ಬೆಂಗಳೂರು, ಮೇ 6: ಹಲವು ನಾಟಕೀಯ ಬೆಳವಣಿಗೆ, ಮರು ಮತ ಎಣಿಕೆ ಬಳಿಕ (Sringeri MLA Row) ಶೃಂಗೇರಿ ಶಾಸಕರಾಗಿ ಬಿಜೆಪಿಯ ಡಿ.ಎನ್. ಜೀವರಾಜ್ (DN Jeevaraj) ಆಯ್ಕೆಯಾಗಿದ್ದಾರೆ. ವಿಧಾನಸಭೆ ಚುನಾವಣೆ ನಡೆದು ಸುಮಾರು ಎರಡೂವರೆ ವರ್ಷ ಕಳೆದು ಇದೀಗ ಶಾಸಕರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸತತ ಕಾನೂನು ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಜೀವರಾಜ್ ಬುಧವಾರ (ಮೇ 6) ಶೃಂಗೇರಿ ಶಾರದಾಂಬೆ ಹೆಸರಲ್ಲಿ ವಿಧಾನ ಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಬಳಿಕ ಉಂಟಾದ ರಾಜಕೀಯ ಗದ್ದಲದಿಂದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಪ್ರಮಾಣ ವಚನ ಬೋಧಿಸಲು ವಿಳಂಬ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪಿಸಿತ್ತು. ಇದೇ ಕಾರಣಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸ್ಪೀಕರ್ ಲಭ್ಯವಿಲ್ಲದಿದ್ದರೆ ತಾವೇ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಯು.ಟಿ. ಖಾದರ್ ಪ್ರಮಾಣ ವಚನ ಬೋಧಿಸಿದರು. ಆ ಮೂಲಕ ಶಾಸಕತ್ವ ಗೊಂದಲ ಸದ್ಯಕ್ಕೆ ನಿವಾರಣೆಯಾದಂತಾಗಿದೆ.
ಬಿಜೆಪಿ ನಾಯಕ ಆರ್. ಅಶೋಕ್ ಅವರ ಎಕ್ಸ್ ಪೋಸ್ಟ್:
ಪ್ರಕರಣದ ಹಿನ್ನೆಲೆ
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ 39,171 ಮತಗಳನ್ನು ಪಡೆದು ಗೆದ್ದಿದ್ದರು. ಜೀವರಾಜ್ 58,970 ಮತಗಳನ್ನು ಪಡೆದು 201 ಮತಗಳ ಅಂತರದಿಂದ ಸೋತಿದ್ದರು. ಈ ಫಲಿತಾಂಶ ಪ್ರಶ್ನಿಸಿ ಜೀವರಾಜ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 6ರಂದು ಹೈಕೋರ್ಟ್ 279 ತಿರಸ್ಕೃತ ಅಂಚೆ ಮತಪತ್ರಗಳ ಮರುಪರಿಶೀಲನೆ ಹಾಗೂ ಎಲ್ಲ ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು. ಅದರಂತೆ ಮೇ 2ರಂದು ಮರುಎಣಿಕೆ ನಡೆದಿತ್ತು.
ಅಂಚೆ ಮತ ತಿರುಚಿದ ಆರೋಪ; ಶೃಂಗೇರಿ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ಮೊದಲ ಎಣಿಕೆಯಲ್ಲಿ 1,822 ಅಂಚೆ ಮತಗಳಲ್ಲಿ ಜೀವರಾಜ್ 692 ಮತಗಳನ್ನು ಪಡೆದರೆ, ರಾಜೇಗೌಡ 569 ಮತಗಳನ್ನು ಪಡೆದಿದ್ದರು. ಮರುಪರಿಶೀಲನೆ ಮತ್ತು ಮರುಎಣಿಕೆಯ ಬಳಿಕ ಜೀವರಾಜ್ ಮತಗಳು 690 ಆಗಿದ್ದು, ರಾಜೇಗೌಡ ಅವರ ಮತಗಳು 314ಕ್ಕೆ ಇಳಿಯಿತು. 255 ಮತ ಕಡಿತವಾಗಿತ್ತು. ಇದರಿಂದ ಹೆಚ್ಚುವರಿ 52 ಮತ ಪಡೆದ ಜೀವರಾಜ್ ಅವರನ್ನು ವಿಜೇತರೆಂದು ಘೋಷಿಸಲಾಯಿತು.
ಇಲ್ಲಿಗೆ ಮುಗಿದಿಲ್ಲ...
ಸದ್ಯ ಈ ಪ್ರಕರಣ ಇಲ್ಲಿಗೇ ಮುಗಿದಿಲ್ಲ. ರಾಜೇಗೌಡ ಪರ ಮತ ಎಣಿಕೆ ಏಜೆಂಟ್ ಸುಧೀರ್ ಕುಮಾರ್ ಮುರೊಳ್ಳಿ ನೀಡಿದ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ಪಟ್ಟಣ ಪೊಲೀಸರು ಜೀವರಾಜ್, ಅಧಿಕಾರಿಗಳು ಸೇರಿ ಹಲವರ ವಿರುದ್ಧ ಕೇಸ್ ದಾಖಲಿಸಿದ್ದರು. ಮರುಎಣಿಕೆ ವೇಳೆ ರಾಜೇಗೌಡ ಪರ ಇರುವ 255 ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಡಿ.ಎನ್.ಜೀವರಾಜ್ ವಿರುದ್ಧ ದಾಖಲಾದ ಪ್ರಕರಣದ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠ, ʼʼರಾಜಕೀಯ ಒತ್ತಡದಲ್ಲಿ ಪೊಲೀಸರು ದಾಖಲಿಸಬಾರದು. ಇದು ಕಾನೂನು ಪ್ರಕ್ರಿಯೆಯ ದುರುಪಯೋಗʼʼ ಎಂದು ಅಭಿಪ್ರಾಯಪಟ್ಟು ಮುಂದಿನ ವಿಚಾರಣೆ ಮೇ 7ಕ್ಕೆ ಮುಂದೂಡಿತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.