ ಕಡ್ಡಿಗಳಿದ್ದ ಪೆಟ್ಟಿಗೆಯನ್ನು ಪ್ರಧಾನಿ ಸಾಗುವ ಮಾರ್ಗದಲ್ಲಿ ಉದ್ದೇಶಪೂರ್ವಕವಾಗಿ ಇಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.